ವಿಹಾನ್-ದೀಪ್ತಿ ಹೊಸ ಲೆಗಸಿ; ಮತ್ತೊಂದು ಕನ್ನಡ ಚಿತ್ರದಲ್ಲಿ ಜಾಗ್ವಾರ್​ ಬೆಡಗಿ?

Vihan Deepti 22 Jan 20
Published on

ಬೆಂಗಳೂರು: ‘ಭರಾಟೆ’ ಬೆಡಗಿ ಶ್ರೀಲೀಲಾ ಜತೆಗೆ ‘ಲೆಟ್ಸ್ ಬ್ರೇಕಪ್’ ಎಂದು ಹೇಳಲು ಹೊರಟಿರುವ ನಟ ವಿಹಾನ್ ಈಗ ಅದಕ್ಕೂ ಮುನ್ನವೇ ಹೊಸ ‘ಲೆಗಸಿ’ ಆರಂಭಿಸಿದ್ದಾರೆ. ಅವರ ಜತೆ ‘ಜಾಗ್ವಾರ್’ ಬೆಡಗಿ ದೀಪ್ತಿ ಸತಿ ಕೂಡ ಕೈಜೋಡಿಸಿದ್ದಾರಂತೆ. ಮಾತ್ರವಲ್ಲ, ಅವರಿಗೆ ‘ಗ್ರೇಟ್ ಬ್ರದರ್ಸ್’ ಕೂಡ ಬೆಂಬಲವಾಗಿ ನಿಂತಿದ್ದಾರೆ. ಹೌದು.. ‘ಗ್ರೇಟ್ ಬ್ರೋಸ್ ಪಿಕ್ಚರ್ಸ್’ ಬ್ಯಾನರ್​ನಲ್ಲಿ ಮೂಡಿಬರಲಿರುವ ‘ಲೆಗಸಿ’ ಸಿನಿಮಾದಲ್ಲಿ ವಿಹಾನ್ ನಾಯಕರಾಗಿ ಅಭಿನಯಿಸುತ್ತಿದ್ದು, ಅವರಿಗೆ ಜೋಡಿಯಾಗಿ ದೀಪ್ತಿ ಸತಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಅಲ್ಲದೆ, ಈ ಮೂಲಕ ಹೊಸ ನಿರ್ದೇಶಕರೊಬ್ಬರು ಸ್ಯಾಂಡಲ್​ವುಡ್​ಗೆ ಪದಾರ್ಪಣೆ ಮಾಡುತ್ತಿದ್ದಾರೆ.

‘ಮುನಿರತ್ನ ಕುರುಕ್ಷೇತ್ರ’ ಸಿನಿಮಾಗೆ ಅಸೋಸಿಯೇಟ್ ಡೈರೆಕ್ಟರ್ ಆಗಿ ಕೆಲಸ ಮಾಡಿರುವ ಸುಭಾಷ್ ಚಂದ್ರ ಈ ಚಿತ್ರಕ್ಕೆ ಆಕ್ಷನ್-ಕಟ್ ಹೇಳುವ ಮೂಲಕ ಪೂರ್ಣಪ್ರಮಾಣದ ನಿರ್ದೇಶಕರಾಗಿ ಹೊರಹೊಮ್ಮಿದ್ದಾರೆ.

‘ಇದೊಂದು ಆಕ್ಷನ್-ಥ್ರಿಲ್ಲರ್ ಸಿನಿಮಾವಾದರೂ ಫ್ಯಾಮಿಲಿ ಸೆಂಟಿಮೆಂಟ್ ಕೂಡ ಇರಲಿದೆ. ಒಬ್ಬ ದೊಡ್ಡ ಲೇಖಕನಿಂದ ಶುರುವಾಗುವ ಕಥೆ, ಬಳಿಕ ಅವನ ಮಗನ ಸುತ್ತ ಮುಂದುವರಿಯುತ್ತದೆ. ಅಂದರೆ 1990ರಿಂದ ಆರಂಭವಾಗುವ ಕಥೆ 2020ರವರೆಗೂ ಸಾಗಲಿದೆ. ಈ ಚಿತ್ರದಲ್ಲಿ ನಾಯಕಿ 2 ಶೇಡ್​ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಒಂದರಲ್ಲಿ ಕಾಲೇಜು ವಿದ್ಯಾರ್ಥಿನಿ ಹಾಗೂ ಇನ್ನೊಂದರಲ್ಲಿ ಸಿನಿಮಾ ಸ್ಕ್ರಿಪ್ಟ್ ರೈಟರ್ ಆಗಿ ನಟಿಸಲಿದ್ದಾರೆ. ಮತ್ತೊಂದೆಡೆ ವಿಹಾನ್ ಮೂರು ಶೇಡ್​ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ’ ಎನ್ನುವ ನಿರ್ದೇಶಕರು, ನಾಯಕನ ಪಾತ್ರದ ಬಗ್ಗೆ ಹೆಚ್ಚಿನ ಮಾಹಿತಿ ಹೇಳಲು ನಿರಾಕರಿಸುತ್ತಾರೆ.

‘ಇತ್ತೀಚೆಗಷ್ಟೇ ಚಿತ್ರದ ಮುಹೂರ್ತ ನೆರವೇರಿದ್ದು, ಸದ್ಯ ವಿಹಾನ್ ಅಭಿನಯದ ಕೆಲವು ದೃಶ್ಯಗಳ ಚಿತ್ರೀಕರಣ ನಡೆಯುತ್ತಿದೆ. ಫೆಬ್ರವರಿಯಿಂದ ಶೂಟಿಂಗ್ ಪೂರ್ಣಪ್ರಮಾಣದಲ್ಲಿ ಆರಂಭವಾಗಲಿದ್ದು, ಆಗ ನಾಯಕಿ ಚಿತ್ರತಂಡಕ್ಕೆ ಸೇರಿಕೊಳ್ಳಲಿದ್ದಾರೆ’ ಎಂಬ ಮಾಹಿತಿ ನೀಡಿದ್ದಾರೆ ನಿರ್ದೇಶಕರು.

ವಿಹಾನ್ ಮಾತ್ರ ಸದ್ಯಕ್ಕೆ ಅಂತಿಮವಾಗಿದ್ದು, ಉಳಿದ ಪಾತ್ರಕ್ಕೆ ಕಲಾವಿದರನ್ನು ಇನ್ನಷ್ಟೇ ಆರಿಸಿಕೊಳ್ಳಬೇಕಿದೆ. ‘1/4 ಕೆಜಿ ಪ್ರೀತಿ’ ಚಿತ್ರದ ಮೂಲಕ ನಾಯಕರಾಗಿ ಸ್ಯಾಂಡಲ್​ವುಡ್​ಗೆ ಪ್ರವೇಶಿಸಿರುವ ವಿಹಾನ್, ಯೋಗರಾಜ್ ಭಟ್ ನಿರ್ದೇಶನದ ‘ಪಂಚತಂತ್ರ’ ಸಿನಿಮಾದಲ್ಲೂ ನಾಯಕರಾಗಿ ಗಮನ ಸೆಳೆದಿದ್ದಾರೆ. ಇನ್ನು ನಾಯಕಿ ಪಾತ್ರಕ್ಕೆ ನಿಖಿಲ್ ಕುಮಾರಸ್ವಾಮಿ ಅಭಿನಯದ ‘ಜಾಗ್ವಾರ್’ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದ ದೀಪ್ತಿ ಸತಿ ಅವರನ್ನು ಸಂರ್ಪಸಲಾಗಿದೆ. ಆ ಬಗ್ಗೆ ಮಾತುಕತೆ ನಡೆಯುತ್ತಿದೆ. ಡೇಟ್ ಹೊಂದಾಣಿಕೆ ಸಮಸ್ಯೆಯಿಂದಾಗಿ ನಿರ್ಧಾರ ಸ್ವಲ್ಪ ವಿಳಂಬವಾಗುತ್ತಿದೆ. ಅದಾಗ್ಯೂ ಚಿತ್ರತಂಡ ದೀಪ್ತಿ ಅವರನ್ನೇ ಅಂತಿಮಗೊಳಿಸುವ ಯತ್ನದಲ್ಲಿದೆ. ಚೆನ್ನೈನ ಸುಂದರ್ ಪಾಂಡ್ಯನ್ ಛಾಯಾಗ್ರಹಣ, ‘ಬಾಹುಬಲಿ’ ಸಿನಿಮಾಗೆ ಕೆಲಸ ಮಾಡಿದ್ದ ಶಿವಪ್ರೇಮ್ ಸಾಹಸ ಸಂಯೋಜನೆ ಈ ಸಿನಿಮಾಗಿದೆ. ಬೆಂಗಳೂರು, ದೊಡ್ಡಬಳ್ಳಾಪುರ, ಕೊಡಗು, ಚಿಕ್ಕಮಗಳೂರು, ಮಂಗಳೂರು ಮುಂತಾದೆಡೆ ಚಿತ್ರೀಕರಣ ನಡೆಯಲಿದ್ದು, ಏಪ್ರಿಲ್​ನೊಳಗೆ ಮುಗಿಸಿ ಜುಲೈನಲ್ಲಿ ಬಿಡುಗಡೆ ಮಾಡುವ ಗುರಿ ಇರಿಸಿಕೊಂಡಿದೆ ಚಿತ್ರತಂಡ. ಇನ್ನು ಈ ಚಿತ್ರಕ್ಕೆ ಸುಭಾಷ್ ಚಂದ್ರ ಒಂಥರ ನಿರ್ದೇಶಕ-ಕಂ-ನಿರ್ವಪಕ. ‘ನಾವೊಂದಷ್ಟು ಗೆಳೆಯರೆಲ್ಲ ಸೇರಿ ‘ಗ್ರೇಟ್ ಬ್ರೋಸ್ ಪಿಕ್ಚರ್ಸ್’ ಎಂಬ ಕಂಪನಿ ಹುಟ್ಟುಹಾಕಿ, ಆ ಮೂಲಕ ಬಂಡವಾಳ ಹಾಕಿ ಸಿನಿಮಾ ಮಾಡುತ್ತಿದ್ದೇವೆ’ ಎಂದಿದ್ದಾರೆ ಸುಭಾಷ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net