ನಟ ಮಧುಸೂದನ್​ ಜತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ವಿಜಯಾನಂದ ನಟಿ ಸಿರಿ ಪ್ರಹ್ಲಾದ್ | Siri Prahlad

Siri Prahlad
Published on

ಬೆಂಗಳೂರು: ವಿಆರ್​​ಎಲ್​ ಸಮೂಹ ಸಂಸ್ಥೆಗಳ ಚೇರ್​​ಮನ್​ ಡಾ.ವಿಜಯ ಸಂಕೇಶ್ವರ ಅವರ ಜೀವನಾಧಾರಿತ ‘ವಿಜಯಾನಂದ’ ಸಿನಿಮಾದ ನಟಿ ಸಿರಿ ಪ್ರಹ್ಲಾದ್ ( Siri Prahlad ) ಅವರು ಇಂದು (ನ.17) ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಇಂದು ಬೆಳಗ್ಗೆ 9.30 ರಿಂದ 10.30ರವರೆಗಿನ ಶುಭ ಮುಹೂರ್ತದಲ್ಲಿ ಯುಗಳಗೀತೆ ಹೀರೋ ಮಧುಸೂದನ್​ ಎಂಬುವರನ್ನು ಸಿರಿ ಪ್ರಹ್ಲಾದ್​ ವರಿಸಿದ್ದಾರೆ. ಬನ್ನೇರುಘಟ್ಟ ರಸ್ತೆಯ ಐಐಎಂಬಿ ಗೇಟ್​ ಎದುರುಗಡೆ ಇರುವ ಅಮರ ಕಲ್ಯಾಣ ಮಂಟಪದಲ್ಲಿ ವಿವಾಹ ಸಮಾರಂಭ ನಡೆಯಿತು. ಚಿತ್ರರಂಗ ಗಣ್ಯರು, ಬಂಧುಮಿತ್ರರು ಹಾಗೂ ಸಂಬಂಧಿಕರು ನವಜೋಡಿ ಶುಭಹಾರೈಸಿದರು.

2017ರಲ್ಲಿ ಪ್ರಸಾರವಾಗುತ್ತಿದ್ದ ‘ಯುಗಳಗೀತೆ’ ಧಾರಾವಾಹಿಯಲ್ಲಿ ಒಟ್ಟಿಗೆ ನಟಿಸಿದ್ದ ಸಿರಿ, ಮಧುಸೂದನ್ ಅವರು ಇದೇ ವರ್ಷ ಫೆಬ್ರವರಿಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದಕ್ಕೂ ಮೊದಲು ಇಬ್ಬರು ಫ್ರೆಂಡ್ಸ್​ ಆಗಿದ್ದರು. ಯುಗಳಗೀತೆ ಸೀರಿಯಲ್ ಸಮಯದಲ್ಲಿ ಆದ ಪರಿಚಯ ಪ್ರೀತಿಗೆ ತಿರುಗಿತ್ತು.

ವಿಆರ್​ಎಲ್​ ಪ್ರೊಡಕ್ಷನ್ಸ್​ ಮೂಲಕ ಡಾ.ಆನಂದ ಸಂಕೇಶ್ವರ ನಿರ್ಮಿಸಿದ “ವಿಜಯಾನಂದ’ ಚಿತ್ರದಲ್ಲಿ ಡಾ. ವಿಜಯ ಸಂಕೇಶ್ವರ ಅವರ ಪಾತ್ರದಲ್ಲಿ ನಿಹಾಲ್, ಅವರ ಪತ್ನಿ ಶ್ರೀಮತಿ ಲಲಿತಾ ಸಂಕೇಶ್ವರ ಅವರ ಪಾತ್ರದಲ್ಲಿ ಸಿರಿ ಪ್ರಹ್ಲಾದ್ ನಟಿಸಿದರು. ಈ ಸಿನಿಮಾ 2022ರ ಡಿಸೆಂಬರ್​ 9ರಂದು ದೇಶಾದ್ಯಂತ ತೆರೆಕಂಡಿತು.

ಸಿರಿ ಅವರು ಈಗಾಗಲೇ ‘ಲಾ’, ‘ಇಷ್ಟ’, ‘ಬಡ್ಡೀಸ್’, ಒಂದು ಶಿಕಾರಿಯ ಕಥೆ, ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಮಧುಸೂದನ್ ಅವರು ‘ಮೇಡ್ ಇನ್ ಬೆಂಗಳೂರು’ ಸಿನಿಮಾವನ್ನು ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net