

ಬೆಂಗಳೂರು: ಈ ವರ್ಷದ ಬಹುನಿರೀತ ಬಹುಭಾಷಾ ಚಿತ್ರಗಳಲ್ಲಿ "ವಿಜಯಾನಂದ' ಪ್ರಮುಖವಾದುದು. ಪದ್ಮಶ್ರೀ ಡಾ. ವಿಜಯ ಸಂಕೇಶ್ವರ ಅವರ ಜೀವನಾಧಾರಿತ ಚಿತ್ರವಾದ ಕಾರಣ ಪ್ರಾರಂಭದಿಂದಲೂ "ವಿಜಯಾನಂದ' ಸಾಕಷ್ಟು ಕುತೂಹಲ ಮೂಡಿಸಿದೆ.
ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಮೂಡಿಬರುತ್ತಿರುವ ಈ ಚಿತ್ರಕ್ಕೆ ರಿಷಿಕಾ ಶರ್ಮಾ ಆಕ್ಷನ್&ಕಟ್ ಹೇಳುತ್ತಿದ್ದು, ಡಾ. ಆನಂದ ಸಂಕೇಶ್ವರ ನಿರ್ಮಿಸುತ್ತಿದ್ದಾರೆ. ಡಾ. ವಿಜಯ ಸಂಕೇಶ್ವರರ ಪಾತ್ರದಲ್ಲಿ ನಿಹಾಲ್ ನಟಿಸುತ್ತಿದ್ದು, ಅವರ ತಂದೆ ಬಿ.ಜಿ. ಸಂಕೇಶ್ವರರ ಪಾತ್ರದಲ್ಲಿ ಹಿರಿಯ ನಟ ಅನಂತ್ ನಾಗ್, ಗುರುಗಳ ಪಾತ್ರದಲ್ಲಿ ರವಿಚಂದ್ರನ್, ಡಾ. ಆನಂದ ಸಂಕೇಶ್ವರರ ಪಾತ್ರದಲ್ಲಿ ಭರತ್ ಬೋಪಣ್ಣ ನಟಿಸುತ್ತಿದ್ದಾರೆ.
ಶ್ರೀಮತಿ ಲಲಿತಾ ಸಂಕೇಶ್ವರರ ಪಾತ್ರದಲ್ಲಿ ಸಿರಿ ಪ್ರಹ್ಲಾದ್ ನಟಿಸುತ್ತಿದ್ದು, ಭಾನುವಾರ ಚಿತ್ರತಂಡ ಅವರ ಪಾತ್ರ ಪರಿಚಯಿಸುವ ಟೀಸರ್ ಬಿಡುಗಡೆ ಮಾಡಿದೆ. ವಿಶೇಷವೆಂದರೆ, ಈ ಟೀಸರ್ ಡಾ. ವಿಜಯ ಸಂಕೇಶ್ವರ ಮತ್ತು ಶ್ರೀಮತಿ ಲಲಿತಾ ಸಂಕೇಶ್ವರ ಅವರ ಮದುವೆಯ ಫೋಟೋ ಸೇರಿದಂತೆ ಹಲವು ಬ್ಲಾ$್ಯಕ್ ಆಂಡ್ ವೈಟ್ ಫೋಟೋಗಳನ್ನು ಒಳಗೊಂಡಿದೆ.
ಇನ್ನು ಆ. 2ರಂದು "ವಿಜಯಾನಂದ' ಚಿತ್ರದ ಟೀಸರ್ ಆನಂದ್ ಆಡಿಯೋ ಯೂಟ್ಯೂಬ್ ಚಾನಲ್ನಲ್ಲಿ ಬಿಡುಗಡೆಯಾಗಿದ್ದು ಪ್ರೇಕ್ಷಕರಿಂದ ಅತ್ಯುತ್ತಮ ಪ್ರತಿಕ್ರಿಯೆ ಪಡೆದಿದೆ. ಕನ್ನಡದಲ್ಲಿ 82 ಲಕ್ಷ, ತೆಲುಗಿನಲ್ಲಿ 50 ಲಕ್ಷ, ತಮಿಳಿನಲ್ಲಿ 51 ಲಕ್ಷ ಹಾಗೂ ಮಲಯಾಳಂನಲ್ಲಿ 30 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆಗೊಂಡಿದೆ. ಆ ಮೂಲಕ ನಾಲ್ಕೂ ಭಾಷೆಗಳಿಂದ ಬರೋಬ್ಬರಿ 2 ಕೋಟಿ 10 ಲಕ್ಷಕ್ಕೂ ಹೆಚ್ಚು ವೀಕ್ಷಣೆಯಾಗಿದ್ದು ದಾಖಲೆ ನಿರ್ಮಿಸಿದೆ. ಇದೇ ವರ್ಷ "ವಿಜಯಾನಂದ' ಚಿತ್ರ ಬಿಡುಗಡೆಯಾಗಲಿದೆ.