

ಡಾ. ರಾಜಕುಮಾರ್ ಅವರ ಚಿತ್ರಗಳಿಗೆ ಅವರೂ ಸೇರಿ ಹಲವರು ಹಾಡಿದ್ದಾರೆ. ಸಿ.ಎಸ್. ಜಯರಾಮನ್, ಟಿ.ಎಂ. ಸೌಂದರ್ರಾಜನ್, ಘಂಟಸಾಲ, ಪಿ.ಬಿ. ಶ್ರೀನಿವಾಸ್, ಕೆ.ಜೆ. ಯೇಸುದಾಸ್, ಎಸ್.ಪಿ. ಬಾಲಸುಬ್ರಹ್ಮಣ್ಯಂ ಸೇರಿ 10ಕ್ಕೂ ಹೆಚ್ಚು ಗಾಯಕರು, ರಾಜಕುಮಾರ್ ಅವರ ಚಿತ್ರಗಳಿಗೆ ಹಾಡಿದ್ದಾರೆ. ಆದರೆ, ಎಲ್ಲದರ ಪೈಕಿ ರಾಜಕುಮಾರ್ ಅವರಿಗೆ ಹೇಳಿ ಮಾಡಿಸಿದ ಧ್ವನಿ ಎಂದರೆ ಅದು ಪಿ.ಬಿ. ಶ್ರೀನಿವಾಸ್ ಅವರದ್ದಾಗಿತ್ತು. ‘ನಾನು ಬರೀ ಶರೀರ, ನೀವು ನನ್ನ ಶಾರೀರ’ ಎಂದು ರಾಜಕುಮಾರ್, ಶ್ರೀನಿವಾಸ್ ಅವರಿಗೆ ಹೇಳಿದ್ದಷ್ಟೇ ಅಲ್ಲ, ಅವರಿಂದ ನೂರಾರು ಚಿತ್ರಗಳಿಗೆ ಹಾಡಿಸಿದ್ದರು ಎನ್ನುವುದು ವಿಶೇಷ. ರಾಜಕುಮಾರ್ ಅವರು ಸ್ವತಃ ಒಳ್ಳೆಯ ಗಾಯಕರಾಗಿದ್ದರೂ ಹೆಚ್ಚಾಗಿ ಪಿ.ಬಿ. ಶ್ರೀನಿವಾಸ್ ಅವರಿಂದ ಹಾಡಿಸುತ್ತಿದ್ದದ್ದು ಏಕೆ ಮತ್ತು ‘ಸಂಪತ್ತಿಗೆ ಸವಾಲ್’ ನಂತರ ಅದು ಕಡಿಮೆಯಾಗಿ, ತಾವೇ ಯಾಕೆ ಹಾಡುವುದನ್ನು ಮುಂದುವರೆಸಿದರು ಎಂಬುದರ ಹಿಂದೆ ಒಂದು ಕಥೆ ಇದೆ. ಈ ಸ್ವಾರಸ್ಯವನ್ನು ಹಿರಿಯ ನಿರ್ದೇಶಕ ಭಗವಾನ್, ಕಳೆದ ವರ್ಷ ನಡೆದ ಒಂದು ಸಮಾರಂಭದಲ್ಲೂ ನೆನಪಿಸಿಕೊಂಡಿದ್ದರು.
‘ಸಂಪತ್ತಿಗೆ ಸವಾಲ್’ ಚಿತ್ರದ ಎಮ್ಮೆ ನಿನಗೆ ಸಾಟಿ ಇಲ್ಲ.. ಹಾಡಿನ ನಂತರ ರಾಜಕುಮಾರ್ ಗಾಯಕರಾಗಿ ಜನಪ್ರಿಯರಾದರೂ, ಅದಕ್ಕೂ ಬಹಳ ವರ್ಷಗಳ ಮುಂಚೆಯೇ ಅವರು ಹಿನ್ನೆಲೆ ಗಾಯನ ಮಾಡಿದ್ದರು. 1956ರಲ್ಲಿ ಬಿಡುಗಡೆಯಾದ ‘ಓಹಿಲೇಶ್ವರ’ ಚಿತ್ರದ ‘ಓಂ ನಮಃ ಶಿವಾಯ’, ರಾಜಕುಮಾರ್ ಅವರು ಚಿತ್ರಗಳಿಗೆ ಹಾಡಿದ ಮೊಟ್ಟ ಮೊದಲ ಹಾಡು. ಈ ಚಿತ್ರಕ್ಕೆ ಸಂಗೀತ ನೀಡಿದವರು ಜಿ.ಕೆ. ವೆಂಕಟೇಶ್. ರಾಜ್ ಮತ್ತು ವೆಂಕಟೇಶ್ ಅವರು ರಂಗಭೂಮಿಯ ದಿನಗಳಿಂದಲೂ ಸ್ನೇಹಿತರು. ರಾಜ್ ಹೇಗೆ ಹಾಡುತ್ತಾರೆ ಎಂದು ಗೊತ್ತಿದ್ದ ವೆಂಕಟೇಶ್, ‘ಓಂ ನಮಃ ಶಿವಾಯ’ ಹಾಡನ್ನು ಹಾಡಿಸುವ ಮೂಲಕ ರಾಜಕುಮಾರ್ ಎಂಬ ಗಾಯಕರನ್ನು ಕನ್ನಡ ಚಿತ್ರರಂಗಕ್ಕೆ ಮೊದಲ ಬಾರಿಗೆ ಪರಿಚಯಿಸಿದರು. ಅದರ ನಂತರ, ‘ಮಹಿಷಾಸುರ ಮರ್ಧಿನಿ’ ಚಿತ್ರದಲ್ಲೂ ‘ತುಂಬಿತು ಮನವ ತಂದಿತು ಸುಖವ..’ ಎಂಬ ಡ್ಯುಯೆಟ್ ಹಾಡಿಸಿದ್ದರು ವೆಂಕಟೇಶ್.
ಅದಾದ ನಂತರ ‘ದಶಾವತಾರ’ ಚಿತ್ರದಲ್ಲಿ ಒಂದಿಷ್ಟು ಕಂದಪದ್ಯಗಳಿದ್ದವಂತೆ. ರಾಜಾಶಂಕರ್ ಅವರ ಪಾತ್ರಕ್ಕೆ ಪಿ.ಬಿ. ಶ್ರೀನಿವಾಸ್ ಮತ್ತು ರಾಜಕುಮಾರ್ ಅವರ ಪಾತ್ರಕ್ಕೆ ಸ್ವತಃ ತಾವೇ ಹಾಡಿದ್ದರಂತೆ. ಅದನ್ನು ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಕೇಳಿದಾಗ ಸಂಗೀತ ನಿರ್ದೇಶಕ ಜಿ.ಕೆ. ವೆಂಕಟೇಶ್ ಸೇರಿ ಹಲವರಿಗೆ ಎರಡೂ ಧ್ವನಿಗಳು ಒಂದೇ ತರಹ ಕೇಳಿಸಿತಂತೆ. ಹೀಗಾದರೆ, ಯಾರದ್ದು ಯಾವ ಧ್ವನಿ ಎಂದು ಗುರುತಿಸಿ ಬೇರ್ಪಡಿಸುವುದೇ ಕಷ್ಟವಾಗುತ್ತದೆ ಎಂದನಿಸಿತಂತೆ. ಇದರ ಜತೆಗೆ, ರಾಜಕುಮಾರ್ ಅವರ ಗಾಯನದ ಬಗ್ಗೆಯೂ ಅಲ್ಲಿದ್ದವರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಪಿ.ಬಿ. ಶ್ರೀನಿವಾಸ್ರಂತಹ ಮೇರುಗಾಯಕರ ಸಮನಾಗಿ ಹಾಡುವುದು ಸುಲಭದ ಮಾತಲ್ಲ ಎಂದು ರಾಜ್ ಪ್ರತಿಭೆಯ ಬಗ್ಗೆ ಒಳ್ಳೆಯ ಮಾತುಗಳು ಕೇಳಿಬಂದಿದ್ದವು.
ಇದನ್ನು ಕೇಳಿದ ಪಿ.ಬಿ. ಶ್ರೀನಿವಾಸ್, ಸೀದಾ ರಾಜಕುಮಾರ್ ಅವರ ಮನೆಗೆ ಹೋಗಿದ್ದಾರೆ. ಮನೆಗೆ ಹೋಗಿ, ‘ನೀವು ನಟನೆ ಮಾಡಿ ಜೀವನ ನಡೆಸಬಹುದು. ಆದರೆ, ನನಗೆ ಹಾಡೇ ಆಧಾರ. ಹಾಡುವುದನ್ನು ಬಿಟ್ಟು ಬೇರೇನೂ ನನಗೆ ಗೊತ್ತಿಲ್ಲ. ನಿಮಗೆ ನಟನೆ, ಹಾಡು ಎರಡೂ ಚೆನ್ನಾಗಿ ಗೊತ್ತಿದೆ. ಯಾವುದರಲ್ಲೂ ಬೇಕಾದರೂ ಜೀವನ ಮಾಡಬಹುದು. ಹಾಗಾಗಿ, ನೀವು ನಟಿಸುವ ಚಿತ್ರಗಳಲ್ಲಿ ನನಗೆ ಹಾಡುವುದಕ್ಕೆ ಅವಕಾಶ ಮಾಡಿಕೊಟ್ಟರೆ, ನೀವೇ ಹಾಡಿದಂತೆ ಇರುತ್ತದೆ. ಹಾಗಾಗಿ, ಅವಕಾಶ ಮಾಡಿಕೊಡಿ’ ಎಂದು ಕೇಳಿಕೊಂಡರಂತೆ. ದೊಡ್ಡ ಗಾಯಕರೊಬ್ಬರು ಹೀಗೆ ಹೇಳಿದ್ದನ್ನು ಕೇಳಿದ ರಾಜಕುಮಾರ್, ‘ಇವತ್ತಿನಿಂದ ನಾನು ಯಾವ ಪಾತ್ರ ಮಾಡಿದರೂ ನೀವೇ ಹಾಡಬೇಕು’ ಎಂದು ತಕ್ಷಣವೇ ಹೇಳಿಬಿಟ್ಟಿದ್ದಾರೆ.
ಅಂದಿನಿಂದ ರಾಜಕುಮಾರ್ ಸಿನಿಮಾಗಳಲ್ಲಿ ಹಾಡುವುದನ್ನು ನಿಲ್ಲಿಸಿದ್ದಾರೆ. ತಮ್ಮ ಹಾಡುವ ಶಕ್ತಿಯನ್ನು ಶ್ರೀನಿವಾಸ್ ಅವರಿಗಾಗಿ ತ್ಯಾಗ ಮಾಡಿದ ರಾಜಕುಮಾರ್, ‘ನಾನು ಬರೀ ಶರೀರ, ನೀವೇ ನನ್ನ ಶಾರೀರ’ ಎಂಬ ಮಾತನ್ನು ಉಳಿಸಿಕೊಂಡಿದ್ದಾರೆ. ಅಲ್ಲಿಂದ ಮುಂದಿನ 14 ವರ್ಷಗಳ ಕಾಲ ರಾಜ್ ಯಾವ ಚಿತ್ರದಲ್ಲೂ ಹಾಡಲಿಲ್ಲ. ಇದು ಇನ್ನೂ ಮುಂದುವರೆಯುತ್ತಿತ್ತೇನೋ? ಆದರೆ, ಬ್ರೇಕ್ ಆಗಿದ್ದಕ್ಕೂ ಕಾರಣವಿದೆ. ಅದೇ ‘ಸಂಪತ್ತಿಗೆ ಸವಾಲ್’. ಈ ಚಿತ್ರದ ‘ಎಮ್ಮೆ’ ಹಾಡನ್ನು ರೆಕಾರ್ಡ್ ಮಾಡಬೇಕು ಎನ್ನುವಷ್ಟರಲ್ಲಿ, ಪಿ.ಬಿ. ಶ್ರೀನಿವಾಸ್ ಸಿಂಗಾಪೂರ್ಗೆ ಹೋಗಿದ್ದರಂತೆ. ಅವರು ಬಂದು ಹಾಡುವುದು ತಡವಾಗಬಹುದು ಮತ್ತು ಹಾಡಿನ ಚಿತ್ರೀಕರಣವನ್ನು ತಕ್ಷಣವೇ ಮಾಡಬೇಕಾಗಿದ್ದರಿಂದ, ಸಂಗೀತ ನಿರ್ದೇಶಕ ಜಿ.ಕೆ. ವೆಂಕಟೇಶ್ ಐಡಿಯಾ ಕೊಟ್ಟರಂತೆ. ‘ನೀನು ಮೊದಲು ಟ್ರ್ಯಾಕ್ ಹಾಡಿರು. ಚಿತ್ರೀಕರಣ ಮುಗಿಯಲಿ. ಶ್ರೀನಿವಾಸ್ ಬಂದ ಮೇಲೆ ಅವರಿಂದಲೇ ಹಾಡಿಸುವ’ ಎಂದು ರಾಜಕುಮಾರ್ಗೆ ಹೇಳಿದರಂತೆ. ಅದನ್ನು ಒಪ್ಪಿದ ರಾಜ್, ಟ್ರ್ಯಾಕ್ ಹಾಡಿದ್ದಾರೆ. ಅದನ್ನು ಕೇಳಿ ಸಂತೋಷಗೊಂಡ ವೆಂಕಟೇಶ್, ‘ಇಷ್ಟು ಚೆನ್ನಾಗಿ ಶ್ರೀನಿವಾಸ್ ಹಾಡುತ್ತಾರೆ ಎಂಬ ನಂಬಿಕೆ ಇಲ್ಲ. ಇದನ್ನು ಹಾಗೆಯೇ ಉಳಿಸಿಕೊಳ್ಳುತ್ತೀನಿ’ ಎಂದು ಉಳಿಸಿಕೊಂಡರಂತೆ. ಈ ಹಾಡು ಸೂಪರ್ ಹಿಟ್ ಆಗಿದ್ದಷ್ಟೇ ಅಲ್ಲ, ಮುಂದಿನ ದಿನಗಳಲ್ಲಿ ನಿಮ್ಮ ಹಾಡುಗಳನ್ನು ನೀವೇ ಹಾಡಿ’ ಎಂದು ಅಭಿಮಾನಿಗಳು ರಾಜಕುಮಾರ್ಗೆ ಬಲವಂತ ಮಾಡಿದ್ದಾರೆ. ಕೊನೆಗೆ ಅಭಿಮಾನಿಗಳ ಒತ್ತಾಯಕ್ಕೆ ಮಣಿದು ರಾಜಕುಮಾರ್ ಹಾಡುವುದನ್ನು ಮುಂದುವರೆಸಿದ್ದಾರೆ.
ಹಾಗೆ ಹಾಡುವುದನ್ನು ಮುಂದುವರೆಸಿದ್ದಷ್ಟೇ ಅಲ್ಲ, ಮುಂದೊಂದು ದಿನ ‘ಜೀವನ ಚೈತ್ರ’ ಚಿತ್ರದ ‘ನಾದಮಯ ಈ ಲೋಕವೆಲ್ಲ ...’ ಹಾಡಿನ ಗಾಯನಕ್ಕಾಗಿ ರಾಷ್ಟ್ರಮಟ್ಟದಲ್ಲಿ ಅತ್ಯುತ್ತಮ ಗಾಯಕ ಪ್ರಶಸ್ತಿಯನ್ನು ಸಹ ಅವರು ತಮ್ಮದಾಗಿಸಿಕೊಂಡರು.