ಖಳನಿಗೆ ತಕ್ಕ ನಾಯಕ; ತೂಕದ ಪಾತ್ರಗಳ ಬಿಚ್ಚುಗತ್ತಿ

KHALA
Published on

ಬೆಂಗಳೂರು: ಸಾಮಾನ್ಯವಾಗಿ ಒಂದು ಪಾತ್ರದ ಸಲುವಾಗಿ ಸಿನಿಮಾದ ನಾಯಕ ಸ್ಲಿಮ್ ಆಗುವುದು, ದೇಹತೂಕ ಇಳಿಸಿಕೊಳ್ಳುವುದೆಲ್ಲ ಸಹಜ. ಆದರೆ ಇಲ್ಲಿ ನಾಯಕನಾಗಿ ಮೈಭಾರ ಹೆಚ್ಚಿಸಿಕೊಂಡು ‘ತೂಕದ ಪಾತ್ರ’ ಮಾಡಿದ್ದಾರೆ ನಾಯಕ ರಾಜವರ್ಧನ್.

ಅಂದಹಾಗೆ ಅವರು ಇಷ್ಟೆಲ್ಲ ಕಸರತ್ತು ಮಾಡಿ ದೇಹತೂಕ ಹೆಚ್ಚಿಸಿಕೊಂಡಿದ್ದು ತಮ್ಮ ನೂತನ ಸಿನಿಮಾ ‘ಬಿಚ್ಚುಗತ್ತಿ’ಗಾಗಿ. ಬಿ.ಎಲ್. ವೇಣು ಅವರ ಕಾದಂಬರಿ ಆಧಾರಿತವಾಗಿ ‘ಓಂ ಸಾಯಿಕೃಷ್ಣ ಪ್ರೊಡಕ್ಷನ್ಸ್’ ಬ್ಯಾನರ್​ನಲ್ಲಿ ಹರಿ ಸಂತೋಷ್ ನಿರ್ದೇಶನ ಮಾಡಿರುವ ‘ಬಿಚ್ಚುಗತ್ತಿ: ಚಾಪ್ಟರ್ 1, ದಳವಾಯಿ ದಂಗೆ’ ಎಂಬ ಈ ಸಿನಿಮಾದಲ್ಲಿ ನಾಯಕ ರಾಜವರ್ಧನ್ ಐತಿಹಾಸಿಕ ಭರಮಣ್ಣ ನಾಯಕನ ಪಾತ್ರ ಮಾಡಿದ್ದಾರೆ.

ಈ ಪಾತ್ರಕ್ಕಾಗಿಯೇ ಅವರು ಕುದುರೆ ಸವಾರಿ ಮಾತ್ರವಲ್ಲದೆ, ಕಳರಿಪಯಟ್ಟು ಮುಂತಾದ ಸಮರಕಲೆಯನ್ನೂ ಕಲಿತಿದ್ದಾರೆ. ಅದರಲ್ಲೂ 20 ಕೆ.ಜಿ.ಗೂ ಅಧಿಕ ದೇಹತೂಕವನ್ನು ಹೆಚ್ಚಿಸಿಕೊಂಡಿದ್ದು ಮತ್ತೊಂದು ವಿಶೇಷ. ‘ಬಿಚ್ಚುಗತ್ತಿ ಸಿನಿಮಾ ಆರಂಭದಲ್ಲಿ ನಾನು 85 ಕೆ.ಜಿ. ಇದ್ದೆ.

ಆದರೆ ನನ್ನ ಎದುರು ಖಳನಾಗಿ ದಳವಾಯಿ ಮುದ್ದಣ್ಣನ ಪಾತ್ರ ಮಾಡಿರುವ ಬಾಹುಬಲಿ ಖ್ಯಾತಿಯ ಪ್ರಭಾಕರ್ ಬರೋಬ್ಬರಿ 130 ಕೆ.ಜಿ. ಇದ್ದರು. ಅವರ ಮುಂದೆ ನಾಯಕನ ಪಾತ್ರ ಕಳೆಗುಂದಬಾರದೆಂದು ನನ್ನ ತೂಕ ಹೆಚ್ಚಿಸಿಕೊಳ್ಳಬೇಕಾಯಿತು. ಆರು ತಿಂಗಳ ಕಠಿಣ ಪರಿಶ್ರಮದಿಂದ 85 ಕೆ.ಜಿ. ಇದ್ದ ದೇಹತೂಕವನ್ನು 108ಕ್ಕೆ ಏರಿಸಿಕೊಂಡಿದ್ದೆ’ ಎನ್ನುತ್ತಾರೆ ರಾಜವರ್ಧನ್.

‘ತೂಕ ಹೆಚ್ಚಿಸಿಕೊಳ್ಳುವುದಲ್ಲದೆ ಅದಕ್ಕೆ ತಕ್ಕಂತೆ ಅಂಗಸೌಷ್ಠವ ರೂಪಿಸಿಕೊಳ್ಳಬೇಕಿತ್ತು. ಐತಿಹಾಸಿಕ ಕಥೆಯಾದ್ದರಿಂದ ಈಗಿನಂತೆ ಜಿಮ್ ಬಾಡಿ ಬದಲು ಹಳೇ ಕಾಲದ ಪೈಲ್ವಾನ್​ರಂಥ ಮೈಕಟ್ಟು ಬೆಳೆಸಿಕೊಳ್ಳಬೇಕಿತ್ತು. ಇದಕ್ಕಾಗಿ ಟ್ರೇನರ್ ಶ್ರೀನಿವಾಸ ಗೌಡ ಮಾರ್ಗದರ್ಶನ ಮಾಡಿದ್ದರು. ಟೈಗರ್ ಪ್ರಭಾಕರ್ ‘ಕಾಡಿನ ರಾಜ’ ಸಿನಿಮಾದಲ್ಲಿದ್ದಂಥ ಫೋಟೋ ಅವರಿಗೆ ಕೊಟ್ಟು ಹೀಗೇ ತಯಾರಾಗುವಂತೆ ಮಾಡಿ ಎಂದಿದ್ದೆ’ ಎನ್ನುತ್ತಾರೆ ‘ಬಿಚ್ಚುಗತ್ತಿ’ಯ ಭರಮಣ್ಣ.

ಈ ಸಿನಿಮಾದಲ್ಲಿ ಗುಡಿಕೋಟೆ ರಾಜಕುಮಾರಿ ಸಿದ್ದಾಂಬೆ ಪಾತ್ರದಲ್ಲಿ ನಟಿ ಹರಿಪ್ರಿಯಾ ಅಭಿನಯಿಸಿದ್ದಾರೆ. ಇವರೂ ಈ ಚಿತ್ರಕ್ಕಾಗಿ ಸಾಕಷ್ಟು ತಯಾರಿ ನಡೆಸಿದ್ದಾರೆ. ‘ನನಗಿಲ್ಲಿ ಎರಡು ಶೇಡ್​ನ ಪಾತ್ರ. ಹಾಗಾಗಿ ಎರಡು ಲುಕ್​ನಲ್ಲಿ ಕಾಣಿಸಿಕೊಂಡಿದ್ದೇನೆ. ಈ ಹಿಂದೆಯೇ ಕುದುರೆ ಸವಾರಿ ಗೊತ್ತಿದ್ದರೂ ಈ ಚಿತ್ರಕ್ಕಾಗಿ ಮತ್ತಷ್ಟು ತರಬೇತಿ ಪಡೆದುಕೊಂಡೆ’ ಎಂದರು ಹರಿಪ್ರಿಯಾ.

ನಾವು ಮೊದಲಿಗೆ ಹೀರೋ ಆಗಿ ರಾಜವರ್ಧನ್ ಅವರನ್ನು ಆರಿಸಿಕೊಂಡಿದ್ದೆವು. ಬಳಿಕ ಖಳನ ಪಾತ್ರಕ್ಕೆ ‘ಬಾಹುಬಲಿ’ ಚಿತ್ರದಲ್ಲಿ ಕಾಲಕೇಯ ಸಾಮ್ರಾಜ್ಯದ ಇಂಕೋಶಿ ಪಾತ್ರ ಮಾಡಿದ್ದ ಪ್ರಭಾಕರ್ ಅವರನ್ನು ಆರಿಸಿಕೊಂಡೆವು. ಆ ಪಾತ್ರಕ್ಕೆ ಅವರೇ ಸೂಕ್ತ. ಆದರೆ ಅವರು ಬರೋಬ್ಬರಿ 130 ಕೆ.ಜಿ. ಇದ್ದಿದ್ದರಿಂದ ಅದಕ್ಕೆ ಸರಿಸಾಟಿ ಎಂಬಂತೆ ನಾಯಕನ ಮೈಕಟ್ಟು ಇರಬೇಕಾಗಿದ್ದರಿಂದ ರಾಜವರ್ಧನ್ ತೂಕ ಹೆಚ್ಚಿಸಿಕೊಳ್ಳಬೇಕಾಯಿತು. | ಹರಿ ಸಂತೋಷ್ ನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net