

ಬೆಂಗಳೂರು: ‘ಮೊದಲು ಮಕ್ಕಳನ್ನು ಸರಿ ಮಾಡಬೇಕು ಎಂದುಕೊಂಡಿದ್ದೆ. ಈಗ ನೋಡಿದರೆ, ಮೊದಲು ಟೀಚರ್ಗಳನ್ನು ಸರಿ ಮಾಡಬೇಕು ...’ ಹಾಗಂತ ಗುರು ತೀರ್ವನಕ್ಕೆ ಬರುವಷ್ಟರಲ್ಲಿ ಸಾಕಷ್ಟು ಸಮಯವಾಗಿರುತ್ತದೆ. ಆತ ಮೇಷ್ಟ್ರಾಗಿ ಆ ಸರ್ಕಾರಿ ಶಾಲೆಗೆ ಹೋದಾಗ, ಅಲ್ಲಿ ನೂರೆಂಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಮೇಲಿನವರ ಕಿರಿಕಿರಿ, ಜೊತೆಗಾರರ ಉದಾಸೀನ, ಮಕ್ಕಳ ತರಲೆ... ಇವೆಲ್ಲವನ್ನೂ ಸಹಿಸಿಕೊಳ್ಳಬೇಕಾಗುತ್ತದೆ. ಒಂದು ಹಂತದಲ್ಲಿ ಮೊದಲು ಸರಿ ಮಾಡಬೇಕಾಗಿರುವುದು ಮಕ್ಕಳನ್ನಲ್ಲ, ವ್ಯವಸ್ಥೆ ಎಂದು ಅರಿವಾಗುತ್ತದೆ. ಅಂಥದ್ದೊಂದು ವ್ಯವಸ್ಥೆಯನ್ನು ಸರಿ ಮಾಡುವುದರ ಜತೆಗೆ, ಗುರು ಆ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ಹೇಗೆ ಪರಿವರ್ತಿಸುತ್ತಾನೆ ಎನ್ನುವುದೇ ‘ದ್ರೋಣ’ ಚಿತ್ರದ ಹೂರಣ.
ಸರ್ಕಾರಿ ಶಾಲೆ, ಅಲ್ಲಿನ ಪರಿಸ್ಥಿತಿ, ಅದರ ಕುರಿತಾದ ಸಮಾಜದ ನಿರ್ಲಕ್ಷ್ಯದ ಕುರಿತಾಗಿ ಇತ್ತೀಚಿನ ವರ್ಷಗಳಲ್ಲಿ ಕನ್ನಡದಲ್ಲಿ ಒಂದಿಷ್ಟು ಚಿತ್ರಗಳು ಬಂದಿವೆ. ಈ ಪೈಕಿ ಕೆಲವು ಚಿತ್ರಗಳು ಹಾಸ್ಯಮಯವಾಗಿದ್ದರೆ, ಕೆಲವು ಗಂಭೀರವಾಗಿ ಮೂಡಿಬಂದಿವೆ. ‘ದ್ರೋಣ’ ಚಿತ್ರದಲ್ಲಿ ಇದೇ ವಿಷಯವನ್ನು ಪಕ್ಕಾ ಕಮರ್ಷಿಯಲ್ ರೀತಿಯಲ್ಲಿ ಹೇಳಲಾಗಿದೆ ಎನ್ನುವುದೇ ವಿಶೇಷ.
ಒಬ್ಬ ಗುರು ಮನಸ್ಸು ಮಾಡಿದರೆ, ತನ್ನ ಶಾಲೆಯನ್ನು ಮತ್ತು ಸುತ್ತಮುತ್ತಲಿನ ಪರಿಸರವನ್ನು ಎಷ್ಟು ಚೆನ್ನಾಗಿ ಇಟ್ಟುಕೊಳ್ಳಬಲ್ಲ ಎಂಬ ಕಥೆ ಇರುವ ‘ದ್ರೋಣ’, ಒಂದು ಪಕ್ಕಾ ಕಮರ್ಷಿಯಲ್ ಚಿತ್ರ. ಒಂದು ಗಂಭೀರ ವಿಷಯವನ್ನು ಮಾಸ್ ಅಂಶಗಳೊಂದಿಗೆ ಹೀಗೂ ಹೇಳಬಹುದು ಎಂದು ನಿರ್ದೇಶಕ ಪ್ರಮೋದ್ ಚಕ್ರವರ್ತಿ ತೋರಿಸಿದ್ದಾರೆ. ಹಾಗೆ ನೋಡಿದರೆ, ಇದು ತಮಿಳಿನ ‘ಸಟೈ’ ಎಂಬ ಚಿತ್ರದ ರೀಮೇಕು.
2012ರಲ್ಲಿ ಸಮುದ್ರಕಣಿ ಅಭಿನಯದಲ್ಲಿ ಮೂಡಿಬಂದ ಈ ಚಿತ್ರವನ್ನು ಕನ್ನಡಕ್ಕೆ ಹೊಂದುವಂತೆ ಮಾಡಿದ್ದಾರೆ ಪ್ರಮೋದ್. ಇಲ್ಲಿ ಸರ್ಕಾರಿ ಶಾಲೆಗಳನ್ನು ಉಳಿಸಿ ಎನ್ನುವ ಸಾಮಾಜಿಕ ಕಳಕಳಿಯ ಜತೆಗೆ ಕಾಮಿಡಿ, ಲವ್, ಆಕ್ಷನ್, ಸೆಂಟಿಮೆಂಟ್ ಎಲ್ಲವೂ ಇದೆ. ಎಲ್ಲ ವರ್ಗದ ಜನರಿಗೆ ಚಿತ್ರ ತಲುಪಿಸಬೇಕೆಂದು, ಎಲ್ಲವನ್ನೂ ಮಿಶ್ರಣ ಮಾಡಿ ಚಿತ್ರ ಮಾಡಲಾಗಿದೆ. ಕಾಮಿಡಿ ದೃಶ್ಯಗಳು ಸ್ವಲ್ಪ ಅತಿರೇಕವೆನಿಸಿದರೆ, ಕೆಲವು ಎಮೋಷನಲ್ ದೃಶ್ಯಗಳು ಪ್ರೇಕ್ಷಕರ ಕಣ್ಣಂಚಿನಲ್ಲಿ ನೀರು ತರಿಸುತ್ತವೆ. ಇನ್ನು ‘ಶ್ರೀರಾಮನೇ ...’ ಹಾಡು, ಆಕ್ಷನ್ ದೃಶ್ಯಗಳಂತೂ ಶಿವರಾಜಕುಮಾರ್ ಅಭಿಮಾನಿಗಳಿಗೆ ದೊಡ್ಡ ಸುಗ್ಗಿ. ಚಿತ್ರದ ಹೈಲೈಟ್ ಎಂದರೆ ಶಿವರಾಜಕುಮಾರ್. ಗುರು ಎಂಬ ಶಿಕ್ಷಕನ ಪಾತ್ರವನ್ನು ಅವರು ತೆರೆಯ ಮೇಲೆ ತಂದಿರುವ ರೀತಿಯೇ ಖುಷಿಕೊಡುತ್ತದೆ. ಅವರ ಮಾತು, ಸ್ಟೈಲು, ಎನರ್ಜಿ ಎಲ್ಲವೂ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ.‘ಮಿಸ್ಸಿಂಗ್ ಬಾಯ್’ ಮತ್ತು ‘ಪಂಚತಂತ್ರ’ ಚಿತ್ರಗಳ ನಂತರ ರಂಗಾಯಣ ರಘು ಅವರು ಒಂದು ವಿಶಿಷ್ಟ ಮತ್ತು ವಿಚಿತ್ರ ಪಾತ್ರ ಮಾಡಿದ್ದು, ಮಾಸ್ ಪ್ರೇಕ್ಷಕರಿಗೆ ಖುಷಿಕೊಡುತ್ತಾರೆ. ಮಿಕ್ಕಂತೆ ಬಾಬು ಹಿರಣ್ಣಯ್ಯ, ಸ್ವಾತಿ ಶರ್ಮ, ಶಂಕರ್ ರಾವ್ ಮುಂತಾದವರು ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಬಾಲಿವುಡ್ನಿಂದ ಬಂದಿರುವ ರವಿಕಿಶನ್ಗೆ ಇಲ್ಲಿ ಹೆಚ್ಚು ಕೆಲಸವಿಲ್ಲ. ತಾಂತ್ರಿಕ ವಿಷಯಗಳ ಬಗ್ಗೆ ಹೇಳುವುದಾದರೆ, ಹಾಡುಗಳು ಮತ್ತು ಆಕ್ಷನ್ ದೃಶ್ಯಗಳನ್ನು ಬಹಳ ಅದ್ಧೂರಿಯಾಗಿ ಸೆರೆಹಿಡಿದಿದ್ದಾರೆ ಜಿ.ಎಸ್. ವಾಲಿ. ರಾಮ್್ರ್ ಹಿನ್ನೆಲೆ ಸಂಗೀತದಲ್ಲಿ ಹೆಚ್ಚು ಗಮನಸೆಳೆಯುತ್ತಾರೆ.
ಚಿತ್ರ: ದ್ರೋಣ ನಿರ್ಮಾಣ: ಮಹದೇವ್, ಸಂಗಮೇಶ್ ನಿರ್ದೇಶನ: ಪ್ರಮೋದ್ ಚಕ್ರವರ್ತಿ ತಾರಾಗಣ: ಶಿವರಾಜಕುಮಾರ್, ರವಿಕಿಶನ್, ರಂಗಾಯಣ ರಘು, ಸ್ವಾತಿ ಶರ್ಮ ಮುಂತಾದವರು
ಚೇತನ್ ನಾಡಿಗೇರ್