Middle Class Ramayana Review; ಕಲಿಯುಗ ಕೃಷ್ಣನ ಮಿಡಲ್​ ಕ್ಲಾಸ್​ ರಾಮಾಯಣ

ASC
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು:

ನಂದಿ ಕೃಷ್ಣ (ವಿನು ಗೌಡ) ಡಿಗ್ರೀ ಓದುವಾಗಲೇ, ಅವರಪ್ಪ ತೀರಿಕೊಂಡಿರುತ್ತಾರೆ. ಹೀಗಾಗಿ ಓದು ಬಿಟ್ಟು ಜಿಮ್​ನಲ್ಲಿ ಕೆಲಸಕ್ಕೆ ಸೇರುತ್ತಾನೆ. ಕ್ರಮೇಣ ತಾನೇ ಟ್ರೇನರ್​ ಆಗುತ್ತಾನೆ. ಕೆಲ ವರ್ಷ ಕಳೆದಂತೆ ತಾನೇ ಸ್ವಂತ ಜಿಮ್​ ಆರಂಭಿಸಲು ಪ್ಲ್ಯಾನ್​​ ಮಾಡುತ್ತಾನೆ. ಅದಕ್ಕೆ ಅವನಿಗೆ 50 ಲಕ್ಷ ರೂ. ಬೇಕಿರುತ್ತದೆ. ಮತ್ತೊಂದೆಡೆ ತಾಯಿ ಭಾಗ್ಯಮ್ಮಗೆ (ವೀಣಾ ಸುಂದರ್​) ಮಗನ ಮದುವೆ ಚಿಂತೆ. ಎಷ್ಟೇ ಹೆಣ್ಣು ಹುಡುಕಿದರೂ ಆಸ್ತಿ-ಅಂತಸ್ತಿಲ್ಲ, ಹುಡುಗ ಓದಿಲ್ಲ ಎನ್ನುತ್ತಿರುತ್ತಾರೆ.

ಅದೇ ಸಮಯದಲ್ಲಿ ಭಾಗ್ಯಮ್ಮಳ ಶ್ರೀಮಂತ ಗೆಳತಿಯ ಮಗಳು ಸೌಂದರ್ಯಗೂ (ಮೋತಾ) ಹುಡುಗನನ್ನು ನೋಡುತ್ತಿರುವ ವಿಷಯ ಗೊತ್ತಾಗುತ್ತದೆ. ಸಾಫ್ಟ್​ವೇರ್​ ಇಂಜಿನಿಯರ್​ ಸೌಂದರ್ಯ ತನ್ನ ಮದುವೆಗೆಂದೇ 40 ಲಕ್ಷ ರೂ. ಕೂಡಿಟ್ಟುಕೊಂಡಿರುತ್ತಾಳೆ. ಆದರೆ, ಹುಡುಗಿ ಬಣ್ಣ ಕಮ್ಮಿ ಅನ್ನೋದೊಂದೇ ಸಮಸ್ಯೆ. ಹೀಗಾಗಿಯೇ ಬಂದ ಹುಡುಗರು ಆಕೆಯನ್ನು ಒಪ್ಪಿಕೊಳ್ಳುವುದಿಲ್ಲ. ಆದರೆ, ಹುಡುಗಿಯ ಬಣ್ಣಕ್ಕಿಂತ ಆಕೆ ಕೂಡಿಟ್ಟ ನೋಟಿನ ಬಣ್ಣಕ್ಕೆ ಮಾರುಹೋಗುವ ಕೃಷ್ಣ, ಮದುವೆಯಾಗಿಬಿಡುತ್ತಾನೆ. ಕೆಲ ದಿನಗಳಲ್ಲೇ ಈ ಜೋಡಿಯ ನಡುವೆ ಸಮಸ್ಯೆ ಪ್ರಾರಂಭವಾಗುತ್ತದೆ. ಆಕೆಯ ಸೌಂದರ್ಯದ ಬಗ್ಗೆ ಈತ, ಈತನ ಹಣದ ವ್ಯಾಮೋಹದ ಬಗ್ಗೆ ಆಕೆ... ಜಗಳ ಶುರುವಾಗುತ್ತವೆ. ಹಾಗಾದರೆ ಮುಂದೆ? ಈ ಮಿಡಲ್​ ಕ್ಲಾಸ್​ ಹುಡುಗ ಕೃಷ್ಣನ ಈ ರಾಮಾಯಣ ಎಲ್ಲಿಗೆ ಹೋಗಿ ನಿಲ್ಲುತ್ತದೆ? ಮದುವೆ ಮುರಿದು ಬೀಳುತ್ತಾ? ಅಥವಾ ಇಬ್ಬರಿಗೂ ಜ್ಞಾನೋದಯವಾಗುತ್ತಾ? ತಿಳಿಯಲು ಸಿನಿಮಾ ನೋಡಿ.

ಜೀವನದಲ್ಲಿ ಆರ್ಥಿಕವಾಗಿ ಸೆಟಲ್​ ಆಗಬೇಕು ಅಂತ ಹುಡುಗ, ಶ್ರೀಮಂತ ಹುಡುಗಿಯನ್ನು ಮದುವೆಯಾಗಿರುವ ಹಾಗೇ ಹುಡುಗಿ, ಶ್ರೀಮಂತ ಹುಡುಗನನ್ನು ಮದುವೆಯಾಗಿರುವ ಹಲವು ಉದಾಹರಣೆಗಳಿವೆ. ಅದೇ ಕಥೆಗೆ ಇನ್ನೊಂದಷ್ಟು ಅಂಶಗಳನ್ನು ಸೇರಿಸಿ ಈ ರೊಮ್ಯಾಂಟಿಕ್​ ಕಾಮಿಡಿ ಡ್ರಾಮಾ ನಿರೂಪಿಸಿದ್ದಾರೆ ನಿರ್ದೇಶಕ ಧನುಷ್​. ನಾಯಕ ವಿನು ಪ್ರಾರಂಭದಲ್ಲಿ ನಿಧಾನ ಎನಿಸಿದರೂ ನಂತರ ಪಿಕಪ್​ ಆಗಿದ್ದಾರೆ. ಡಿಗ್ಲಾಮ್​ ಪಾತ್ರದಲ್ಲಿ ಮೋತಾ ಗಮನ ಸೆಳೆಯುತ್ತಾರೆ. ಉಳಿದಂತೆ ಯುಕ್ತಾ, ವೀಣಾ ಸುಂದರ್​, ಎಸ್​. ನಾರಾಯಣ್​, ಜಗಪ್ಪ ಅಚ್ಚುಕಟ್ಟಾಗಿ ಪಾತ್ರಗಳನ್ನು ನಿಭಾಯಿಸಿದ್ದಾರೆ. "ರಾಧೆ ರಾಧೆ', "ಹೃದಯದ ಮಹಾರಾಣಿ' ಹಾಡುಗಳು ಅಂದವಾಗಿವೆ. ಅಂದಹಾಗೆ, ಸೌಂದರ್ಯ ನೋಡಿ ಪ್ರೀತಿಸಬೇಕೋ? ಹಣ ನೋಡಿ ಲವ್​ ಮಾಡಬೇಕೋ? ಎಂಬ ಗೊಂದಲದಲ್ಲಿರುವವರು ಈ ಸಿನಿಮಾ ನೋಡಿದರೆ ಒಂದು ಐಡಿಯಾ ಸಿಗಬಹುದು!

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net