ವಿನೋದ್ ಈಗ ವರದ; ಅಪ್ಪ-ಮಗನ ಪೈಪೋಟಿಯ ಕಥೆ

Vinod
Published on

ಬೆಂಗಳೂರು: ಲಾಕ್​ಡೌನ್​ಗೂ ಮುನ್ನ ವಿನೋದ್ ಪ್ರಭಾಕರ್ ಅಭಿನಯದ ‘ಲಂಕಾಸುರ’ ಎಂಬ ಚಿತ್ರ ಸೆಟ್ಟೇರಿದ್ದು ಗೊತ್ತಿರುವ ವಿಷಯವೇ. ಆದರೆ, ಈ ಮಧ್ಯೆ, ‘ವರದ’ ಎಂಬ ಇನ್ನೊಂದು ಚಿತ್ರ ಸೆಟ್ಟೇರಿದ್ದು ಹಲವರಿಗೆ ಗೊತ್ತಿರಲಿಕ್ಕಿಲ್ಲ. ಹೀಗೆ ಸದ್ದಿಲ್ಲದೆ ಶುರುವಾದ ‘ವರದ’ ಇದೀಗ ಬಹುತೇಕ ಮುಗಿದಿದ್ದು, ಸದ್ಯದಲ್ಲೇ ಚಿತ್ರದ ಮೋಷನ್ ಪೋಸ್ಟರ್ ಸಹ ಬಿಡುಗಡೆಯಾಗುತ್ತಿದೆ. ‘ವರದ’ ಎಂಬ ಹೆಸರು ಕೇಳುತ್ತಿದ್ದರೆ ಇದೊಂದು ಪಕ್ಕಾ ಆಕ್ಷನ್ ಚಿತ್ರ ಇರಬಹುದು ಎಂದು ನೀವು ಊಹಿಸಿದ್ದರೆ ಅದರಲ್ಲಿ ತಪ್ಪೇನಿಲ್ಲ. ಇದೊಂದು ಪಕ್ಕಾ ಆಕ್ಷನ್ ಚಿತ್ರವೇ.

ಅಪ್ಪ-ಮಗನ ನಡುವೆ ಪೈಪೋಟಿ ಇರುವ ಈ ಕಥೆಯಲ್ಲಿ ವಿನೋದ್ ಮಗನಾಗಿ ಕಾಣಿಸಿಕೊಂಡರೆ, ಅಪ್ಪನಾಗಿ ಹಿರಿಯ ನಟ ಚರಣ್​ರಾಜ್ ಅಭಿನಯಿಸಿದ್ದಾರೆ. ಮಿಕ್ಕಂತೆ ಅಮಿತಾ ರಂಗನಾಥ್, ಅನಿಲ್ ಸಿದ್ದು, ಅಶ್ವಿನಿ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಈ ಹಿಂದೆ ‘ಆಟೋ ರಾಜ’, ‘ಯೋಗಿ’, ‘ಕಳ್ಳ ಮಳ್ಳ ಸುಳ್ಳ’ ಮುಂತಾದ ಚಿತ್ರಗಳನ್ನು ನಿರ್ದೇಶಿಸಿದ್ದ ಉದಯ ಪ್ರಕಾಶ್, ಈ ಚಿತ್ರವನ್ನು ನಿರ್ದೇಶಿಸುತ್ತಿರುವುದಷ್ಟೇ ಅಲ್ಲ, ಇದೇ ಮೊದಲ ಬಾರಿಗೆ ನಿರ್ಮಾಣ ಮಾಡುತ್ತಿದ್ದಾರೆ. ಪ್ರದೀಪ್ ವರ್ವ ಸಂಗೀತ ಸಂಯೋಜಿಸಿದರೆ, ‘ಭಜರಂಗಿ’ ಆನಂದ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net