

ಚಿಕ್ಕ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಳ್ಳುವ ಮಾದೇವನಿಗೆ (ವಿನೋದ್ ಪ್ರಭಾಕರ್), ಅಪ್ಪ ಜೈಲಿನಲ್ಲಿ ಕೆಲಸ ಮಾಡುತ್ತಿದ್ದ ಕಾರಣ, ಅಲ್ಲಿಯೇ ಹ್ಯಾಂಗ್ಮ್ಯಾನ್ ಕೆಲಸ ಸಿಗುತ್ತದೆ. ಅಪ್ಪನ ಸಾವಿನಿಂದ ಭಾವನೆಗಳನ್ನೇ ಕಳೆದುಕೊಳ್ಳುವ ಮಾದೇವ, ತನ್ನ ವೃತ್ತಿಯಿಂದಾಗಿ ಮೃಗವಾಗಿ ಬದಲಾಗಿರುತ್ತಾನೆ. ಆದರೆ, ಆ ಕಲ್ಲನ್ನು ಪ್ರೀತಿಯ ಕೆತ್ತನೆಯ ಮೂಲಕ ಮಾನವನನ್ನಾಗಿ ಮಾಡುತ್ತಾಳೆ, ಆತನ ಜೀವನದಲ್ಲಿ ಪ್ರವೇಶಿಸುವ ಪಾರ್ವತಿ (ಸೋನಲ್ ಮೊಂಟೇರೊ). ಇನ್ನೇನು ಮಾದೇವನ ಬದುಕು ಹಸನಾಯಿತು ಎನ್ನುತ್ತಿರುವಾಗಲೇ, ವಿಧಿ ಆತನ ಜೀವನದಲ್ಲಿ ಬೇರೆಯದೇ ಆಟವಾಡುಬಿಡುತ್ತದೆ. ಅಲ್ಲಿಂದ ಮಾದೇವ ಮತ್ತೆ ನರರೂಪದ ರಕ್ಕಸನಾಗಿ ಬದಲಾಗುತ್ತಾನೆ. ಹಾಗಾದರೆ ಆತ ಹಾಗೆ ಬದಲಾಗಲು ಕಾರಣವೇನು? ಯಾರು? ಮುಂದೇನು? ಕುತೂಹಲ ಇರುವವರು ಸಿನಿಮಾ ನೋಡಲೇಬೇಕು.
1980ರ ದಶಕದಲ್ಲಿ ಗ್ರಾಮೀಣ ಭಾಗದಲ್ಲಿ ನಡೆಯುವ ರೆಟ್ರೋ ಕಥೆ ಮಾದೇವ. ಆ ಫೀಲ್ ತೆರೆಯ ಮೇಲೆ ನೀಡುವಲ್ಲಿ ನಿರ್ದೇಶಕ ನವೀನ್ ಗೆದ್ದಿದ್ದಾರೆ. ಆ್ಯಕ್ಷನ್ ಪ್ರಧಾನ ಚಿತ್ರಗಳಲ್ಲಿ ಸಿಕ್ಸ್ ಪ್ಯಾಕ್ ತೋರಿಸುತ್ತಾ ಫೈಟ್ಗಳಲ್ಲಿ ಮಿಂಚುತ್ತಿದ್ದ ವಿನೋದ್ ಇಲ್ಲಿ ಅಕ್ಷರಶಃ ಹ್ಯಾಂಗ್ಮ್ಯಾನ್ ಮಾದೇವ ಪಾತ್ರವನ್ನು ಜೀವಿಸಿದ್ದಾರೆ. "ರಾರ್ಬಟ್'ನಲ್ಲಿ ವಿನೋದ್ಗೆ ಜೋಡಿಯಾಗಿದ್ದ ಸೋನಲ್ ಕೂಡ ಪಾರ್ವತಿಯಾಗಿ ಗಮನ ಸೆಳೆಯುತ್ತಾರೆ. ಶ್ರುತಿ ಮತ್ತು ಮಾಲಾಶ್ರೀ ವಿಶೇಷ ಮತ್ತು ವಿಭಿನ್ನ ಪಾತ್ರಗಳಲ್ಲಿ ಮಿಂಚಿದ್ದು, ಶ್ರೀನಗರ ಕಿಟ್ಟಿ ಕೂಡ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. 135 ನಿಮಿಷಗಳ ಮಾದೇವ ಚಿತ್ರ ಒಂದೊಳ್ಳೆ ಕಮರ್ಷಿಯಲ್ ಪ್ಯಾಕೇಜ್ ಎನ್ನಬಹುದು. ಮಾಸ್ ಪ್ರಿಯರಿಗೆ ಇಷ್ಟವಾಗುತ್ತದೆ.