ವಿಜಯವಾಣಿ ರಾಜ್ ಉತ್ಸವ: ಒಳಗೂ ಬಿಳಿ..ಹೊರಗೂ ಬಿಳಿ!

Rajkumar Final
Published on

ಡಾ. ರಾಜಕುಮಾರ್ ಎಂದರೆ ಕಣ್ಣಿಗೆ ಬರುವುದು ಅವರ ಸರಳತೆ. ಚಿತ್ರಗಳಲ್ಲಿ ಕಲರ್​ಫುಲ್ ಕಾಸ್ಟೂ್ಯಮ್ಳಲ್ಲಿ ಮಿಂಚುತ್ತಿದ್ದ ಅವರು, ನಿಜಜೀವನದಲ್ಲಿ ಮಾತ್ರ ಯಾವತ್ತೂ ವೈಟ್ ಆಂಡ್ ವೈಟ್​ನಲ್ಲಿಯೇ ಕಾಣಿಸಿಕೊಳ್ಳುತ್ತಿದ್ದರು. ಪ್ರಶಸ್ತಿ ಪ್ರದಾನ ಸಮಾರಂಭಗಳೇ ಇರಲಿ ಅಥವಾ ಖಾಸಗೀ ಸಮಾರಂಭಗಳೇ ಇರಲಿ, ರಾಜಕುಮಾರ್ ಅಲ್ಲಿ ಹಾಜರಿದ್ದಾರೆ ಎಂದರೆ, ಅದು ಬಿಳಿ ಶರ್ಟ್ ಮತ್ತು ಪಂಚೆಯಲ್ಲಿ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಬರೀ ಸಭೆ-ಸಮಾರಂಭಗಳಲ್ಲಷ್ಟೇ ಅಲ್ಲ, ಮನೆಯಲ್ಲೂ ಅವರು ಯಾವಾಗಲೂ ಬಿಳಿ ಶರ್ಟ್ ಮತ್ತು ಪಂಚೆಯಲ್ಲಿಯೇ ಕಂಗೊಳಿಸುತ್ತಿದ್ದರು ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಆರಂಭದ ವರ್ಷಗಳಲ್ಲಿ ರಾಜಕುಮಾರ್ ಅವರು ಮನೆಯಲ್ಲಿ ಬೇರೆ ಬಣ್ಣದ ಬಟ್ಟೆಗಳನ್ನು ತೊಡುತ್ತಿದ್ದರಂತೆ. ಆದರೆ, ಒಂದು ಹಂತದ ನಂತರ ಶುಭ್ರ ಬಿಳಿ ಬಣ್ಣದ ಬಟ್ಟೆಗಳನ್ನೇ ಅವರು ತೊಡುವುದಕ್ಕೆ ಶುರು ಮಾಡಿದ್ದರು.

ಅಪ್ಪಾಜಿ ಅವರ ಮನಸ್ಸು ಹೇಗೋ, ಬಟ್ಟೆ ಸಹ ಬಿಳಿಯಾಗಿರಬೇಕು ಎಂದು ಬಯಸುತ್ತಿದ್ದರು ಎಂದು ಶಿವರಾಜಕುಮಾರ್ ಹಿಂದೊಮ್ಮೆ ಹೇಳಿಕೊಂಡಿದ್ದರು. ‘ಅವರ ಬಣ್ಣವೂ ಬಿಳಿ. ಒಳಗೂ ಬಿಳಿ. ಹಾಕುತ್ತಿದ್ದ ಬಟ್ಟೆಯೂ ಬಿಳಿಯೇ. ಬಿಳಿ ಎನ್ನುವುದು ಶಾಂತಿಯ ಸಂಕೇತ. ಸದಾ ಬಿಳಿ ಬಟ್ಟೆಯಲ್ಲೇ ಅವರು ಕಾಣಿಸಿಕೊಳ್ಳುತ್ತಿದ್ದುದು. ಬಹಳ ಕಡಿಮೆ ಸಂದರ್ಭದಲ್ಲಿ ಅವರು ಬಣ್ಣದ ಬಟ್ಟೆಗಳನ್ನು ಹಾಕುತ್ತಿದ್ದರು. ನಾವಿಬ್ಬರೂ ಒಮ್ಮೆ ಚೆನ್ನೈನಿಂದ ಬೆಂಗಳೂರಿಗೆ ಫ್ಲೈಟ್​ನಲ್ಲಿ ಬರುವಾಗ ಜೀನ್ಸ್ ಮತ್ತು ಟೀಶರ್ಟ್ ತೊಟ್ಟು ಬಂದಿದ್ದೆವು. ಅದೂ ಬಹಳ ಒತ್ತಾಯ ಮಾಡಿ ಹಾಕಿಸಿದಾಗ ಅವರು ಹಾಕಿಕೊಂಡರೇ ಹೊರತು, ಅವರಾಗಿಯೇ ಬೇರೆ ಬಣ್ಣದ ಬಟ್ಟೆಗಳನ್ನು ಹಾಕುವುದಕ್ಕೆ ಸಿದ್ಧರಿರಲಿಲ್ಲ.

ಈ ಕುರಿತು ಹಿಂದೊಮ್ಮೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಪುನೀತ್, ‘ನಾನು ಆರೇಳು ವರ್ಷದವನಿದ್ದಾಗ ಅಪ್ಪಾಜಿ ಕಲರ್ ಶರ್ಟ್ ಮತ್ತು ಲುಂಗಿ ತೊಡುವುದನ್ನು ನೋಡಿದ್ದೆ. ಮಿಕ್ಕಂತೆ, ನನಗೆ ನೆನಪಿರುವಂತೆ ಅಪ್ಪಾಜಿ ಯಾವತ್ತೂ ವೈಟ್ ಆಂಡ್ ವೈಟ್​ನಲ್ಲೇ ಹೆಚ್ಚು ಕಾಣಿಸಿಕೊಳ್ಳುತ್ತಿದ್ದರು. ಹಾಗಾಗಿ ಅವರಿಗೆ ಬಟ್ಟೆಯನ್ನು ಗಿಫ್ಟ್ ಮಾಡುವುದಕ್ಕೆ ಬಹಳ ಕಷ್ಟವಾಗುತ್ತಿತ್ತು. ಬೇರೆ ಬಣ್ಣದ ಬಟ್ಟೆ ಹಾಕದ ಕಾರಣ, ಅದನ್ನು ತಂದುಕೊಡುವುದಕ್ಕೆ ಆಗುತ್ತಿರಲಿಲ್ಲ. ಹಾಗಾಗಿ ಬಟ್ಟೆಗಳನ್ನು ಬಿಟ್ಟು, ಅವರಿಗೆ ಕೂರುವುದಕ್ಕೆ ಅನುಕೂಲವಾಗುವಂತಹ ಸೋಫಾಗಳು, ಟಿವಿ, ಸಂಜೆ ವಾಕಿಂಗ್ ಮಾಡುವುದಕ್ಕೆ ಎಂದು ಶೂಗಳನ್ನು ಗಿಫ್ಟ್ ಮಾಡಿದ್ದುಂಟು. ಅದರಲ್ಲೂ ಶೂಗಳನ್ನು ಕೊಡುವಾಗ, ಅದರ ಬೆಲೆಯಿಂದ ಒಂದು ಸೊನ್ನೆ ಕಡಿಮೆ ಮಾಡಿ ಹೇಳುತ್ತಿದ್ದೆ. ಏಕೆಂದರೆ, ಅದರ ನಿಜವಾದ ರೇಟ್ ಹೇಳಿದರೆ, ಅವರು ಶೂ ಹಾಕುತ್ತಲೇ ಇರಲಿಲ್ಲ. ಇಷ್ಟೊಂದು ಬೆಲೆ ಬಾಳುವ ಶೂಗಳು ತಮಗೇಕೆ ಎಂದು ವಾಪಸ್ಸು ಮಾಡಿಬಿಡುತ್ತಿದ್ದರು. ಹಾಗಾಗಿ ಬೆಲೆ ಕಡಿಮೆ ಮಾಡಿ ಹೇಳಬೇಕಿತ್ತು’ ಎಂದು ಪುನೀತ್ ಹೇಳಿಕೊಂಡಿದ್ದರು.

ರಾಜಕುಮಾರ್ ಅವರು ಹಲವು ನಗರಗಳಲ್ಲಿ ಸಂಗೀತ ಸಂಜೆಗಳನ್ನು ನಡೆಸಿಕೊಡುತ್ತಿದ್ದುದು ಎಲ್ಲರಿಗೂ ಗೊತ್ತೇ ಇದೆ. ಆ ಸಂಗೀತ ಸಂಜೆಗಳಲ್ಲೂ ಅವರು ಬಿಳಿ ಬಟ್ಟೆಗಳಲ್ಲಿ ಕಾಣಿಸಿಕೊಂಡಿದ್ದೇ ಹೆಚ್ಚು. ಕೆಲವು ಹಾಡುಗಳಿಗೆ ಬಣ್ಣದ ಬಟ್ಟೆ ಮತ್ತು ಶೂ ತೊಟ್ಟು ಡ್ಯಾನ್ಸ್ ಮಾಡಿದ್ದು ಬಿಟ್ಟರೆ, ಮಿಕ್ಕಂತೆ ಸಂಗೀತ ಸಂಜೆಯ ಬಹುತೇಕ ಭಾಗ ಅವರು ಬಿಳಿ ಬಟ್ಟೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು ಎಂದು ಹೇಳಲಾಗುತ್ತದೆ. ಬರೀ ಬಿಳಿಯ ಬಟ್ಟೆಗಳನ್ನಷ್ಟೇ ಹಾಕಬಾರದು, ರಾಜಕುಮಾರ್ ಅವರು ಕಲರ್​ಫುಲ್ ಬಟ್ಟೆಗಳನ್ನು ತೊಡಬೇಕು ಎಂದು ಅವರ ಹತ್ತಿರದವರ ಆಸೆಯಾಗಿತ್ತಂತೆ. ಅದೇ ಕಾರಣಕ್ಕೆ ಅವರಿಗೆ ಬಣ್ಣದ ಬಟ್ಟೆಗಳನ್ನು ತೊಡುವಂತೆ ಒತ್ತಾಯ ಮಾಡಲಾಗುತ್ತಿತ್ತಂತೆ. ಅದೊಂದು ದಿನ ರಾಜಕುಮಾರ್ ಅವರು ಚಿತ್ರೀಕರಣ ಮುಗಿಸಿ, ಅದೇ ಬಟ್ಟೆಗಳೊಂದಿಗೆ ಬೆಂಗಳೂರಿಗೆ ಹೊರಟು ನಿಂತರಂತೆ. ಬೆಂಗಳೂರಿನ ಏರ್​ಪೋರ್ಟ್​ನಲ್ಲಿ ಇಳಿದು ಹೊರಬರುತ್ತಿದ್ದಂತೆಯೇ, ಅವರನ್ನು ಗುರುತಿಸಿದ ಗಾರ್ಡ್​ವೊಬ್ಬರು ಅವರನ್ನು ತಡೆದಿದ್ದಾರೆ. ಮಾತಿನ ಮಧ್ಯೆ, ಅವರು ಒಂದು ವಿಷಯ ಹೇಳಿದರಂತೆ. ‘ಸಿನಿಮಾಗಳ ಹೊರಗೆ ಅಭಿಮಾನಿಗಳು ಯಾವತ್ತೂ ನಿಮ್ಮನ್ನು ಬಿಳಿಬಟ್ಟೆಗಳಲ್ಲೇ ನೋಡಲು ಇಷ್ಟಪಡುತ್ತೇವೆ’ ಎಂದರಂತೆ. ಅಲ್ಲಿಂದ ರಾಜಕುಮಾರ್ ಮುಂದೆ ಹೊರಗೆ ಕಾಣಿಸಿಕೊಂಡಾಗ ಯಾವತ್ತೂ ಶುಭ್ರ ಬಿಳಿಬಟ್ಟೆಗಳಲ್ಲೇ ಕಾಣಿಸಿಕೊಳ್ಳುತ್ತಿದ್ದರು ಎನ್ನುವುದು ಗಮನಾರ್ಹ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net