ವಿಜಯವಾಣಿ ಸಿನಿಮಾ ವಿಮರ್ಶೆ: ಸರಣಿ ಟ್ವಿಸ್ಟ್​ಗಳ ಟಿಸಿಲೊಳಗೆ ಆದ್ಯಾ

adya feb 2020
Published on

ಬೆಂಗಳೂರು: ಒಂದೇ ಮಾತಲ್ಲಿ ಹೇಳುವುದಾದರೆ ‘ಆದ್ಯಾ’ ನಿಮ್ಮನ್ನು ಸೀಟಿನ ತುದಿಗೆ ತಂದು ಕೂರಿಸುವ ಸಿನಿಮಾ! ಸರಣಿ ಟ್ವಿಸ್ಟ್​ಗಳನ್ನೇ ಬುನಾದಿ ಆಗಿಸಿಕೊಂಡು, ಅದರ ಮೇಲೆ ಬಹುಮಹಡಿ ಕಟ್ಟಡವನ್ನು ಕಟ್ಟಿದ್ದಾರೆ ನಿರ್ದೇಶಕ ಚೈತನ್ಯ ಕಾರೇಹಳ್ಳಿ.

ಆರಂಭದಿಂದ ಕೊನೆಯವರೆಗೂ ಸಿನಿಮಾ ನಿಮ್ಮನ್ನು ಕುತೂಹಲದಲ್ಲೇ ಮುಳುಗಿಸುತ್ತದೆ, ತೇಲಿಸುತ್ತದೆ. ಗೊತ್ತಿಲ್ಲದಂತೆ ಕಥೆಯೊಳಗೂ ಇಳಿಸಿಬಿಡುತ್ತದೆ. ಯೋಚನೆಗೆ ಹಚ್ಚುವ ಗುಣವೂ ಇದೆ. ಹಾಗಾಗಿ ‘ಆದ್ಯಾ’ ಸಿನಿಮಾ ಹಲವು ಕಾರಣಗಳಿಂದ ವಿಶೇಷ ಎನಿಸಿಕೊಳ್ಳುತ್ತದೆ. 2016ರಲ್ಲಿ ಟಾಲಿವುಡ್​ನಲ್ಲಿ ತೆರೆಕಂಡು ಸೂಪರ್ ಹಿಟ್ ಪಟ್ಟಿಗೆ ಸೇರಿದ್ದ ‘ಕ್ಷಣಂ’ ಚಿತ್ರದ ಪಡಿಯಚ್ಚು ಈ ‘ಆದ್ಯಾ’. ಅರ್ಥಾತ್, ‘ಕ್ಷಣಂ’ ಚಿತ್ರದ ರಿಮೇಕ್. ಅಲ್ಲಲ್ಲಿ ಕೆಲವಷ್ಟು ಬದಲಾವಣೆ ಮಾಡಿಕೊಂಡು, ಹೆಚ್ಚೇನೂ ಕುಸುರಿ ಕೆಲಸ ಮಾಡದೆ, ಮೂಲ ಸಿನಿಮಾದಲ್ಲಿನ ಅಂಶಗಳನ್ನೇ ಇಲ್ಲಿನ ನೇಟಿವಿಟಿಗೆ ಬಡಿಸಿದ್ದಾರೆ ನಿರ್ದೇಶಕರು.

ಕಥಾನಾಯಕ ಶಂಕರ್ ಕೋಲ್ಕತದಲ್ಲಿ ಉದ್ಯಮಿ. ಹೀಗಿರುವಾಗ ಬೆಂಗಳೂರಿನಿಂದ ಮಾಜಿ ಪ್ರಿಯತಮೆ ಸಂಗೀತಾ ಆತನಿಗೆ ಕರೆ ಮಾಡಿ, ತನ್ನ ಮಗು ಕಾಣೆಯಾದ ಬಗ್ಗೆ ವಿವರಿಸುತ್ತಾಳೆ. ಮಗು ಹುಡುಕಲು ಬರುವ ಶಂಕರ್​ಗೆ ಒಂದಾದ ಮೇಲೊಂದರಂತೆ ಟ್ವಿಸ್ಟ್​ಗಳು ಎದುರಾಗುತ್ತವೆ. ಹಾಗಾದರೆ ಆದ್ಯಾ ಯಾರ ಮಗಳು? ಆ ಬಾಲಕಿಗೂ ಪೊಲೀಸ್ ಅಧಿಕಾರಿ ಶ್ರುತಿಗೂ ಏನು ಸಂಬಂಧ? ಆದ್ಯಾ ನಿಜಕ್ಕೂ ಜೀವಂತವಾಗಿದ್ದಾಳಾ ಅಥವಾ ಅವಳ ಕೊಲೆಯಾಗಿದೆಯಾ? ಹೀಗೆ ಕೌತುಕದ ನಾನಾ ಪದರುಗಳು ಬಿಚ್ಚಿಕೊಳ್ಳುತ್ತ ಹೋಗುತ್ತವೆ. ಸಸ್ಪೆನ್ಸ್- ಥ್ರಿಲ್ಲರ್ ಜತೆಗೆ ಮಾನಸಿಕ ಖಿನ್ನತೆ, ವಾಸ್ತವ ಮತ್ತು ಭ್ರಮಾ ಲೋಕದ ಅನಾವರಣವನ್ನೂ ತನ್ನ ಒಡಲೊಳಗೆ ಇರಿಸಿಕೊಂಡಿದ್ದಾಳೆ ‘ಆದ್ಯಾ’. ಮೊದಲಾರ್ಧದಲ್ಲಿ ಯಾರಿಗೆ ಮಾನಸಿಕ ಅಸ್ವಸ್ಥಳು ಎಂಬ ಹಣೆ ಪಟ್ಟಿ ಕಟ್ಟಲಾಗಿರುತ್ತದೋ, ದ್ವಿತೀಯಾರ್ಧದಲ್ಲಿ ಸಂಪೂರ್ಣವಾಗಿ ಅದು ಉಲ್ಟಾ ಹೊಡೆಯುತ್ತದೆ.

ಅಲ್ಲಿಂದ ನೋಡುಗನಿಗೆ ರೋಚಕತೆಯ ಮತ್ತೊಂದು ಮಗ್ಗಲು ಪರಿಚಯವಾಗುತ್ತದೆ. ತೆಲುಗಿನಿಂದ ಎರವಲು ಪಡೆದಿದ್ದರಿಂದ ಕಥೆ ಬಗ್ಗೆ ಹೆಚ್ಚೇನೂ ಹೇಳುವ ಜರೂರತ್ತಿಲ್ಲ. ಬದಲಿಗೆ ಅದನ್ನು ಕನ್ನಡೀಕರಣಗೊಳಿಸುವಾಗ ಹೊಸದೇನಾದರೂ ಪ್ರಯತ್ನಿಸಬಹುದಾದ ಅವಕಾಶ ನಿರ್ದೇಶಕರಿಗಿತ್ತು. ಇನ್ನುಳಿದಂತೆ ಅಕ್ಷಯ್ ಪಿ. ರಾವ್ ಸಂಕಲನ ಕಥೆಯ ಓಟಕ್ಕೆ ಸಾಥ್ ನೀಡಿದೆ. ಚಿರಂಜೀವಿ ಸರ್ಜಾ ಅವರ ಹುಡುಕಾಟದ ಹಾದಿ ಥ್ರಿಲ್ ನೀಡಿದರೆ, ಶ್ರುತಿ ಹರಿಹರನ್ ಟ್ವಿಸ್ಟ್ ಮೂಲಕವೇ ಟಕ್ಕರ್ ಕೊಡುತ್ತಾರೆ. ಸಂಗೀತಾ ಭಟ್ ಸುಂದರವಾಗಿ ಕಂಡು ಹಾಗೇ ಮರೆಯಾಗುತ್ತಾರೆ. ಖಾಕಿ ಗತ್ತಿನಲ್ಲಿ ಜವಾರಿ ಭಾಷೆಯ ಬೈಗುಳಗಳನ್ನು ಸಲೀಸಾಗಿ ಒಪ್ಪಿಸಿ ಮೆಚ್ಚುಗೆ ಗಿಟ್ಟಿಸಿಕೊಳ್ಳುತ್ತಾರೆ ರವಿಶಂಕರ್ ಗೌಡ. ಶಶಾಂಕ್ ಪುರುಷೋತ್ತಮ್ ಗಂಭೀರವಾಗಿಯೇ ಕಾಣಿಸುತ್ತಾರೆ. ಮತ್ತೆ ಆದ್ಯಾ? ಅವಳನ್ನು ಸಿನಿಮಾದಲ್ಲೇ ನೋಡಿ.

ಚಿತ್ರ: ಆದ್ಯಾ

ನಿರ್ಮಾಣ : ಟಿ.ಜಿ. ವಿಶ್ವಪ್ರಸಾದ್, ರಘುನಾಥ್ ನಿರ್ದೇಶನ :ಚೈತನ್ಯ ಕಾರೇಹಳ್ಳಿ ಎಂ.

ಪಾತ್ರವರ್ಗ : ಚಿರಂಜೀವಿ ಸರ್ಜಾ, ಶ್ರುತಿ ಹರಿಹರನ್, ಸಂಗೀತಾ ಭಟ್, ರವಿಶಂಕರ್ ಗೌಡ, ಪ್ರಮೋದ್ ಶೆಟ್ಟಿ, ಶಶಾಂಕ್ ಪುರುಷೋತ್ತಮ್

ಮಂಜು ಕೊಟಗುಣಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net