

ಬೆಂಗಳೂರು: ದೀಪಾವಳಿ ಹಬ್ಬದ ನಂತರ ದರ್ಶನ್ ಅಭಿನಯದ 'ರಾಬರ್ಟ್' ಚಿತ್ರತಂಡದಿಂದ ಏನೂ ಹೊರಬಂದಿಲ್ಲ ಎಂದು ದರ್ಶನ್ ಅಭಿಮಾನಿಗಳು ಬೇಸರಗೊಂಡಿದ್ದರು. ಈಗ ನಿರ್ದೇಶಕ ತರುಣ್ ಸುಧೀರ್, ಚಿತ್ರ ಹೊಚ್ಚಹೊಸ ಪೋಸ್ಟರ್ವೊಂದನ್ನು ಬಿಡುಗಡೆ ಮಾಡಿದ್ದಾರೆ.
'ರಾಬರ್ಟ್' ಚಿತ್ರದಲ್ಲಿ ದರ್ಶನ್ ಜತೆಗೆ ವಿನೋದ್ ಪ್ರಭಾಕರ್ ಸಹ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಪಾತ್ರವೇನು? ಪಾತ್ರದ ಹೆಸರೇನು? ಮುಂತಾದ ಯಾವ ವಿಷಯವನ್ನೂ ಚಿತ್ರತಂಡವು ಇದುವರೆಗೂ ಬಿಟ್ಟುಕೊಟ್ಟಿಲ್ಲ. ಇನ್ನು ಚಿತ್ರದಲ್ಲಿ ಅವರು ಹೇಗೆ ಕಾಣಬಹುದು ಎಂಬುದು ಸಹ ಹಲವರಿಗೆ ಗೊತ್ತಿರಲಿಲ್ಲ. ಇದೀಗ ಚಿತ್ರತಂಡದವರು, ವಿನೋದ್ ಪ್ರಭಾಕರ್ ಅವರ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ.
ಅದಕ್ಕೆ ಕಾರಣವೂ ಇದೆ. ಇಂದು ವಿನೋದ್ ಪ್ರಭಾಕರ್ ಅವರ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಅವರಿಗೆ ಶುಭಕೋರುವುದರ ಜತೆಗೆ, ಅವರ ಫಸ್ಟ್ಲುಕ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ದರ್ಶನ್, ತರುಣ್ ಸುಧೀರ್, ಉಮಾಪತಿ ಶ್ರೀನಿವಾಸ ಗೌಡ ಮುಂತಾದವರು ಈ ಪೋಸ್ಟರ್ ಹಂಚಿಕೊಂಡು, ವಿನೋದ್ಗೆ ಶುಭಾಶಯಗಳನ್ನು ತಿಳಿಸಿದ್ದಾರೆ.
ಇನ್ನು, 'ರಾಬರ್ಟ್' ಚಿತ್ರದ ಬಿಡುಗಡೆಯ ವಿಷಯಕ್ಕೆ ಬರುವುದಾದರೆ, ಸದ್ಯಕ್ಕೆ ಚಿತ್ರ ಬಿಡುಗಡೆಯಾಗುವ ಹಾಗೆ ಕಾಣುತ್ತಿಲ್ಲ. ಮೊದಲಿಗೆ, ಕ್ರಿಸ್ಮಸ್ ಅಥವಾ ಸಂಕ್ರಾಂತಿ ಹಬ್ಬದ ಹೊತ್ತಿಗೆ ಚಿತ್ರವನ್ನು ಬಿಡಗುಡೆ ಮಾಡಬಹುದು ಎಂದು ಹೇಳಲಾಗಿತ್ತು. ಆದರೆ, ನಿರ್ಮಾಪಕ ಉಮಾಪತಿ ಶ್ರೀನಿವಾಸ ಗೌಡ ಹೇಳಿಕೊಂಡಿರುವಂತೆ, ಚಿತ್ರಮಂದಿರಗಳಲ್ಲಿ ಶೇ. 100ರಷ್ಟು ಹಾಜರಾತಿಗೆ ಸರ್ಕಾರ ಅನುಮತಿ ಕೊಟ್ಟ ನಂತರ ಚಿತ್ರವನ್ನು ಬಿಡುಗಡೆ ಮಾಡಲಾಗುತ್ತದಂತೆ.
ಇದನ್ನೂ ಓದಿ: ಕೃಷ್ಣನ ಜತೆಗೆ ಅದ್ವಿತಿ ಶೆಟ್ಟಿ; ಮೂರನೆಯವರಿಗೆ ಹುಡುಕಾಟ
ಸರ್ಕಾರ ಯಾವಾಗ ಶೇ.100ರಷ್ಟು ಹಾಜರಾತಿಗೆ ಅನುಮತಿಗೆ ಕೊಡುತ್ತದೆ ಎಂಬುದು ಸದ್ಯಕ್ಕೆ ಯಾರಿಗೂ ಗೊತ್ತಿಲ್ಲ. ಬಹುಶಃ ಮಾರ್ಚ್ ಅಥವಾ ಏಪ್ರಿಲ್ ಹೊತ್ತಿಗೆ ಸರ್ಕಾರ ಅನುಮತಿ ಕೊಡಬಹುದು ಎಂದು ನಿರೀಕ್ಷಿಸಲಾಗಿದ್ದು, ಆ ನಂತರವಷ್ಟೇ ಚಿತ್ರದ ಬಿಡುಗಡೆ ಎಂದು ಹೇಳಲಾಗುತ್ತಿದೆ.