

ಬೆಂಗಳೂರು: ಸುದೀಪ್ ಅಭಿನಯದ ‘ವಿಕ್ರಾಂತ್ ರೋಣ’ ಚಿತ್ರ ಬಿಡುಗಡೆಗೆ ದಿನಗಣನೆ ಪ್ರಾರಂಭವಾಗಿದೆ. ಜುಲೈ 28ಕ್ಕೆ ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿರುವ ಈ ಚಿತ್ರದ ಪ್ರಚಾರದದಲ್ಲಿ ಸುದೀಪ್ ಮತ್ತು ಚಿತ್ರತಂಡದವರು ತೊಡಗಿಸಿಕೊಂಡಿದ್ದಾರೆ. 13 ವರ್ಷಗಳ ನಂತರ ಇದೇ ಮೊದಲ ಬಾರಿಗೆ ದೆಹಲಿಗೆ ಭೇಟಿ ನೀಡಿರುವ ಸುದೀಪ್, ಅಲ್ಲಿ ತಮ್ಮ ತಂಡದೊಂದಿಗೆ ಚಿತ್ರದ ಪ್ರಚಾರ ಮಾಡಿದ್ದಾರೆ. ಸುದೀಪ್ ಜತೆಗೆ ನಿರೂಪ್ ಭಂಡಾರಿ, ನೀತಾ ಅಶೋಕ್, ನಿರ್ದೇಶಕ ಅನೂಪ್ ಭಂಡಾರಿ ಮುಂತಾದವರು ಮಾಧ್ಯಮದವರ ಜತೆಗೆ ಚಿತ್ರದ ಕುರಿತು ಮಾತನಾಡಿದ್ದಾರೆ.
ದೆಹಲಿಯಲ್ಲಿ ಪ್ರಚಾರ ಮುಗಿಸಿರುವ ಚಿತ್ರತಂಡ ಸೋಮವಾರ ಮತ್ತು ಮಂಗಳವಾರ ಚೆನ್ನೈನಲ್ಲಿ, ಬುಧವಾರ ಕೊಚ್ಚಿಯಲ್ಲಿ, ಗುರುವಾರದಿಂದ ನಾಲ್ಕು ದಿನಗಳ ಕಾಲ ಹೈದರಾಬಾದ್ನಲ್ಲಿ ಚಿತ್ರದ ಪ್ರಚಾರ ಮಾಡಲಿದ್ದಾರೆ. ಇನ್ನು, ಜುಲೈ 27ರ ರಾತ್ರಿ ದುಬೈನಲ್ಲಿ ಚಿತ್ರದ ಪ್ರೀಮಿಯರ್ ನಡೆಯಲಿದೆ. ಕನ್ನಡವಷ್ಟೇ ಅಲ್ಲ, ತೆಲುಗು, ತಮಿಳು ಸೇರಿದಂತೆ ‘ವಿಕ್ರಾಂತ್ ರೋಣ’ ಚಿತ್ರದ ಆರು ಅವತರಣಿಕೆಗಳ ಪ್ರೀಮಿಯರ್ ಅಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ಸುದೀಪ್ ಮತ್ತು ಚಿತ್ರತಂಡದವರು ಹಾಜರಿರಲಿದ್ದಾರೆ. ದುಬೈ ಅಲ್ಲದೆ, ಅಮೆರಿಕಾದಲ್ಲೂ ಚಿತ್ರದ ಪ್ರೀಮಿಯರ್ ನಡೆಯಲಿದೆ.