'ವಾರಿಸು' ಚಿತ್ರದ ಬಜೆಟ್​ನ ಅರ್ಧ ಭಾಗ ವಿಜಯ್​ ಸಂಭಾವನೆಯಂತೆ …

Vijay
Published on

ಚೆನ್ನೈ: ದಕ್ಷಿಣ ಭಾರತದ ಸೂಪರ್​ ಸ್ಟಾರ್​ಗಳ ಪೈಕಿ ಅತೀ ಹೆಚ್ಚು ಸಂಭಾವನೆ ಪಡೆಯುವಲ್ಲಿ ತಮಿಳು ನಟ ವಿಜಯ್​ ಸಹ ಒಬ್ಬರು. ವಿಜಯ್, 'ಮಾಸ್ಟರ್​' ಚಿತ್ರಕ್ಕೆ 80 ಕೋಟಿ ರೂ. ಸಂಭಾವನೆ ಪಡೆದ ಸುದ್ದಿ ಇತ್ತು. ಈಗ ಅವರು ತಮ್ಮ ಹೊಸ ಚಿತ್ರ 'ವಾರಿಸು'ಗೆ ಎಷ್ಟು ಸಂಭಾವನೆ ಪಡೆದಿರಬಹುದು ಎಂಬ ಬಿಸಿಬಿಸಿ ಚರ್ಚೆ ಕಾಲಿವುಡ್​ನಲ್ಲಿ ಜೋರಾಗಿ ನಡೆಯುತ್ತಿದೆ.

ವಿಜಯ್​ ಅಭಿನಯದ 'ವಾರಿಸು' ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು, ಸಂಕ್ರಾಂತಿಗೆ ಬಿಡುಗಡೆಯಾಗುತ್ತಿದೆ. ಈ ಮಧ್ಯೆ, ಈ ಚಿತ್ರಕ್ಕೆ ವಿಜಯ್​ ಎಷ್ಟು ಸಂಭಾವನೆ ಪಡೆದಿರಬಹುದು ಎಂಬ ಚರ್ಚೆ ನಡೆಯುತ್ತಿದ್ದು, ಅದಕ್ಕೆ ಈಗ ಉತ್ತರ ಸಿಕ್ಕಿದೆ.

ಮೂಲಗಳ ಪ್ರಕಾರ, 'ವಾರಿಸು' ಚಿತ್ರದ ಬಜೆಟ್​ 200 ಕೋಟಿಯಷ್ಟಾಗಿದ್ದು, ಅದರಲ್ಲಿ ವಿಜಯ್​ ಅವರ ಸಂಭಾವನೆಯೇ ಅರ್ಧದಷ್ಟಿದೆಯಂತೆ. ಅಂದರೆ, ಈ ಚಿತ್ರದಲ್ಲಿ ನಟಿಸುವುದಕ್ಕೆ ವಿಜಯ್​ ಅಂದಾಜು 100 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗಿದೆ. ಇದೊಂದು ದ್ವಿಭಾಷಾ ಚಿತ್ರವಾಗಿದ್ದು, ಏಕಕಾಲಕ್ಕೆ ತೆಲುಗು ಮತ್ತು ತಮಿಳಿನಲ್ಲಿ ನಿರ್ಮಾಣವಾಗಿ ಬಿಡುಡೆಯಾಗುತ್ತಿದೆ. ಅದೇ ಕಾರಣಕ್ಕೆ, ಈ ಚಿತ್ರಕ್ಕೆ ತಮ್ಮ ಸಂಭಾವನೆಯನ್ನು ವಿಜಯ್​ ಏರಿಸಿದ್ದಾರಂತೆ.

'ವಾರಿಸು' ಚಿತ್ರವನ್ನು ತೆಲುಗಿನ ಖ್ಯಾತ ನಿರ್ಮಾಪಕ ದಿಲ್​ ರಾಜು ನಿರ್ಮಿಸಿದ್ದು, ವಂಶಿ ಪಡೈಪಲ್ಲಿ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ವಿಜಯ್​ಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದು, ಮಿಕ್ಕಂತೆ ರಮ್ಯಾ ಕೃಷ್ಣ, ಪ್ರಭು, ಶರತ್​ ಕುಮಾರ್​, ಪ್ರಕಾಶ್​ ರೈ ಸೇರಿದಂತೆ ಹಲವರು ಅಭಿನಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net