

| ಶ್ವೇತಾ ನಾಯ್ಕ್
ಕೆಮಿಸ್ಟ್ರಿ ಆಫ್ ಕರಿಯಪ್ಪ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದ ಸಂಜನಾ ಆನಂದ್ ಮೊದಲ ಚಿತ್ರದಲ್ಲೇ ಭರವಸೆ ಮೂಡಿಸಿದ್ದರು. ಸಿನಿಮಾದೊಂದಿಗೆ ಇವರ ಪಾತ್ರವೂ ಅಷ್ಟೇ ಫೇಮಸ್ ಆಗಿತ್ತು. ಅಲ್ಲಿಂದ ದೊಡ್ಡ ದೊಡ್ಡ ಸ್ಟಾರ್ ನಟರ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವ ಅವಕಾಶ ಸಿಕ್ಕಿದ್ದರೂ ಯಾವ ಸಿನಿಮಾಗಳೂ ಸದ್ಯ ಬಿಡುಗಡೆ ಭಾಗ್ಯ ಕಂಡಿಲ್ಲ. ಕಾರಣ ಲಾಕ್ಡೌನ್. ಇನ್ನೇನು ಎಲ್ಲ ಸಿನಿಮಾ ಬಿಡುಗಡೆ ಮಾಡಬೇಕು ಅಂದುಕೊಳ್ಳುವಷ್ಟರಲ್ಲಿ ಕರೊನಾ ಕಡಿವಾಣ ಹಾಕಿತ್ತು. 3 ಸಿನಿಮಾಗಳ ಬಿಡುಗಡೆಗೆ ಕಾಯುತ್ತಿರುವ ಸಂಜನಾ ಮನೆಯಲ್ಲೇ ಟಿವಿ ನೋಡುತ್ತಾ ಟೈಂಪಾಸ್ ಮಾಡುತ್ತಿದ್ದಾರೆ. ಮನೆಯಲ್ಲಿದ್ದೇ ದಿನದೂಡುವುದು ಬೇಜಾರು ಎನ್ನುವ ಅವರು. ತಮ್ಮ ವೃತ್ತಿಜೀವನದ ಬಗ್ಗೆ ವಿಜಯವಾಣಿಯೊಂದಿಗೆ ಹೇಳಿಕೊಂಡಿದ್ದಾರೆ.
ಮುಹೂರ್ತ ಮುಗಿದಿತ್ತು: ‘ಇಷ್ಟೊತ್ತಿಗಾಗಲೇ ನನ್ನ ಅಭಿನಯದ ಮೂರು ಸಿನಿಮಾಗಳು ರಿಲೀಸ್ ಆಗಿರಬೇಕಿತ್ತು. ಆದರೆ, ಕರೊನಾದಿಂದ ಎಲ್ಲವೂ ಉಲ್ಟಾ ಆಗಿದೆ’ ಎನ್ನುವ ಸಂಜನಾ, ಹೊಸ ಚಿತ್ರವೊಂದರಲ್ಲಿ ನಟಿಸಬೇಕು ಎನ್ನುವಷ್ಟರಲ್ಲಿ ಲಾಕ್ಡೌನ್ ಘೋಷಣೆಯಾಯಿತಂತೆ. ಅದು ಎ.ಪಿ.ಅರ್ಜುನ್ ನಿರ್ವಣದ ‘ಅದ್ದೂರಿ ಲವರ್’. ‘ಮುಹೂರ್ತ ಮುಗಿಸಿ ಇನ್ನೇನು ಶೂಟಿಂಗ್ ಪ್ರಾರಂಭಿಸಬೇಕು ಅಂದುಕೊಳ್ಳುವಷ್ಟರಲ್ಲಿ ಹೀಗೆಲ್ಲಾ ಆಯಿತು. ಸದ್ಯ ಉತ್ತಮ ಕಥೆಗಾಗಿ ಕಾಯುತ್ತಿದ್ದೇನೆ. ಪಾತ್ರಕ್ಕೆ ತೂಕವಿರುವ ಉತ್ತಮ ಚಿತ್ರದ ನಿರೀಕ್ಷೆಯಲ್ಲಿದ್ದೇನೆ. ಯಾವ ಕಥೆಯನ್ನೂ ಕೇಳಿಲ್ಲ. ಲಾಕ್ಡೌನ್ ಮುಗಿದ ಮೇಲೆ ಕಥೆ ಕೇಳಿ ಫೈನಲ್ ಮಾಡುತ್ತೇನೆ’ ಎನ್ನುತ್ತಾರೆ.
ಒಂದಕ್ಕಿಂತ ಒಂದು ಭಿನ್ನ ‘ಸಲಗ’, ‘ಶೋಕಿವಾಲಾ’ ಮತ್ತು ‘ವಿಂಡೋಸೀಟ್’ ಸಿನಿಮಾಗಳಲ್ಲದೆ, ‘ಹನಿಮೂನ್’ ಎಂಬ ವೆಬ್ ಸಿರೀಸ್ನಲ್ಲೂ ಕಾಣಿಸಿಕೊಂಡಿರುವ ಸಂಜನಾ, ಈ ಎಲ್ಲ ಚಿತ್ರಗಳ ಪಾತ್ರಗಳೂ ಒಂದಕ್ಕಿಂತ ಒಂದು ಭಿನ್ನ ಎನ್ನುತ್ತಾರೆ. ‘ನನ್ನ ಜೀವನಕ್ಕೆ ಯಾವ ಪಾತ್ರವೂ ರಿಲೇಟ್ ಆಗಲ್ಲ. ‘ಸಲಗ’ದಲ್ಲಿ ಲಾಂಗ್ ಹಿಡಿಯೋ ಡಿಫರೆಂಟ್ ಪಾತ್ರವಾದರೆ, ‘ಶೋಕಿವಾಲಾ’ದಲ್ಲಿ ಹಳ್ಳಿ ಹುಡುಗಿಯಾಗಿದ್ದೇನೆ. ‘ಹನಿಮೂನ್’ನಲ್ಲಿ ಆಗಷ್ಟೇ ಮದುವೆಯಾದ ಬೆಂಗಳೂರಿನ ಹೆಣ್ಣು ಮಗಳ ಪಾತ್ರ’ ಎಂದು ವಿವರಿಸುತ್ತಾರೆ.
ಈ ಲಾಕ್ಡೌನ್ ಒಂದರ್ಥದಲ್ಲಿ ಒಳ್ಳೆಯದನ್ನ ಮಾಡಿದೆ ಎನ್ನುವ ಅವರು, ‘ಕರೊನಾ ಎಷ್ಟೆಲ್ಲಾ ಕಲಿಸಿದೆ ನಮಗೆ. ಒಳ್ಳೆಯ ಆಹಾರ, ಆರೋಗ್ಯ, ಫ್ಯಾಮಿಲಿ ಎಷ್ಟೆಲ್ಲಾ ಮಿಸ್ ಮಾಡಿಕೊಳ್ಳುತ್ತಿದ್ವಿ. ಎಲ್ಲವನ್ನೂ ಮರಳಿ ನೀಡಿದೆ ಇದೊಂದು ವೈರಸ್. ಶೂಟಿಂಗ್ ಮಧ್ಯೆ ಕುಟುಂಬದವರೊಂದಿಗೆ ಕಳೆಯೋಕೆ ಟೈಮ್ ಸಿಗುತ್ತಿರಲಿಲ್ಲ. ಸೆಲ್ಪ್ಕೇರ್ ಮಾಡಿಕೊಳ್ಳುತ್ತಿರಲಿಲ್ಲ. ಕೆಲಸವಿಲ್ಲ ಅನ್ನೋದು ಬಿಟ್ಟರೆ ಕರೊನಾ ಒಂದು ರೀತಿ ಒಳ್ಳೆಯದನ್ನೇ ಮಾಡಿದೆ. ಸಮಯದ ಮಹತ್ವ ತಿಳಿಸಿದೆ’ ಎನ್ನುತ್ತಾರೆ.
ಜೀವವಿದ್ದರೆ ಪಾತ್ರ ಮಾಡಬಹುದು
‘ನಾವಲ್ಲದೆ ಇರುವುದನ್ನು ಸಿನಿಮಾ ಮೂಲಕ, ಪಾತ್ರಗಳ ಮೂಲಕ ಕಲಿಯುತ್ತೇವೆ. ಪ್ರತಿಯೊಂದು ಪಾತ್ರಗಳೂ ಹೊಸತು. ಪ್ರತಿ ಪಾತ್ರಗಳೂ ಹೊಸತನ್ನು ಕಲಿಸಿವೆ. ಒಂದು ಪಾತ್ರದೊಳಗೆ ಮುಳುಗಿ ನಾವಾಗಿ ಅಭಿನಯಿಸುವುದು ಕಷ್ಟ. ಅದನ್ನು ಸಿನಿಮಾಗಳ ಮೂಲಕ ಕಟ್ಟಿಕೊಡುತ್ತೇವೆ. ಆದ್ದರಿಂದ ಶೂಟಿಂಗ್ ಸೆಟ್ ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಈಗಷ್ಟೇ ಇಂಡಸ್ಟ್ರಿಗೆ ಕಾಲಿಡುತ್ತಿದ್ದೆ. ಒಂದು ತುಡಿತ ಇತ್ತು. ಅಷ್ಟೊತ್ತಿಗಾಗಲೇ ಹೀಗೆಲ್ಲ ಆಯ್ತು. ಬೇಜಾರೇನು ಇಲ್ಲ. ಜೀವವಿದ್ದರೆ ಇನ್ನಷ್ಟು ಪಾತ್ರ ಮಾಡಬಹುದು. ಆದರೆ, ಕೆಲಸವಿಲ್ಲದೆ ಮನೆಯಲ್ಲೇ ಕೂರೋದು ಬೋರ್’ ಅಂತಾರೆ ಸಂಜನಾ.
ಕನ್ನಡದಲ್ಲಿ ಯಾರೂ ನಟನೆಯಲ್ಲಿ ಕಡಿಮೆ ಇಲ್ಲ. ಒಬ್ಬರಿಗಿಂತ ಒಬ್ಬರನ್ನು ಮೀರಿಸುತ್ತಾರೆ. ನಾನು ಪುನೀತ್ ರಾಜ್ಕುಮಾರ್ ಅವರ ಬಿಗ್ ಫ್ಯಾನ್. ಅವರ ಎಲ್ಲ ಸಿನಿಮಾ ನೋಡಿಕೊಂಡು ಬೆಳೆದಿದ್ದೇನೆ. ಅವರ ಜತೆ ನಟಿಸಬೇಕು ಅನ್ನೋದು ಕನಸು. | ಸಂಜನಾ ಆನಂದ್ ನಟಿ