

ಚೆನ್ನೈ: ತಮ್ಮ ತಂದೆ ಎಸ್.ಎ. ಚಂದ್ರಶೇಖರ್ ಅವರು ಸ್ಥಾಪಿಸಿರುವ ಅಖಿಲ ಭಾರತ ವಿಜಯ್ ಮಕ್ಕಳ್ ಇಯಕ್ಕಂ ಎಂಬ ರಾಜಕೀಯ ಪಕ್ಷಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಮತ್ತು ತಮಗೆ ರಾಜಕೀಯಕ್ಕೆ ಬರುವ ಯೋಚನೆಯೂ ಇಲ್ಲ ಎಂದು ಕಾಲಿವುಡ್ ನಟ ವಿಜಯ್ ಸ್ಪಷ್ಟಪಡಿಸಿದ್ದಾರೆ.
ಈ ಹಿಂದೆ ವಿಜಯ್ ಹೆಸರಿನಲ್ಲಿ ವಿಜಯ್ ಮಕ್ಕಳ್ ಇಯಕ್ಕಂ ಎಂಬ ಅಭಿಮಾನಿ ಸಂಘವಿತ್ತು. ಈಗ ಅದೇ ಹೆಸರನ್ನು ವಿಜಯ್ ಅವರ ತಂದೆ ಮತ್ತು ಖ್ಯಾತ ನಿರ್ದೇಶಕ ಎಸ್.ಎ. ಚಂದ್ರಶೇಖರ್ ಚುನಾವಣಾ ಆಯೋಗದಲ್ಲಿ ದಾಖಲಿಸಿದ್ದಾರೆ. ಇದರಿಂದಾಗಿ ವಿಜಯ್ ರಾಜಕೀಯ ಪಕ್ಷ ಸ್ಥಾಪಿಸಿದ್ದು, ಸದ್ಯದಲ್ಲೇ ರಾಜಕೀಯಕ್ಕೆ ಬರುತ್ತಾರೆ ಎಂಬ ಊಹಾಪೋಹಗಳು ಕೇಳಿ ಬಂದಿವೆ.
ಆದರೆ, ಇದನ್ನು ಸ್ಪಷ್ಟವಾಗಿ ನಿರಾಕರಿಸಿರುವ ವಿಜಯ್, ಈ ಪಕ್ಷಕ್ಕೂ ತಮಗೂ ಸಂಬಂಧವಿಲ್ಲ ಎಂದಿರುವ ಜತೆಗೆ, ತಮ್ಮ ಹೆಸರಿದೆ ಎಂಬ ಕಾರಣಕ್ಕೆ ಆ ಪಕ್ಷಕ್ಕೆ ಸೇರಬೇಡಿ ಎಂದು ತಮ್ಮ ಅಭಿಮಾನಿಗಳಿಗೆ ಆಗ್ರಹಿಸಿದ್ದಾರೆ. ಅಷ್ಟೇ ಅಲ್ಲ, ಯಾವುದೇ ಕಾರಣಕ್ಕೂ ತಮ್ಮ ಹೆಸರು ಮತ್ತು ಭಾವಚಿತ್ರವನ್ನು ಬಳಸಬಾರದು ಎಂದು ಅವರು ಹೇಳಿದ್ದಾರೆ. ಒಂದು ಪಕ್ಷ ಬಳಸಿದರೆ, ಕಾನೂನು ಹೋರಾಟ ಮಾಡುವುದಾಗಿ ಅವರು ಎಚ್ಚರಿಸಿದ್ದಾರೆ.
ಇನ್ನು ವಿಜಯ್ ಅವರ ತಂದೆ ಸಹ, ಈ ಪಕ್ಷಕ್ಕೂ ವಿಜಯ್ಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸಮಾಜ ಸೇವೆ ಮಾಡುತ್ತಿರುವ ಒಂದಿಷ್ಟು ಯುವಜನರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಈ ಪಕ್ಷ ಸ್ಥಾಪಿಸಿದ್ದೇ ಹೊರತು, ಬೇರೆ ಯಾವುದೇ ಕಾರಣಕ್ಕೂ ಅಲ್ಲ ಎಂದು ಅವರು ಹೇಳಿದ್ದಾರೆ.