

ಹೈದರಾಬಾದ್: ಟಾಲಿವುಡ್ ಸೆನ್ಷೇಷನಲ್ ಹೀರೋ ವಿಜಯ್ ದೇವರಕೊಂಡ ನಟನೆಯ ಖುಷಿ ಸಿನಿಮಾ ಮುಂದಿನ ವಾರ ತೆರೆಗೆ ಅಪ್ಪಳಿಸಲು ಸಜ್ಜಾಗಿದೆ. ಸಿನಿಮಾ ತಂಡ ಭರ್ಜರಿ ಪ್ರಚಾರದಲ್ಲಿ ತೊಡಗಿದೆ. ಇದರ ನಡುವೆ ವಿಜಯ್ ಅವರು ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಶೇರ್ ಮಾಡಿಕೊಂಡಿರುವ ಫೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ.
ಯುವತಿಯ ಕೈಯನ್ನು ಹಿಡಿದಿರುವ ಫೋಟೋವನ್ನು ವಿಜಯ್ ದೇವರಕೊಂಡ ಶೇರ್ ಮಾಡಿದ್ದು, "ಸಾಕಷ್ಟು ಸಂಭವಿಸುತ್ತಿರುತ್ತವೆ ಆದರೆ, ಇದೊಂದು ಮಾತ್ರ ನಿಜವಾಗಿಯೂ ವಿಶೇಷವಾಗಿದೆ. ಶೀಘ್ರದಲ್ಲೇ ಘೋಷಣೆ ಮಾಡಲಾಗುವುದು" ಎಂದು ಬರೆದುಕೊಂಡಿದ್ದಾರೆ.
ಇನ್ಸ್ಟಾಗ್ರಾಂ ಸ್ಟೋರಿಗೂ ವಿಜಯ್ ಅವರ ವೈಯಕ್ತಿಕ ಜೀವನಕ್ಕೂ ಏನಾದರೂ ಸಂಬಂಧವಿದೆಯೇ? ಅಥವಾ ಇದು ಅವರ ಹೊಸ ಯೋಜನೆ ಅಥವಾ ಬ್ರ್ಯಾಂಡ್ ಬಗ್ಗೆಯೇ? ಅಥವಾ ಇದು ಪ್ರಚಾರದ ತಂತ್ರವೇ? ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ.
ಇನ್ನು ಕೆಲ ನೆಟ್ಟಿಗರು ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಜತೆಯಲ್ಲಿರುವ ಫೋಟೋವನ್ನು ಶೇರ್ ಮಾಡಿಕೊಂಡು ನನ್ನ ಊಹೆ ಇದಾಗಿದೆ. ನಿಮ್ಮ ಊಹೆಯೂ ಇದೇ ಆಗಿದೆಯೇ ಎಂದು ಕಾಮೆಂಟ್ ಮಾಡಿದ್ದಾರೆ. ಅಲ್ಲದೆ, ರಶ್ಮಿಕಾ ಮತ್ತು ವಿಜಯ್ ಹೊಸ ಸಿನಿಮಾವನ್ನು ಮಾಡುತ್ತಿರಬಹುದು ಎಂದು ಕೆಲವರು ಅಂದಾಜಿಸಿದ್ದಾರೆ.
ಸಹಜವಾಗಿ, ಸ್ಟಾರ್ ಹೀರೋ ತಮ್ಮ ಮುಂಬರುವ ಚಿತ್ರದ 'ಫಸ್ಟ್ ಲುಕ್' ಬಗ್ಗೆ ಮಾತನಾಡುತ್ತಿದ್ದಾರೆ ಅಥವಾ ಬಹುಶಃ ಅವರು ಪರಶುರಾಮ್ ನಿರ್ದೇಶನದ ತಮ್ಮ ಚಿತ್ರದ ಟೈಟಲ್ ಪೋಸ್ಟರ್ ಅನ್ನು ಬಿಡುಗಡೆ ಮಾಡಬಹುದು ಎಂದು ಕೆಲವರು ಊಹಿಸಿದ್ದಾರೆ.
ಆದರೆ, ಈ ಎಲ್ಲ ಪ್ರಶ್ನೆಗಳಿಗೆ ವಿಜಯ್ ದೇವರಕೊಂಡ ಅವರೇ ಸ್ಪಷ್ಟಪಡಿಸಬೇಕಿದೆ. ಅದಕ್ಕಾಗಿ ಸ್ವಲ್ಪ ದಿನಗಳವರೆಗೆ ಅಭಿಮಾನಿಗಳೂ ಕಾಯಬೇಕಿದೆ. (ಏಜೆನ್ಸೀಸ್)