ವಿಜಯವಾಣಿ ರಾಜ್ ಉತ್ಸವ: ತಾಯಿಗೆ ಪ್ರಪಂಚ ತೋರಿಸುವ ಆಸೆ

Rajkumar 1
Published on

ಡಾ. ರಾಜಕುಮಾರ್ ಅವರಿಗೆ ತಮ್ಮ ತಂದೆ-ತಾಯಿಯ ಮೇಲೆ ಅದೆಷ್ಟು ಪ್ರೀತಿ-ಗೌರವವಿತ್ತು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಅವರು ಪ್ರತಿನಿತ್ಯ ತಮ್ಮ ತಂದೆ-ತಾಯಿಯನ್ನು ನೆನಪಿಸಿಕೊಳ್ಳುವುದರ ಜತೆಗೆ, ತಮ್ಮ ಭಾಷಣಗಳಲ್ಲೂ ಹಲವು ಬಾರಿ ತಂದೆ-ತಾಯಿಯನ್ನು ನೆನಪಿಸಿಕೊಳ್ಳದೇ ಮಾತು ಮುಗಿಸುತ್ತಿರಲಿಲ್ಲವಂತೆ. ಪ್ರತಿದಿನ ಚಿತ್ರೀಕರಣಕ್ಕೆ ಹೋಗುವ ಮುನ್ನ ತಾಯಿ ಕಾಲಿಗೆ ನಮಸ್ಕಾರ ಮಾಡಿ ಹೋಗುತ್ತಿದ್ದ ರಾಜಕುಮಾರ್, ಅದೊಮ್ಮೆತಮ್ಮ ತಾಯಿಗೆ ವಿದೇಶಕ್ಕೆ ಬರುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂಬ ಕಾರಣಕ್ಕೆ ಫಾರಿನ್ ಟ್ರಿಪ್ ಅನ್ನೇ ಕ್ಯಾನ್ಸಲ್ ಮಾಡುವುದಕ್ಕೆ ಹೊರಟಿದ್ದರಂತೆ. ಕೊನೆಗೆ ಅವರ ತಾಯಿಗೂ ಪಾಸ್​ಪೋರ್ಟ್ ಮತ್ತು ಟಿಕೆಟ್​ಗಳನ್ನು ಮಾಡಿಸಿದ ನಂತರ ಅವರು ಒಪ್ಪಿ ವಿದೇಶ ಪ್ರಯಾಣಕ್ಕೆ ಹೊರಟರಂತೆ.

ವಿದೇಶಗಳಲ್ಲಿ ಕನ್ನಡ ಚಿತ್ರಗಳ ಚಿತ್ರೀಕರಣ ಶುರುವಾಗಿದ್ದು 1975ರ ನಂತರ. ವಿದೇಶದಲ್ಲಿ ಚಿತ್ರೀಕರಣಗೊಂಡ ರಾಜಕುಮಾರ್ ಅವರ ಮೊದಲ ಚಿತ್ರ ಎಂದರೆ ಅದು ‘ಆಪರೇಷನ್ ಡೈಮೆಂಡ್ ರಾಕೆಟ್’. ಬಾಂಡ್ ಮಾದರಿಯ ಚಿತ್ರವನ್ನು ಪಕ್ಕದ ನೇಪಾಳದಲ್ಲಿ ಚಿತ್ರೀಕರಣ ಮಾಡಲಾಗಿತ್ತು. ಈ ಚಿತ್ರದ ನಂತರ ರಾಜಕುಮಾರ್ ಅವರ ತಂಡದಲ್ಲಿ ವಿದೇಶ ಪ್ರವಾಸಕ್ಕೆ ಹೋಗುವ ತೀರ್ವನವಾಯಿತಂತೆ. ದ್ವಾರಕಾನಾಥ್ ಎನ್ನುವವರು ಅದರ ಉಸ್ತುವಾರಿಯನ್ನು ಹೊತ್ತರಂತೆ. ಅವರ ಸಂಬಂಧಿಕರು ಮತ್ತು ಒಂದಿಷ್ಟು ಸ್ನೇಹಿತರು ವಿದೇಶದಲ್ಲಿ ಇದ್ದುದರಿಂದ, ಅವರೆಲ್ಲರ ಸಂಪರ್ಕದಿಂದ ಒಂದು ಪ್ರವಾಸ ಪ್ಲಾನ್ ಮಾಡಿದ್ದರಂತೆ. ಈ ಪ್ರವಾಸದಲ್ಲಿ ರಾಜಕುಮಾರ್, ಪಾರ್ವತಮ್ಮ ರಾಜಕುಮಾರ್, ಎಸ್.ಎ. ಗೋವಿಂದರಾಜ್, ದೊರೆ-ಭಗವಾನ್ ಸೇರಿ ಹಲವರು 40ಕ್ಕೂ ಹೆಚ್ಚು ದಿನಗಳ ಕಾಲ ಒಂದಿಷ್ಟು ದೇಶಗಳನ್ನು ಸುತ್ತಿಬರುವ ಐಡಿಯಾ ಇತ್ತಂತೆ.

ಇದು ರಾಜಕುಮಾರ್ ಅವರಿಗೆ ಗೊತ್ತಿಲ್ಲದ ವಿಷಯವೇನಲ್ಲ. ಏಕೆಂದರೆ, ಕೆಲವು ಅಗತ್ಯದ ಪತ್ರಗಳಿಗೆಲ್ಲ ಅವರ ಸಹಿ ಬೇಕಾಗಿದ್ದರಿಂದ, ಎಲ್ಲವೂ ಅವರ ಗಮನಕ್ಕೆ ತರಲಾಗುತ್ತಿತ್ತಂತೆ. ಇನ್ನೇನು ವಿದೇಶ ಪ್ರವಾಸದ ದಿನ ಹತ್ತಿರ ಬಂತು ಎನ್ನುವಷ್ಟರಲ್ಲಿ, ಅದೊಂದು ದಿನ ಮಾತನಾಡುವ ಸಂದರ್ಭದಲ್ಲಿ ರಾಜಕುಮಾರ್, ತಮ್ಮ ಟಿಕೆಟ್ ಕ್ಯಾನ್ಸಲ್ ಮಾಡುವುದಕ್ಕೆ ಹೇಳಿದ್ದಾರೆ. ಇದನ್ನು ಕೇಳಿ ಸಹಜವಾಗಿಯೇ ಎಲ್ಲರಿಗೂ ಸಹಜವಾಗಿಯೇ ಬೇಸರವಾಗಿದೆ. ಕೊನೆಗೆ, ಕಾರಣ ಕೆದಕಿದಾಗ, ತಮ್ಮ ತಾಯಿಯನ್ನು ಕರೆದುಕೊಂಡು ಹೋಗುವುದಾದರೆ ತಾವು ಸಹ ಬರುವುದಾಗಿ ಹೇಳಿದರಂತೆ. ರಾಜಕುಮಾರ್ ಅವರಿಗೆ ತಮ್ಮ ತಾಯಿಯನ್ನು ಪ್ರಪಂಚ ಪರ್ಯಟನೆ ಮಾಡಿಸಬೇಕು ಎಂಬ ಆಸೆ ಇತ್ತಂತೆ. ಆದರೆ, ಅಷ್ಟು ವರ್ಷಗಳ ಕಾಲ ಅದು ಸಾಧ್ಯವಾಗಿರಲಿಲ್ಲ. ಈಗ ಅವಕಾಶ ಸಿಕ್ಕಿರುವುದರಿಂದ, ಅವರು ಬಂದರೆ ಮಾತ್ರ ತಾವು ಸಹ ಬರುವುದಾಗಿ ಹೇಳಿದರಂತೆ. ಕೊನೆಗೆ ರಾಜ್ ಅವರ ತಾಯಿಯ ಪಾಸ್​ಪೋರ್ಟ್ ಮತ್ತು ಟೆಕೆಟ್​ಗಳನ್ನು ಮಾಡಿಸಿ ಅವರನ್ನೂ ಕರೆದುಕೊಂಡು ಫಾರಿನ್​ಗೆ ಹೋಗಲಾಯಿತು. ಬೆಂಗಳೂರಿನಿಂದ ದೆಹಲಿ, ಏಥನ್ಸ್, ಆಮ್್ಟರ್​ಡ್ಯಾಮ್ ಫ್ರಾಂಕ್​ಫರ್ಟ್, ಜಿನೆವಾ, ರೋಮ್ ಪ್ಯಾರಿಸ್, ಇಂಗ್ಲೆಂಡ್, ಟೊರಾಂಟೋ, ಕೆನಡಾ, ನಯಾಗರಾ, ನ್ಯೂಯಾರ್ಕ್, ಬ್ಯಾಂಕಾಕ್, ಸಿಂಗಾಪೂರ್, ಹಾಂಗ್​ಕಾಂಗ್ ಮುಂತಾದ ಕಡೆ ಹೋಗಿ ಸ್ವದೇಶಕ್ಕೆ ಮರಳಿದ್ದಾರೆ.

ನ್ಯೂಯಾರ್ಕ್​ನ ಗ್ರಾಂಡ್ ಅಪೇರಾ ಥಿಯೇಟರ್​ನಲ್ಲಿ ನಾಟಕ ನೋಡಬೇಕು ಎಂದು ಮೊದಲೇ ನಿಗದಿಯಾಗಿತ್ತಂತೆ. ಒಂದೊಂದು ಟಿಕೆಟ್​ಗೆ 11 ಡಾಲರ್ ಮೊತ್ತವಂತೆ. ಈ ಸಂದರ್ಭದಲ್ಲಿ ರಾಜಕುಮಾರ್ ಅವರ ತಾಯಿ ಲಕ್ಷ್ಮಮ್ಮ ತಲೆ ಸುತ್ತಿ ಬಿದ್ದುಬಿಟ್ಟರಂತೆ. ತಕ್ಷಣವೇ ಅವರನ್ನು ಹೋಟೆಲ್​ಗೆ ಕರೆದುಕೊಂಡು ಹೋಗುವುದಾಗಿ ಪಾರ್ವತಮ್ಮ ಹೇಳಿದರಂತೆ. ಮಿಕ್ಕವರಿಗೆಲ್ಲ ನಾಟಕ ನೋಡಿ ಬರುವುದಕ್ಕೆ ಹೇಳಿ ಕಳುಹಿಸಿದರಂತೆ. ಆದರೆ, ರಾಜಕುಮಾರ್ ಮಾತ್ರ ಇದಕ್ಕೆ ಸುತಾರಾಂ ಒಪ್ಪದೇ, ತಾವೂ ತಾಯಿಯ ಯೋಗಕ್ಷೇಮ ನೋಡಿಕೊಳ್ಳುವುದಕ್ಕೆ ಹೋಟೆಲ್​ಗೆ ಹೊರಟು ನಿಂತಿದ್ದಾರೆ. ಯಾವಾಗ ರಾಜಕುಮಾರ್ ಅವರೇ ನಾಟಕ ನೋಡುವುದಕ್ಕೆ ಮುಂದಾಗಲಿಲ್ಲವೋ, ಆಗ ಮಿಕ್ಕವರೆಲ್ಲರೂ ತಮಗೂ ನಾಟಕ ಬೇಡ ಎಂದು ತೀರ್ವನಿಸಿದ್ದಾರೆ. ಕೊನೆಗೆ ಟಿಕೆಟ್​ಗಳೆಲ್ಲವನ್ನೂ ಕಷ್ಟಪಟ್ಟು ಮಾರಾಟ ಮಾಡಿ, ಎಲ್ಲರೂ ಹೋಟೆಲ್​ನತ್ತ ಹೆಜ್ಜೆ ಹಾಕಿದ್ದಾರೆ.

ರಾಜಕುಮಾರ್ ಅವರು ವಿದೇಶ ಪ್ರವಾಸದಲ್ಲಿದ್ದಾರೆ ಎಂಬ ಸುದ್ದಿ ಗೊತ್ತಾದ ಕೆಲವು ಅನಿವಾಸಿ ಭಾರತೀಯರು, ಕನ್ನಡದ ಮೇರುನಟ ನಮ್ಮೂರಿಗೂ ಬರಲಿ, ಸಾಂಸ್ಕೃತಿಕ ಸಂಜೆ ನಡೆಸಿಕೊಡಲಿ ಎಂದು ಆಸೆಪಡುತ್ತಿದ್ದರಂತೆ. ಆದರೆ, ಈಗಿನಂತೆ ಆಗೆಲ್ಲ ಕರೊಕೆ ಪದ್ಧತಿಯಿರಲಿಲ್ಲ ಮತ್ತು ನಿಪುಣ ವಾದ್ಯಗಾರರೂ ಸಿಗುತ್ತಿರಲಿಲ್ಲವಾದ್ದರಿಂದ, ಆ ಸದಸ್ಯರ ಪೈಕಿ ಯಾರಿಗಾದರೂ ವಾದ್ಯ ನುಡಿಸುವ ಹವ್ಯಾಸ ಇದ್ದರೆ, ಅಂಥವರನ್ನು ಇಟ್ಟುಕೊಂಡು ಒಂದು ಗಂಟೆಯ ರಸಮಂಜರಿ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದರಂತೆ ರಾಜಕುಮಾರ್. ಹೀಗೆ 40ಕ್ಕೂ ಹೆಚ್ಚು ದಿನಗಳ ಕಾಲ ವಿದೇಶದ ಸೌಂದರ್ಯ ಸವಿಯುವುದರ ಜತೆಗೆ, ಅಲ್ಲಿನವರ ಆತಿಥ್ಯ ಸ್ವೀಕರಿಸಿ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಹಲವು ಅನುಭವಗಳನ್ನು ಹೊತ್ತು ರಾಜಕುಮಾರ್ ತವರಿಗೆ ವಾಪಸ್ಸಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net