Rippan Swaamy Review; ಸ್ವಾಮಿ ಎಂಬ ಮಲೆನಾಡ "ಅನಿಮಲ್​'

ascasc
Published on

| ಹರ್ಷವರ್ಧನ್​ ಬ್ಯಾಡನೂರು 

ಚಿತ್ರ: ರಿಪ್ಪನ್​ ಸ್ವಾಮಿ

ನಿರ್ದೇಶನ: ಕಿಶೋರ್​ ಮೂಡುಬಿದಿರೆ

ತಾರಾಗಣ: ವಿಜಯ್​ ರಾಘವೇಂದ್ರ, ಅಶ್ವಿನಿ ಚಂದ್ರಶೇಖರ್​, ಪ್ರಕಾಶ್​ ತುಮಿನಾಡ್​, ವಜ್ರಧಿರ್​ ಜೈನ್​, ಸಂತೋಷ್​ ಶೆಟ್ಟಿ, ಯಮುನಾ ಶ್ರೀನಿಧಿ, ಕೃಷ್ಣಮೂರ್ತಿ ಕವತ್ತಾರು ಮತ್ತಿತರರು

ಆ್ಯಂಟಿ ಹೀರೋ ಸಿನಿಮಾಗಳು ಕನ್ನಡದಲ್ಲಿ ಹೆಚ್ಚು ಬಂದಿಲ್ಲ. 2023ರಲ್ಲಿ ತೆರೆಗೆ ಬಂದ ಸಂದೀಪ್​ ರೆಡ್ಡಿ ವಂಗಾ ನಿರ್ದೇಶಿಸಿ, ರಣಬೀರ್​ ಕಪೂರ್​ ಮತ್ತು ರಶ್ಮಿಕಾ ಮಂದಣ್ಣ ನಟಿಸಿದ್ದ "ಅನಿಮಲ್​' ಆ್ಯಂಟಿ ಹೀರೋಗೆ ಚಿತ್ರರಂಗದಲ್ಲಿ ಮರುಜನ್ಮ ನೀಡಿತ್ತು. ಕನ್ನಡದ "ರಿಪ್ಪನ್​ ಸ್ವಾಮಿ' ಅದೇ ಸಾಲಿನಲ್ಲಿ ಸಾಗುವ ಸಿನಿಮಾ. ಆದರೆ, ಕೇವಲ ರಕ್ತ ಹರಿಸುವುದೊಂದೇ ಚಿತ್ರದ ಆಶಯವಾಗಿರದೇ, ಸಸ್ಪೆನ್ಸ್​ ಥ್ರಿಲ್ಲರ್​ ಅಂಶಗಳು, ಟ್ವಿಸ್ಟ್​-ರ್ಟನ್​ಗಳು ಗಮನ ಸೆಳೆಯುತ್ತವೆ.

ಆತ ಸ್ವಾಮಿ ಅಲಿಯಾಸ್​ ರಿಪ್ಪನ್​ಸ್ವಾಮಿ (ವಿಜಯ್​). ಸಣ್ಣಕೊಪ್ಪದ ಜಮೀನ್ದಾರ. ಜತೆಗೆ ಹಂದಿ ಮಾಂಸದ ಅಂಗಡಿ ನಡೆಸುತ್ತಿರುತ್ತಾನೆ. "ಹಂಸಿ ಮಾಂಸ ರಕ್ತದ ಜತೆ ತಿಂದ್ರೇನೇ ರುಚಿ' ಅಂತ ಹಸಿಯಾಗೇ ತಿನ್ನುವ ಮೃಗೀಯ ವ್ಯಕ್ತಿ. ಕೋಪಿಷ್ಠ, ಗರ್ವಿ, ಕಟುಕ, ನಿರ್ದಯಿ, ಮಾನವೀಯ ಗುಣಗಳೇ ಇಲ್ಲದ ವ್ಯಕ್ತಿ. ಆತನಿಗೆ ಮೃದು ಸ್ವಭಾವದ ವೈದ್ಯೆ ಮಂಗಳಾ (ಅಶ್ವಿನಿ) ಮೇಲೆ ಮನಸಾಗುತ್ತದೆ. ಆಕೆಯನ್ನು ಮದುವೆಯಾಗುತ್ತಾನೆ. ಏಳು ಜನರ ತಂಡಕ್ಕೆ ಸ್ವಾಮಿಯೇ ಲೀಡರ್​. ಆದರೆ, ಟನೆಯೊಂದು ಅವನನ್ನು ಆ ತಂಡದಿಂದ ದೂರವಾಗಿಸುತ್ತದೆ. ಒಂದು ಕಾಲದ ಗೆಳೆಯ ಕುರುಪು$್ಪ ಸಹ ಸ್ವಾಮಿಯ ವಿರುದ್ಧ ಕತ್ತಿ ಮಸೆಯುತ್ತಿರುತ್ತಾನೆ. ಹೊಸದಾಗಿ ಬಂದ ಪೊಲೀಸ್​ ಅಧಿಕಾರಿ ಅಂಜುಮಾಲ ಕೂಡ ಸ್ವಾಮಿಯನ್ನು ಟಾರ್ಗೆಟ್​ ಮಾಡುತ್ತಾರೆ. ಹೀಗೆ ಮನೆ, ಊರು ತುಂಬ ವಿರೋಧಿಗಳನ್ನು ಕಟ್ಟಿಕೊಳ್ಳುವ ಸ್ವಾಮಿ ಅವರನ್ನೆಲ್ಲ ಹೇಗೆ ಎದುರಿಸುತ್ತಾನೆ? ಹೆದರಿಸುತ್ತಾನೆ? ಕೊನೆಗೆ ಏನಾಗುತ್ತಾನೆ? ತಿಳಿಯಲು "ರಿಪ್ಪನ್​ ಸ್ವಾಮಿ' ನೋಡಿ.

ವಿಜಯ್​ ರಾಘವೇಂದ್ರ ಮತ್ತು ಅಶ್ವಿನಿ ನಟನೆ ಚಿತ್ರದ ಕೇಂದ್ರಬಿಂದು. ಇದುವರೆಗೂ ತೆರೆಯ ಹಿಂದೆ ಮತ್ತು ತೆರೆಯ ಮುಂದೆ ಜೆಂಟಲ್​ಮ್ಯಾನ್​ಆಗಿಯೇ ಕಾಣಿಸಿಕೊಂಡಿರುವ "ಚಿನ್ನಾರಿ ಮುತ್ತ' ವಿಜಯ್​ ರಾಘವೇಂದ್ರ ಇಮೇಜ್​ ಇಲ್ಲಿ ಸಂಪೂರ್ಣವಾಗಿ ಬದಲಾಗಿದೆ. ಅವರು ಹೀಗೂ ನಟಿಸಬಹುದಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. "ಮಾಲ್ಗುಡಿ ಡೇಸ್​' ಬಳಿಕ "ರಿಪ್ಪನ್​ ಸ್ವಾಮಿ'ಯಲ್ಲೂ ನಿರ್ದೇಶಕ ಕಿಶೋರ್​ ಮೂಡುಬಿದಿರೆ ವಿಭಿನ್ನತೆ ಮೆರೆದಿದ್ದಾರೆ. ಸಸ್ಪೆನ್ಸ್​ ಥ್ರಿಲ್ಲರ್​ ಕಥೆಯಲ್ಲಿ ಮಲೆನಾಡಿನ ಜನಜೀವನದ ಮೇಲೆ ಬೆಳಕು ಚೆಲ್ಲಲು ಯತ್ನಿಸಿದ್ದಾರೆ. ಜೇನುಕುರುಬರ ಬಿಟ್​ ಸಾಂಗ್​ಗಳು ಅಲ್ಲಲ್ಲಿ ಇಣುಕು ಹಾಕುತ್ತವೆ. ಸಸ್ಪೆನ್ಸ್​ ಥ್ರಿಲ್ಲರ್​ ಪ್ರಿಯರಿಗೆ "ರಿಪ್ಪನ್​ ಸ್ವಾಮಿ' ಇಷ್ಟವಾಗುತ್ತದೆ,

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net