ನೈಟ್ ಕರ್ಫ್ಯೂ ತೆಗೆದ್ರೆ ನಾವ್ ಬರ್ತಿವಿ!; ರೋಣ ಪ್ರಚಾರಕ್ಕೆ 25 ದಿನ ಸಾಕಂತೆ

Vikranth Rona
Published on

ಬೆಂಗಳೂರು: ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಸಿನಿಮಾ ಬಹುತೇಕ ಎಲ್ಲ ಕೆಲಸಗಳನ್ನು ಮುಗಿಸಿಕೊಂಡು ಬಿಡುಗಡೆಯ ಹೊಸ್ತಿಲಲ್ಲಿದೆ. ಹೀಗಿರುವಾಗಲೇ ಅಂದುಕೊಂಡಂತೆ ಫೆ. 24ರಂದೇ ಚಿತ್ರ ರಿಲೀಸ್ ಆಗಲಿದೆಯೇ ಎಂಬುದು ಮಾತ್ರ ಇನ್ನೂ ಅಸ್ಪಷ್ಟ. ಈ ಗೊಂದಲಕ್ಕೀಗ ನಿರ್ವಪಕ ಜಾಕ್ ಮಂಜು ಉತ್ತರಿಸಿದ್ದು, ಇನ್ನೊಂದು ವಾರದಲ್ಲಿ ಎಲ್ಲವೂ ಗೊತ್ತಾಗಲಿದೆ ಎಂದಿದ್ದಾರೆ.

‘ಸದ್ಯದ ನಮ್ಮ ಪ್ಲಾನ್​ನಲ್ಲಿ ಯಾವುದೇ ಬದಲಾವಣೆ ಇಲ್ಲ. ಫೆ. 24ರಂದೇ ಚಿತ್ರ ಬರಲಿದೆ. ಆದರೆ, ಅದಕ್ಕೂ ಮೊದಲು ಮುಂದಿನ ಒಂದು ವಾರದಲ್ಲಿ ಸರ್ಕಾರ ವಿಧಿಸಿರುವ ರಾತ್ರಿ ಕರ್ಫ್ಯೂ ರದ್ದಾಗಬೇಕು. ಏಕೆಂದರೆ, ಬಹುತೇಕ ಕಡೆಗಳಲ್ಲಿ ರಾತ್ರಿ ಶೋಗಳಿಗೆ ಜನ ಬರುವುದು ಹೆಚ್ಚು. ಹಾಗಾಗಿ, ರಾತ್ರಿ ಕರ್ಫ್ಯೂ ಮತ್ತು ಶೇ.50 ಆಸನ ಭರ್ತಿ ರದ್ದಾಗಲಿ ಎಂದು ಕಾಯುತ್ತಿದ್ದೇವೆ’ ಎನ್ನುವ ನಿರ್ವಪಕ ಜಾಕ್ ಮಂಜು, ‘ಒಂದು ವೇಳೆ 15 ದಿನದ ನಂತರ ಈ ಬೆಳವಣಿಗೆ ಆದರೆ, ಸಹಜವಾಗಿ ನಾವೂ ಬೇರೆ ಬಿಡುಗಡೆ ದಿನಾಂಕ ನೋಡಬೇಕಾಗುತ್ತದೆ.

ಏಕೆಂದರೆ, ಚಿತ್ರದ ಪ್ರಚಾರಕ್ಕೆ 25 ದಿನಗಳಾದರೂ ಬೇಕು. ಅಲ್ಲದೆ, ಸಾಕಷ್ಟು ಸಿನಿಮಾಗಳು ಸಹ ರಿಲೀಸ್ ಸಾಲಿನಲ್ಲಿವೆ. ಅದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಹೊಸ ದಿನಾಂಕ ಘೋಷಿಸಬೇಕಾಗುತ್ತದೆ’ ಎನ್ನುತ್ತಾರೆ. ಅನೂಪ್ ಭಂಡಾರಿ ನಿರ್ದೇಶನದ ‘ವಿಕ್ರಾಂತ್ ರೋಣ’ ಚಿತ್ರವು ಪ್ಯಾನ್ ಇಂಡಿಯಾ ಮಟ್ಟದಲ್ಲಿ ತಯಾರಾಗಿದ್ದು, ಬಹುಕೋಟಿ ವೆಚ್ಚದಲ್ಲಿ ನಿರ್ವಣವಾಗಿದೆ. ಇಂತಹ ಸಿನಿಮಾಗಳಿಗೆ ಚಿತ್ರಮಂದಿರಗಳಲ್ಲಿ ಶೇ.100ರಷ್ಟು ಅನುಮತಿ ಬೇಕೇಬೇಕು ಎಂಬ ಉದ್ದೇಶದಿಂದ ಸರ್ಕಾರದ ನಡೆಯ ಬಗ್ಗೆ ಚಿತ್ತ ನೆಟ್ಟಿದೆ ಚಿತ್ರತಂಡ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net