

ಬಾಲಿವುಡ್ ನಟ ಇರ್ಫಾನ್ ಖಾನ್ ಹೆಸರು ಶಾಶ್ವತವಾಗಿ ಉಳಿಯುವುದಕ್ಕೆ ಮಹಾರಾಷ್ಟ್ರದ ಇಗತ್ಪುರಿ ಹಳ್ಳಿಯವರು ಒಂದು ಒಳ್ಳೆಯ ಕೆಲಸ ಮಾಡಿದ್ದಾರೆ. ಇರ್ಫಾನ್ ಖಾನ್ ನೆನಪಲ್ಲಿ ಹಳ್ಳಿಯ ಬಡಾವಣೆಯೊಂದಕ್ಕೆ ಹೀರೋ ಚೀ ವಾಡಿ ಎಂದು ನಾಮಕರಣ ಮಾಡಿದ್ದಾರೆ.
ಎಲ್ಲಾ ಸರಿ, ಈ ಹಳ್ಳಿಗೂ, ಇರ್ಫಾನ್ಗೂ ಏನು ಸಂಬಂಧ? ಅವರ್ಯಾಕೆ ಇರ್ಫಾನ್ ನೆನಪಲ್ಲಿ ಬಡಾವಣೆಯ ಹೆಸರು ಬದಲಿಸಬೇಕು? ಎಂಬಂತಹ ಪ್ರಶ್ನೆಗಳು ಬರುವುದು ಸಹಜ. ವಿಷಯ ಏನೆಂದರೆ, ಒಂದು ದಶಕದ ಹಿಂದೆ ಇಗತ್ಪುರಿ ಹಳ್ಳಿಯಲ್ಲಿ ಇರ್ಫಾನ್ ಸ್ವಲ್ಪ ಜಾಗ ಖರೀದಿಸಿದ್ದರಂತೆ. ಆ ಹಳ್ಳಿಗಾಗಿ ಒಂದಿಷ್ಟು ಒಳ್ಳೆಯ ಕೆಲಸಗಳನ್ನು ಮಾಡಿದ್ದರಂತೆ. ಅದೇ ಕಾರಣಕ್ಕೆ, ಹಳ್ಳಿಯ ಬಡಾವಣೆಯೊಂದಕ್ಕೆ ಹೀರೋ ಚೀ ವಾಡಿ (ಹೀರೋನ ಬಡಾವಣೆ) ಎಂದು ನಾಮಕರಣ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ಇಗತ್ಪುರಿ ಬಳಿ ಇರ್ಫಾನ್ ಜಾಗ ಖರೀದಿಸಿದಾಗ, ಹಳ್ಳಿಗರ ಸಂಪರ್ಕ ಹೆಚ್ಚಿರಲಿಲ್ಲವಂತೆ. ಕ್ರಮೇಣ ಸಂಪರ್ಕ ಬೆಳೆಯುತ್ತಿದ್ದಂತೆ, ಅಲ್ಲಿನ ಜನರ ಸಮಸ್ಯೆಗಳು ಸಹ ಅರ್ಥವಾಗಿದೆ. ಆ ಹಳ್ಳಿಗೆ ಕೆಲವು ಬೇಸಿಕ್ ಆದಂತಹ ಸೌಕರ್ಯಗಳು ಸಹ ಸಿಗುತ್ತಿಲ್ಲ ಎಂದು ಸ್ಪಷ್ಟವಾದಾಗ, ಇರ್ಫಾನ್ ತಾವೇ ಮುಂದೆ ನಿಂತು ಒಂದಿಷ್ಟು ಕೆಲಸಗಳನ್ನು ಮಾಡಿಸಿದ್ದಾರೆ. ಇದರಿಂದ ಹಳ್ಳಿಗರಿಗೆ ಹತ್ತಿರವಾಗಿದ್ದಾರೆ.
ಅಷ್ಟೇ ಅಲ್ಲ, ಆ ಹಳ್ಳಿಯ ಉತ್ಸವಗಳಲ್ಲಿ ಇರ್ಫಾನ್ ಭಾಗಿಯಾಗುತ್ತಿದ್ದರಂತೆ. ಅಲ್ಲಿನ ಬುಡಕಟ್ಟು ಮಕ್ಕಳಿಗೆ ಪುಸ್ತಕ, ರೇನ್ಕೋಟ್, ಸ್ವೆಟರ್ಗಳನ್ನು ಕೊಡುತ್ತಿದ್ದರಂತೆ. ಇದೆಲ್ಲದರಿಂದ ಅವರು ಹಳ್ಳಿಗರ ಪ್ರೀತಿ ಪಾತ್ರರಾಗಿದ್ದಾರೆ. ಹೀಗೆ ಪ್ರೀತಿ ಪಾತ್ರರಾಗಿದ್ದ ಇರ್ಫಾನ್, ಒಂದು ದಿನ ಹಠಾತ್ತನೇ ನಿಧನರಾದಾಗ, ಹಳ್ಳಿಗರು ಅಕ್ಷರಶಃ ಬೇಸರಗೊಂಡಿದ್ದಾರೆ. ಇರ್ಫಾನ್ ಅವರ ನೆನಪಲ್ಲಿ ಏನಾದರೂ ಮಾಡಬೇಕು ಎಂದು ಯೋಚಿಸುತ್ತಿದ್ದಾಗ, ಐಡಿಯಾ ಹೊಳೆದಿದೆ. ಅದೇ ಕಾರಣಕ್ಕೆ, ಇರ್ಫಾನ್ ನೆನಪಲ್ಲಿ ಹಳ್ಳಿಯ ಬಡಾವಣೆಗೆ ಹೀರೋ ಚೀ ವಾಡಿ ಎಂದು ನಾಮಕರಣ ಮಾಡಲಾಗಿದೆ.
ಹೀರೋಗಳ ನೆನಪಲ್ಲಿ ರಸ್ತೆಗಳಿಗೆ, ಬಡಾವಣೆಗಳಿಗೆ, ಪಾರ್ಕುಗಳಿಗೆ ಅವರ ಹೆಸರಿಡುವುದು ಹೊಸದೇನಲ್ಲ. ಇರ್ಫಾನ್ ನೆನಪಲ್ಲೂ ಇಂಥದ್ದೊಂದು ಕೆಲಸ ಆಗುತ್ತಿದೆ ಎನ್ನುವುದು ವಿಶೇಷ.