

ಬೆಂಗಳೂರು: ನಟ ವಿಹಾನ್ ‘ಲೆಟ್ಸ್ ಬ್ರೇಕಪ್’ ಎಂಬ ಸಿನಿಮಾದಲ್ಲಿ ನಾಯಕನಾಗಲು ಹೊರಟಿದ್ದು ಗೊತ್ತಿರುವಂಥದ್ದೇ. ಆದರೆ ಇದೀಗ ಅವರು ಚಿತ್ರ ಆರಂಭಕ್ಕೂ ಮೊದಲೇ ಬ್ರೇಕಪ್ ಎಂದಿದ್ದಾರೆ. ಅಂದಹಾಗೆ ಇಲ್ಲಿ ಬ್ರೇಕಪ್ ಆಗಿದ್ದು ಚಿತ್ರದೊಂದಿಗೆ ಅಲ್ಲ, ಬದಲಿಗೆ ನಾಯಕಿ ಜತೆ.
ಹೌದು.. ‘ಲೆಟ್ಸ್ ಬ್ರೇಕಪ್’ ಚಿತ್ರದ ನಾಯಕಿ ಸ್ಥಾನಕ್ಕೆ ಈಗ ಹೊಸ ಸ್ಪಂದನೆ ಸಿಕ್ಕಿದೆ. ಅರ್ಥಾತ್, ಶ್ರೀಲೀಲಾ ಮಾಡಬೇಕಿದ್ದ ಈ ಚಿತ್ರದ ನಾಯಕಿ ಸ್ಥಾನಕ್ಕೆ ಸ್ಪಂದನಾ ಆಗಮಿಸಿದ್ದಾರೆ. ಈ ಮೂಲಕ ಸ್ಯಾಂಡಲ್ವುಡ್ಗೆ ಹೊಸ ನಾಯಕಿಯೊಬ್ಬರ ಪ್ರವೇಶ ಆದಂತಾಗಿದೆ.
‘ಜಯಣ್ಣ ಕಂಬೈನ್ಸ್’ ಮೂಲಕ ಅದ್ದೂರಿ ಆಗಿಯೇ ನಿರ್ಮಾಣ ಆಗಲಿರುವ ಈ ಸಿನಿಮಾಗೆ ಹೊಸ ನಿರ್ದೇಶಕ ಸ್ವರೂಪ್ ಆಕ್ಷನ್-ಕಟ್ ಹೇಳಲಿದ್ದಾರೆ. ರೊಮ್ಯಾಂಟಿಕ್ ಲವ್ ಸ್ಟೋರಿ ಇರುವ ಈ ಸಿನಿಮಾಗೆ ನಾಯಕ-ನಾಯಕಿಯರಾಗಿ ಮೊದಲು ವಿಹಾನ್-ಶ್ರೀಲೀಲಾ ಅವರನ್ನು ಆಯ್ಕೆ ಮಾಡಿದ್ದ ಸ್ವರೂಪ್ ಈಗ ಸ್ಪಂದನಾ ಅವರನ್ನು ನಾಯಕಿ ಆಗಿ ಅಂತಿಮಗೊಳಿಸಿದ್ದಾರೆ.
‘ಶ್ರೀಲೀಲಾ ಇದಕ್ಕೂ ಮೊದಲೇ ಇನ್ನೊಂದು ಚಿತ್ರವನ್ನು ಒಪ್ಪಿಕೊಂಡಿದ್ದು, ಅದರ ಆರಂಭ ವಿಳಂಬವಾಗುತ್ತಿದೆ. ಹೀಗಾಗಿ ಡೇಟ್ ಕ್ಲ್ಯಾಷ್ ಆಗಲಿರುವುದರಿಂದ ಹೊಸ ನಾಯಕಿಯ ಆಯ್ಕೆ ಅನಿವಾರ್ಯವಾಯಿತು. ಈ ಹಿನ್ನೆಲೆಯಲ್ಲಿ ಕನ್ನಡದ ಹುಡುಗಿ ಸ್ಪಂದನಾ ಅವರನ್ನು ನಾಯಕಿ ಆಗಿ ನಿಗದಿ ಮಾಡಿಕೊಳ್ಳಲಾಗಿದೆ. ಮೌಂಟ್ ಕಾರ್ವೆಲ್ ಕಾಲೇಜಿನಲ್ಲಿ ಓದಿರುವ ಸ್ಪಂದನಾ, ನಾಗತಿಹಳ್ಳಿ ಚಂದ್ರಶೇಖರ ಅವರ ಟೆಂಟ್ ಸಿನಿಮಾ ಹಾಗೂ ಅನುಪಮ್ ಖೇರ್ ಅವರ ಅಭಿನಯ ಶಾಲೆಯ ವಿದ್ಯಾರ್ಥಿನಿ ಕೂಡ. ಆಡಿಷನ್ ಮೂಲಕ ಇವರನ್ನು ಆಯ್ಕೆ ಮಾಡಲಾಗಿದೆ’ ಎಂದಿದ್ದಾರೆ ನಿರ್ದೇಶಕ ಸ್ವರೂಪ್.
‘ವಿಹಾನ್ ಈ ಚಿತ್ರದ ನಾಯಕನಾಗಿ ಸಿಕ್ಸ್ ಪ್ಯಾಕ್ನಲ್ಲೂ ಕಾಣಿಸಿಕೊಂಡು ಫೈಟ್-ಹಾಡಿನಲ್ಲೂ ಮಿಂಚಲಿದ್ದಾರೆ. ಸಿನಿಮಾದಲ್ಲಿ ನಾಯಕ-ನಾಯಕಿ ಇಬ್ಬರೂ ಎಂಬಿಎ ಸ್ಟುಡೆಂಟ್ಸ್ ಪಾತ್ರದಲ್ಲಿ ಅಭಿನಯಿಸಲಿದ್ದಾರೆ. ಇದು ಲವ್ ಸ್ಟೋರಿ ಚಿತ್ರವಾದರೂ ಇದರೊಳಗೊಂದು ಬ್ರೇಕಪ್ ಇದೆ. ಚಿತ್ರದಲ್ಲಿನ ಕಥೆಗೆ ಸೂಕ್ತವಾಗುತ್ತದೆ ಹಾಗೂ ಹೊಸ ಪೀಳಿಗೆಯ ಪ್ರೇಮಿಗಳು ಸಾಮಾನ್ಯವಾಗಿ ಬಳಸುವ ಪದ ಇದಾದ್ದರಿಂದ ‘ಲೆಟ್ಸ್ ಬ್ರೇಕಪ್’ ಎಂಬ ಟೈಟಲ್ ಇಟ್ಟಿದ್ದೇವೆ. ಜತೆಗೆ ‘ಫಾರೆವರ್’ ಎಂಬ ಅಡಿಬರಹ ಕೂಡ ಇದೆ..’ ಎನ್ನುತ್ತಾರೆ ನಿರ್ದೇಶಕರು. ಪ್ರೇಮಿಗಳ ದಿನದಂದು ಚಿತ್ರದ ಫಸ್ಟ್ ಲುಕ್, ಟೀಸರ್ ಇತ್ಯಾದಿ ಬಿಡುಗಡೆ ಮಾಡುವ ಗುರಿ ಇರಿಸಿಕೊಂಡಿದೆ ಚಿತ್ರತಂಡ. ಈ ಸಿನಿಮಾಗೆ ವಿನೀತ್ ರಾಜ್ ಮೆನನ್ ಸಂಗೀತ ಸಂಯೋಜಿಸಲಿದ್ದಾರೆ.
ಹೊಸ ನಾಯಕಿಯ ಮೂಲ ಹೆಸರು ಸಂಜನಾ. ಆದರೆ ಚಿತ್ರರಂಗದಲ್ಲಿ ಸಂಜನಾ ಹೆಸರಿನ ಹಲವು ನಟಿಯರು ಇರುವುದರಿಂದ ಅವರ ಹೆಸರನ್ನು ಸ್ಪಂದನಾ ಎಂದು ಬದಲಿಸಲಾಗಿದೆ. ಮೇನಲ್ಲಿ ಶೂಟಿಂಗ್ ಆರಂಭಿಸಲಾಗುವುದು. | ಸ್ವರೂಪ್ ನಿರ್ದೇಶಕ