ವಿಜಯವಾಣಿ ಸಿನಿಮಾ ವಿಮರ್ಶೆ: ಸೈಬರ್​ ಕ್ರೈಂಗೆ ಸಾಮಾನ್ಯನ ಟಕ್ಕರ್​

Takker
Published on

| ಚೇತನ್​ ನಾಡಿಗೇರ್​

ಬೆಂಗಳೂರು:ಕೆಲವೇ ದಿನಗಳ

ಅಂತರದಲ್ಲಿ ಹಲವು ಹೆಣ್ಮಕ್ಕಳು ನಿಗೂಢವಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಅವರು ಸಾಯುವ ಮುನ್ನ ಅವರಿಗೆ ಪ್ರೈವೇಟ್​ ನಂಬರ್​ವೊಂದರಿಂದ ಫೋನ್​​ ಬರುತ್ತಿರುತ್ತದೆ. ಅಲ್ಲಿಯವರೆಗೂ ಸಂತೋಷವಾಗಿಯೇ ಇದ್ದ ಅವರು, ಆ ಕಾಲ್​ನ ನಂತರ ಖಿನ್ನರಾಗಿ ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿರುತ್ತಾರೆ. ಇಷ್ಟಕ್ಕೂ ಆ ಆತ್ಮಹತ್ಯೆಗಳಿಗೆ ಕಾರಣವೇನು? ಜನಸಾಮಾನ್ಯರು ಅನುಭವಿಸುತ್ತಿರುವ ಹಲವು ಸಮಸ್ಯಗಳಲ್ಲಿ ಸೈಬರ್​ ಕ್ರೈಂ ಸಹ ಒಂದು. ಈ ಸಮಸ್ಯೆಯನ್ನು ಇಟ್ಟುಕೊಂಡು ಕೆಮ್​ ಥ್ರಿಲ್ಲರ್​ ಚಿತ್ರ ಮಾಡಿದ್ದಾರೆ ರಘು ಶಾಸ್ತ್ರಿ.

ಈ ಮಾಫಿಯಾ ವಿರುದ್ಧ ಸಾಮಾನ್ಯ ಮನುಷ್ಯನೊಬ್ಬನೇ ತಿರುಗಿ ಬಿದ್ದರೆ ಏನಾಗುತ್ತದೆ ಎಂದು ಹೇಳುವ ಪ್ರಯತ್ನ ಮಾಡಿದ್ದಾರೆ. ರಘು ಶಾಸ್ತ್ರಿ ಉದ್ದೇಶ ಮತ್ತು ಕಾಳಜಿ ಮೆಚ್ಚುವಂತದ್ದೇ. ಆದರೆ, ಅದನ್ನು ತೆರೆಯ ಮೇಲೆ ತರುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೇಳುವುದು ಕಷ್ಟ. ಏಕೆಂದರೆ, ಈ ತರಹದ ಕಥೆಯನ್ನು ಕಮರ್ಷಿಯಲ್​ ಚೌಕಟ್ಟಿನಲ್ಲಿ ಹೇಳುವಾಗ, ಬೇಕೋ ಬೇಡವೋ ಒಂದಿಷ್ಟು ಅಂಶಗಳನ್ನು ಸೇರಿಸಬೇಕಾಗುತ್ತದೆ. ಹಾಗೆ ಸೇರಿಸುತ್ತಾ ಹೋದ ಹಾಗೆ, ಮೂಲ ಕಥೆಯಿಂದ ದೂರಾಗಬೇಕಾಗುತ್ತದೆ. "ಟಕ್ಕರ್​'ನಲ್ಲಾಗುವುದು ಸಹ ಅದೇ.

ಚಿತ್ರ ಶುರುವಾಗುವುದೇ ನಿದ್ದರೂ ಮಧ್ಯಂತರದ ನಂತರ. ಅಲ್ಲಿಯವರೆಗೂ ಚಿತ್ರವು ನಾಯಕನನ್ನು ಮೆರೆಸುವುದಕ್ಕೆ ಮೀಸಲಾಗುತ್ತದೆ. ಯಾವಾಗ ಅವನ ತಂಗಿಯಂತ ಗೆಳತಿ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೋ, ನಾಯಕ ಸ್ವಲ್ಪ ಗಂಭೀರನಾಗುತ್ತಾನೆ. ಆಕೆಯ ಸಾವಿನ ಆಳಕ್ಕೆ ಇಳಿಯುತ್ತಿದ್ದಂತೆ ಅವನಿಗೆ ಹಲವು ವಿಷಯಗಳ ಜ್ಞಾನೋದಯವಾಗುತ್ತದೆ. ಅಲ್ಲಿಂದ ಚಿತ್ರಕ್ಕೊಂದು ತಿರುವು ಸಿಗುತ್ತದೆ. ಚಿತ್ರದ ಕೊನೆಯ ಅರ್ಧ ತಾಸು ಸೀಟಿನ ಅಂಚಿಗೆ ಕುಳಿತು ನೋಡುವಷ್ಟು ರೋಚಕವಾಗಿದೆ. ಇದೆಲ್ಲವನ್ನೂ ಪಕ್ಕಕ್ಕಿಟ್ಟು ನೋಡಿದರೆ, ಇದೊಂದು ಅರಿವು ಮೂಡಿಸುವ ಚಿತ್ರ. ಅಷ್ಟೇ ಅಲ್ಲ, ಎಚ್ಚರಿಕೆಯ ಸಂದೇಶ ಸಾರುವ ಚಿತ್ರ.

ಮನೋಜ್​ಗೆ ಇದು ನಾಯಕನಾಗಿ ಮೊದಲ ಚಿತ್ರ. ಸಾಹಸ ದೃಶ್ಯಗಳಲ್ಲಿ ಅವರು ಸಲೀಸು. ನಟನೆಯಲ್ಲಿ ಇನ್ನಷ್ಟು ಪಳಗಿದರೆ, ಕನ್ನಡಕ್ಕೆ ಇನ್ನೊಬ್ಬ ಪ್ರತಿಭಾವಂತ ಆರಡಿ ಹೀರೋ ಸಿಕ್ಕಂತಾಗುತ್ತದೆ. ರಂಜನಿಗೆ ಹೆಚ್ಚು ಕೆಲಸವಿಲ್ಲ. ಸಾಧು ಇದ್ದರೂ ಚಿತ್ರದಲ್ಲಿ ಕಾಮಡಿ ಇಲ್ಲ. "ಭಜರಂಗಿ' ಲೋಕಿ ತಮ್ಮ ತಣ್ಣನೆಯ ಅಭಿನಯದಿಂದ ಆವರಿಸಿಕೊಳ್ಳುತ್ತಾರೆ. ಕೆ.ಎಸ್​. ಶ್ರೀಧರ್​, ಸುಮಿತ್ರಾ ಮುಂತಾದವರಿಗೆ ಹೆಚ್ಚು ಕೆಲಸವಿಲ್ಲ. ಸಂಗೀತ, ಛಾಯಾಗ್ರಹಣದಲ್ಲಿ ವಿಶೇಷ ಅನ್ನುವಂತದ್ದೇನೂ ಇಲ್ಲ.

ಚಿತ್ರ: ಟಕ್ಕರ್​

ನಿರ್ದೇಶನ: ರಘು ಶಾಸ್ತ್ರಿ

ನಿರ್ಮಾಣ: ನಾಗೇಶ್​ ಕೋಗಿಲು

ತಾರಾಗಣ: ಮನೋಜ್​ ಕುಮಾರ್​, ರಂಜನಿ ರಾವನ್​, "ಭಜರಂಗಿ' ಲೋಕಿ, ಜೈಜಗದೀಶ್​ ಮುಂತಾದವರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net