

ಬೆಂಗಳೂರು: ಈ ವರ್ಷದ ಬಹುನಿರೀಕ್ಷಿತ ಬಹುಭಾಷಾ ಚಿತ್ರಗಳಲ್ಲಿ 'ವಿಜಯಾನಂದ' ಸಿನಿಮಾ ಪ್ರಮುಖವಾದುದು. ವಿಆರ್ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಪದ್ಮಶ್ರೀ ಡಾ. ವಿಜಯ ಸಂಕೇಶ್ವರ ಅವರ ಬಯೋಪಿಕ್ ಇದು. ವಿಆರ್ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ. ಆನಂದ ಸಂಕೇಶ್ವರ ಅವರು ನಿರ್ಮಿಸುತ್ತಿದ್ದು, ಕನ್ನಡಿಗ ಸಾಧಕರೊಬ್ಬರ ಕುರಿತು ಕನ್ನಡಿಗರೇ ಮಾಡುತ್ತಿರುವ ಚಿತ್ರವಾದ ಕಾರಣ 'ವಿಜಯಾನಂದ' ಬಗ್ಗೆ ಮೊದಲಿಂದಲೂ ನಾಡಿನಾದ್ಯಂತ ಸಾಕಷ್ಟು ಕುತೂಹಲವಿದೆ.
'ವಿಜಯಾನಂದ' ಚಿತ್ರವನ್ನು 'ಟ್ರಂಕ್' ಖ್ಯಾತಿಯ ರಿಷಿಕಾ ಶರ್ಮಾ ನಿರ್ದೇಶಿಸುತ್ತಿದ್ದಾರೆ. ಡಾ.ವಿಜಯ ಸಂಕೇಶ್ವರರ ಪಾತ್ರದಲ್ಲಿ ನಟ ನಿಹಾಲ್, ಶ್ರೀಮತಿ ಲಲಿತಾ ಸಂಕೇಶ್ವರರ ಪಾತ್ರದಲ್ಲಿ ಸಿರಿ ಪ್ರಹ್ಲಾದ್, ಡಾ. ವಿಜಯ ಸಂಕೇಶ್ವರರ ತಂದೆ ಬಿ.ಜಿ. ಸಂಕೇಶ್ವರರ ಪಾತ್ರದಲ್ಲಿ ಹಿರಿಯ ನಟ ಅನಂತ್ ನಾಗ್ ನಟಿಸುತ್ತಿದ್ದು, ಅವರ ಪಾತ್ರಗಳ ಕ್ಯಾರೆಕ್ಟರ್ ಇಂಟ್ರೊಗಳು ಈಗಾಗಲೇ ಬಿಡುಗಡೆಯಾಗಿವೆ.
ಡಾ. ಆನಂದ ಸಂಕೇಶ್ವರರ ಪಾತ್ರದಲ್ಲಿ ಭರತ್ ಬೋಪಣ್ಣ ನಟಿಸುತ್ತಿದ್ದು, ಬುಧವಾರ ಭರತ್ ಅವರ ಹುಟ್ಟುಹಬ್ಬದ ಪ್ರಯುಕ್ತ ಅವರ ಪಾತ್ರವನ್ನು ಪರಿಚಯಿಸುವ ಕ್ಯಾರೆಕ್ಟರ್ ಇಂಟ್ರೊ ಬಿಡುಗಡೆ ಮಾಡಲಾಗಿದೆ. ಡಾ. ಆನಂದ ಸಂಕೇಶ್ವರರ ಬಾಲ್ಯದ ಫೋಟೋ ಸೇರಿದಂತೆ ಕೆಲವು ಅಪರೂಪದ ಫೋಟೋಗಳನ್ನು ಒಳಗೊಂಡಿರುವ ಈ ಕ್ಯಾರೆಕ್ಟರ್ ಇಂಟ್ರೊ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈಗಾಗಲೇ "ವಿಜಯಾನಂದ' ಚಿತ್ರದ ಟೀಸರ್ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಆನಂದ್ ಆಡಿಯೋ ಯೂಟ್ಯೂಬ್ ಚಾನಲ್ನಲ್ಲಿ ಬಿಡುಗಡೆಯಾಗಿದ್ದು, 2 ಕೋಟಿ 15 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆಗೊಂಡಿದೆ.