ವಿಜಯವಾಣಿ ಸಿನಿಮಾ ವಿಮರ್ಶೆ: ಶಿವಾಜಿ ಸುರತ್ಕಲ್ ಯುರೇಕಾ ಯುರೇಕಾ!

ramesh feb 2020
Published on

ಬೆಂಗಳೂರು: ‘ಇನ್ನೇನು ಈ ಕೇಸ್ ಕಂಡು ಹಿಡಿಯಲು ಆಗುವುದಿಲ್ಲ, ವಾಪಸ್ ಹೊರಡುವುದೇ ಲೇಸು..’ ಎಂದುಕೊಂಡು ಪೊಲೀಸ್ ಅಧಿಕಾರಿ ಶಿವಾಜಿ ಸುರತ್ಕಲ್ (ರಮೇಶ್ ಅರವಿಂದ್) ಹಾಗೂ ಪೊಲೀಸ್ ಗೋವಿಂದ (ರಘು ರಾಮನಕೊಪ್ಪ) ರಣಗಿರಿಯಿಂದ ಹೊರಟು ಬಿಡುತ್ತಾರೆ. ಹಾಗೆ ಆ ರೆಸಾರ್ಟ್

ನಿಂದ ಹೊರ ಹೋಗುತ್ತಿದ್ದಾಗ ಕಾರ್ ಕೀ ಬಿಟ್ಟು ಬಂದಿದ್ದು ಗೋವಿಂದನಿಗೆ ನೆನಪಾಗುತ್ತದೆ. ಅದನ್ನು ಆತ ಹೇಳುತ್ತಿದ್ದಂತೆ ಅದೇನೋ ಸುಳಿವು ಸಿಕ್ಕಂತಾಗಿ ಶಿವಾಜಿ ಮತ್ತೆ ಆ ರೆಸಾರ್ಟ್ ರೂಮ್ೆ ಮರಳುತ್ತಾರೆ. ವಿಜ್ಞಾನಿ ಆರ್ಕಿಮಿಡೀಸ್ ಅದೇನೋ ತೋಚಿದಾಗ ‘ಯುರೇಕಾ ಯುರೇಕಾ’ ಎನ್ನುತ್ತ ನೀರಿನ ತೊಟ್ಟಿಯಿಂದ ಎದ್ದು ಬಂದಂತೆ, ಶಿವಾಜಿ ‘ಯುರೇಕಾ ಯುರೇಕಾ’ ಎನ್ನದಿದ್ದರೂ ಅದೇ ರೀತಿ ರೂಮ್ೊಳಕ್ಕೆ ಹೋಗುತ್ತಾರೆ. ಅಲ್ಲಿಂದ ಆ ಕೊಲೆ ಹೇಗಾಯಿತು ಎನ್ನುವ ಸುಳಿವು ಸಿಗುತ್ತ ಹೋಗುತ್ತದೆ. ಹೀಗೆ ಎರಡು ಕೊಲೆಯನ್ನಿಟ್ಟುಕೊಂಡು, ಎರಡು ಕಾಲಘಟ್ಟವನ್ನು ಮಿಳಿತವಾಗಿಸಿ ಎರಡು ಲುಕ್​ನಲ್ಲಿ ರಮೇಶ್ ಅವರನ್ನು ತೋರಿಸಿ ಒಂದೇ ಸಿನಿಮಾ ಆಗಿಸಿ ಕುತೂಹಲದಿಂದ ನೋಡಿಸಿಕೊಂಡು ಹೋಗುವಂತೆ ಮಾಡುವಲ್ಲಿ ನಿರ್ದೇಶಕ ಆಕಾಶ್ ಶ್ರೀವತ್ಸ ಬಹುತೇಕ ಯಶಸ್ವಿ ಆಗಿದ್ದಾರೆ.

ಒಂದೆರಡು ಕಡೆ ಲಾಜಿಕಲ್ ಲಿಂಕ್ ಮಿಸ್ಸಿಂಗ್ ಎಂಬಂತನಿಸಿದರೂ ಏಕಕಾಲದಲ್ಲಿ ಎರಡು ಕೊಲೆಯ ಕಥೆ, ಅದರ ತನಿಖೆಯ ಜಾಡನ್ನು ಒಂದರೊಳಗೊಂದನ್ನು ಹೆಣೆದಂತೆ ಕಟ್ಟಿಕೊಟ್ಟಿರುವ ನಿರ್ದೇಶಕರು, ಒಂದು ಪ್ರಕರಣ ಮತ್ತೊಂದು ಪ್ರಕರಣಕ್ಕೆ ಪ್ರವೇಶಿಸುವ ಸನ್ನಿವೇಶವನ್ನು ಚೆನ್ನಾಗಿ ನಿಭಾಯಿಸಿದ್ದಾರೆ. ಚಿತ್ರ ಮೊದಲಾರ್ಧಕ್ಕಿಂತಲೂ ದ್ವಿತೀಯಾರ್ಧದಲ್ಲಿ ಕೌತುಕ ಕೆರಳಿಸುತ್ತದೆ. ರಮೇಶ್ ತಮ್ಮ ಎಂದಿನ ಮ್ಯಾನರಿಸಂ ಜತೆಗೆ ಇಲ್ಲಿ ಎಂದಿಗಿಂತ ವಿಭಿನ್ನವಾಗಿಯೂ ಕಾಣಿಸಿಕೊಂಡಿದ್ದಾರೆ. ವಿಚಿತ್ರ ಪತ್ತೇದಾರಿ ತನಿಖಾಧಿಕಾರಿ ಆಗಿ ನಟಿಸಿರುವ ಅವರು ಮೊದಲಾರ್ಧದಲ್ಲಿ ಒಮ್ಮೆ ‘ಆಪ್ತಮಿತ್ರ’ದ ವಿಷ್ಣುವರ್ಧನ್ ಅವರನ್ನು ನೆನಪಿಸುತ್ತಾರೆ ಮತ್ತು ದ್ವಿತೀಯಾರ್ಧದಲ್ಲಿ ಹೆಚ್ಚು ಗಮನ ಸೆಳೆಯುತ್ತಾರೆ. ‘ರಂಗಿತರಂಗ’, ನಾಗವಲ್ಲಿಯನ್ನು ನೆನಪಿಸುವಂಥ ರಂಗನಾಯಕಿಯೂ ಇಲ್ಲಿ ಬಂದುಹೋಗುತ್ತಾಳೆ.

ಶಿವಾಜಿಯ ಸಹಾಯಕ ಗೋವಿಂದನ ಪಾತ್ರದಲ್ಲಿ ಚಿತ್ರದುದ್ದಕ್ಕೂ ಕಾಣಿಸಿಕೊಳ್ಳುವ ರಘು ರಾಮನಕೊಪ್ಪ ನಟನೆ ಕೂಡ ನೆನಪಿನಲ್ಲಿ ಉಳಿಯುತ್ತದೆ. ರಾಧಿಕಾ ನಾರಾಯಣ್ ಚಿತ್ರಪೂರ್ತಿ ಕಾಣಿಸಿಕೊಳ್ಳದಿದ್ದರೂ ಕಥೆಯಲ್ಲಿ ಪ್ರಮುಖ ಪಾತ್ರವಾಗಿ ಗಮನ ಸೆಳೆಯುತ್ತಾರೆ. ಘಟನೆ ನಡೆಯುವ ರಣಗಿರಿಯ ಲೊಕೇಷನ್, ಹಿನ್ನೆಲೆ ಸಂಗೀತ, ಸೌಂಡ್ ಎಫೆಕ್ಟ್, ಛಾಯಾಗ್ರಹಣ ಸಿನಿಮಾ ಪರಿಣಾಮಕಾರಿಯಾಗಿ ಮೂಡಿಬರುವಂತೆ ಮಾಡಿವೆ. ಜಯಂತ್ ಕಾಯ್ಕಿಣಿ ಅವರ ಸಾಹಿತ್ಯದ ಒಂದು ಗೀತೆ ಆಪ್ತವೆನಿಸುತ್ತದೆ. ಸಮಾಜದಲ್ಲಿ ಕಾನೂನಿನಿಂದಲೂ ನ್ಯಾಯ ಸಿಗದಿದ್ದಾಗ ಜನರು ಹೇಗೆ ಕಾನೂನು ಕೈಗೆ ತೆಗೆದುಕೊಳ್ಳುತ್ತಾರೆ.

ಇದಕ್ಕಾಗಿ ಹೇಗೆ ಭೂತ-ಪ್ರೇತಗಳ ಕಥೆ ಬಳಸಿಕೊಳ್ಳುತ್ತಾರೆ. ಕೊನೆಗೆ ಶಿವಾಜಿ ಅದನ್ನೇ ಹೇಗೆ ತಿರುಮಂತ್ರವಾಗಿಸುತ್ತಾನೆ ಎಂಬುದೇ ಚಿತ್ರಕಥೆ. ಅಂದಹಾಗೆ ರಣಗಿರಿಯಲ್ಲಿ ನಡೆದ ಹೋಮ್ ಮಿನಿಸ್ಟರ್ ಪುತ್ರನ ಕೊಲೆ ಪ್ರಕರಣದ ಬೆನ್ನಟ್ಟಿ ಹೋಗುವ ಶಿವಾಜಿಗೆ, ಹುಡುಕುತ್ತಿದ್ದ ಬಳ್ಳಿ ಕಾಲಿಗೇ ಸಿಕ್ಕಂತೆ ತನ್ನ ಪತ್ನಿಯ ಕೊಲೆಗಾರನೂ ಸಿಕ್ಕಿಬಿಡುತ್ತಾನೆ. ಆದರೆ ಅಲ್ಲಿ ಕೊಲೆಯಾದವನೇ ಕೊಲೆಗಾರನಾಗಿರುತ್ತಾನೆ. ಅಲ್ಲಿದ್ದ 11 ಮಂದಿಯಲ್ಲಿ ಕೊಲೆಗಾರ ಯಾರು? ಎಂಬುದನ್ನು ಶಿವಾಜಿ ಪತ್ತೆ ಮಾಡುವ ದೃಶ್ಯಾವಳಿಯೇ ಚಿತ್ರದ ಅತ್ಯಂತ ಕೌತುಕದ ಘಟ್ಟ. ಅಲ್ಲೊಂದು ‘ಯುರೇಕಾ’ ಫೀಲ್, ಅದೇನೆಂಬುದನ್ನು ತೆರೆಮೇಲೇ ನೋಡಬೇಕು.

ಚಿತ್ರ: ಶಿವಾಜಿ ಸುರತ್ಕಲ್ ನಿರ್ದೇಶನ: ಆಕಾಶ್ ಶ್ರೀವತ್ಸ ನಿರ್ವಣ: ಕೆ.ಎನ್.ರೇಖಾ, ಅನೂಪ್ ಗೌಡ ಪಾತ್ರವರ್ಗ: ರಮೇಶ್ ಅರವಿಂದ್, ರಾಧಿಕಾ ನಾರಾಯಣ್, ಆರೋಹಿ ನಾರಾಯಣ್, ರಾಘು ರಾಮನಕೊಪ್ಪ, ಅವಿನಾಶ್ ಮುಂತಾದವರು.

ರವಿಕಾಂತ ಕುಂದಾಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net