

ಬೆಂಗಳೂರು: ನಟ ವಿಜಯ್ ರಾಘವೇಂದ್ರ ಇದುವರೆಗೂ ಹಾರರ್ ಶೈಲಿಯ ಸಿನಿಮಾಗಳಲ್ಲಿ ಕಾಣಿಸಿಕೊಂಡ ಉದಾಹರಣೆ ಇಲ್ಲ. ಇದೀಗ ‘ಸಾವಿತ್ರಿ’ ಮೂಲಕ ಅದೂ ನೆರವೇರಿದೆ. ಇತ್ತೀಚೆಗಷ್ಟೇ ಈ ಚಿತ್ರದ ಹಾಡುಗಳ ಜತೆಗೆ ಟ್ರೇಲರ್ ಸಹ ಹೊರಬಂದಿದೆ. ಇನ್ನೇನು ಶೀಘ್ರದಲ್ಲಿ ಚಿತ್ರಮಂದಿರಕ್ಕೂ ಸಿನಿಮಾ ಬರಲು ಸಿದ್ಧವಾಗಿದೆ. ಈ ಸಿನಿಮಾ ಬಗ್ಗೆ ಕಿರು ಮಾಹಿತಿ ನೀಡುವ ವಿಜಯ್, ‘ಅಪ್ಪ-ಮಗಳ ಬಾಂಧವ್ಯ ಹೇಗಿರಲಿದೆ ಎಂಬುದನ್ನು ಈ ಚಿತ್ರದಲ್ಲಿ ಕಾಣಬಹುದಾಗಿದೆ. ಹಾರರ್ ಟಚ್ ಸಹ ಚಿತ್ರಕ್ಕಿದೆ. ಒಳ್ಳೆಯ ತಂಡದೊಂದಿಗೆ ಒಳ್ಳೆಯ ಸಿನಿಮಾ ಮಾಡಿದ ಸಂತೋಷವಿದೆ’ ಎಂದರು.
ಕನ್ನಡಕ್ಕೆ ‘ಸಾವಿತ್ರಿ’ ಸಿನಿಮಾ ಮೂಲಕ ಆಗಮಿಸಿದ್ದಾರೆ ನಟಿ ಊರ್ವಶಿ ರಾಯ್. ತೆಲುಗಿನ ಹಲವು ಸಿನಿಮಾಗಳಲ್ಲಿ ನಟಿಸಿರುವ ಅವರಿಗಿದು ಮೊದಲ ಸಿನಿಮಾ. ‘ಒಂದೊಳ್ಳೆಯ ಪಾತ್ರವನ್ನು ನಿರ್ದೇಶಕರು ನೀಡಿದ್ದಾರೆ. ಆ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದೇನೆ ಎಂಬ ಖುಷಿ ಇದೆ. ನಾನು ವಿಜಯ್ಗೆ ಜೋಡಿಯಾಗಿದ್ದೇನೆ’ ಎಂದಷ್ಟೇ ಹೇಳಿದರು. ಈವರೆಗೂ ಗೀತಸಾಹಿತಿಯಾಗಿ ಗುರುತಿಸಿಕೊಂಡಿದ್ದ ಹೃದಯ ಶಿವ, ಈ ಸಿನಿಮಾ ಮೂಲಕ ಸಂಗೀತ ನಿರ್ದೇಶಕರಾಗಿಯೂ ಬಡ್ತಿ ಪಡೆದಿದ್ದಾರೆ. ಚಿತ್ರದಲ್ಲಿನ 4 ಹಾಡುಗಳಿಗೆ ಸಂಗೀತ ಮತ್ತು ಹಿನ್ನೆಲೆ ಸಂಗೀತವನ್ನೂ ಒದಗಿಸಿದ್ದಾರೆ.
ಎಸ್. ದಿನೇಶ್ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರದಲ್ಲಿ ಪ್ರಕಾಶ್ ಬೆಳವಾಡಿ, ಮಿಮಿಕ್ರಿ ಗೋಪಿ, ನೈಲಾ ಪ್ರಮೋದ್, ಸಂಜು ಬಸಯ್ಯಸೇರಿ ಹಲವರು ನಟಿಸಿದ್ದಾರೆ. ‘ಚಿತ್ರಮಂದಿರಗಳಿಗೆ ಶೇ. 100 ಆಸನ ಭರ್ತಿಗೆ ಅವಕಾಶ ನೀಡಿದರೆ, ಬಿಡುಗಡೆ ಮಾಡುತ್ತೇವೆ. ಇಲ್ಲವಾದಲ್ಲಿ ನೇರವಾಗಿ ಒಟಿಟಿಯಲ್ಲಿ ಚಿತ್ರ ಬಿಡುಗಡೆ ಮಾಡುವ ಯೋಚನೆ ಇದೆ’ ಎಂಬುದು ನಿರ್ವಪಕ ಪ್ರಶಾಂತ್ ಹೀಲಲಿಗೆ ಅವರ ಮಾತು.