

ಬೆಂಗಳೂರು: ಕಿರುತೆರೆಯಿಂದ ಸಿನಿಮಾ, ಸಿನಿಮಾದಿಂದ ಕಿರುತೆರೆ, ಇದೀಗ ಮತ್ತೆ ಕಿರುತೆರೆಯಿಂದ ಬೆಳ್ಳಿತೆರೆಯತ್ತ ದಿಕ್ಕು ಬದಲಿಸಿದ್ದಾರೆ ನಟ ವಿಜಯ್ ಸೂರ್ಯ.
ಗುಳಿಕೆನ್ನೆಯ ವಿಜಯ್ ಅವರನ್ನು ಇಲ್ಲಿಯವರೆಗೂ ಲವರ್ಬಾಯ್ ಅವತಾರದಲ್ಲಿ ನೋಡಿದ್ದೇ ಹೆಚ್ಚು. ಇದೀಗ ಅವರೂ ಫೈಟ್ ಮಾಡಬಲ್ಲರು, ಮಾಸ್ ಡೈಲಾಗ್ಗಳನ್ನು ಹೇಳಬಲ್ಲರು ಎಂಬುದಕ್ಕೆ ಉತ್ತರವಾಗಿ ಹೊಸ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದಾರೆ. ಅದೇ ‘ವೀರಪುತ್ರ’. ಬಣ್ಣದ ಲೋಕದಲ್ಲಿ 10 ವರ್ಷದ ಅನುಭವ ಇರುವ ವಿಜಯ್, ‘ಇಂಥ ಒಂದು ಪಾತ್ರವನ್ನು ಗಿಟ್ಟಿಸಿಕೊಳ್ಳಲು ಹತ್ತು ವರ್ಷಗಳೇ ಬೇಕಾಯಿತು ನೋಡಿ ...’ ಎಂದಿದ್ದಾರೆ. ‘ಇಂಡಸ್ಟ್ರಿಗೆ ಬಂದು 10 ವರ್ಷಗಳ ಮೇಲಾಯಿತು. ಆರಂಭದಿಂದ ಏಕೆ ಒಳ್ಳೇ ಕಥೆ ಸಿಗುತ್ತಿಲ್ಲ ಎಂಬ ಕೊರಗಿತ್ತು. ಇದೀಗ ನಾನು ಅಂದುಕೊಂಡಂಥ ಕಥೆ ಸಿಕ್ಕಿದೆ. ನನಗನಿಸಿದ ಮಟ್ಟಿಗೆ 10 ವರ್ಷ ಕಳೆಯಲೇಬೇಕಿತ್ತು ಎಂದು ಹಣೆಯಲ್ಲಿ ಬರೆದಿತ್ತು ಅಂತ ಕಾಣತ್ತೆ. ಒಂದು ದಶಕದ ಎಲ್ಲ ಅನುಭವವನ್ನೂ ‘ವೀರಪುತ್ರ’ ಚಿತ್ರಕ್ಕೆ ಧಾರೆ ಎರೆಯಲಿದ್ದೇನೆ’ ಎನ್ನುತ್ತಾರೆ.
ಈ ಚಿತ್ರದ ನಿರ್ವಪಕರು ಗುರು ಬಂಡೆ. ಮೂಲತಃ ಕಲಬುರಗಿಯವರಾದ ಇವರು, ಆ ಭಾಗದಲ್ಲಿ ನಡೆದ ಘಟನೆಯೊಂದರ ಎಳೆಯನ್ನಿಟ್ಟುಕೊಂಡು, ಕಮರ್ಷಿಯಲ್ ಶೈಲಿಯಲ್ಲಿ ಈ ಚಿತ್ರ ಮಾಡುತ್ತಿದ್ದಾರೆ. ದೇವರಾಜ್ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದು, ಒಟ್ಟು ಮೂರು ಅವತಾರದಲ್ಲಿ ವಿಜಯ್ ಅವರನ್ನು ತೋರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಇನ್ನು ಕ್ಲಾಸ್ ಇಮೇಜ್ ಬದಿಗಿಟ್ಟು ಮಾಸ್ ಅವತಾರ ಎತ್ತುತ್ತಿರುವ ಬಗ್ಗೆ ಮಾತನಾಡುವ ವಿಜಯ್, ‘ಇಲ್ಲಿಯವರೆಗೂ ಅದೇ ರೀತಿ ಕಾಣಿಸಿಕೊಂಡಿದ್ದೇನೆ. ಚೂರು ಹೊಸತನ್ನು ಪ್ರಯತ್ನಿಸಬೇಕೆಂದಾಗ ಸಿಕ್ಕ ಕಥೆ ಇದು. ಸದ್ಯ ಎರಡು ಶೇಡ್ ರಿವೀಲ್ ಆಗಿದ್ದು, ಇನ್ನೊಂದನ್ನು ಮುಂದಿನ ದಿನಗಳಲ್ಲಿ ಬಹಿರಂಗ ಪಡಿಸಲಿದ್ದೇವೆ. ಸಮಾಜದಲ್ಲಿ ತಪು್ಪ ನಡೆದಾಗ, ಎದ್ದು ನಿಂತು ಪ್ರಶ್ನೆ ಮಾಡುವಂತ ಪಾತ್ರ ನಿಭಾಯಿಸುತ್ತಿದ್ದೇನೆ’ ಎಂದು ಪಾತ್ರದ ವಿವರಣೆ ನೀಡುತ್ತಾರೆ. ಸದ್ಯ ಸ್ಯಾಂಡಲ್ವುಡ್ನಲ್ಲಿ ಸಿನಿಮಾ ಚಟುವಟಿಕೆಗಳು ಕ್ರಮೇಣ ಶುರುವಾಗುತ್ತಿದ್ದು, ಮುಂದಿನ ಕೆಲವು ದಿನಗಳಲ್ಲಿ ಚಿತ್ರೀಕರಣಕ್ಕೆ ತಂಡ ಚಾಲನೆ ನೀಡಲಿದೆಯಂತೆ.