ಬೇಸಗೆ ರಜೆಯಲ್ಲಿ ವಿದ್ಯಾಪತಿ: ನಾಗಭೂಷಣ್, ಮಲೈಕಾ ಅಭಿನಯದ ಕಾಮಿಡಿ ಎಂಟರ್‌ಟೈನರ್

vidyapathi
Published on

ಬೆಂಗಳೂರು: ನಟ ಡಾಲಿ ಧನಂಜಯ್ ನಿರ್ಮಿಸುತ್ತಿರುವ ನಾಲ್ಕನೇ ಸಿನಿಮಾ ‘ವಿದ್ಯಾಪತಿ’. ಈಗಾಗಲೇ ಪ್ರೋಮೋ ಹಾಗೂ ‘ಅಯ್ಯೋ ವಿಧಿಯೇ’ ಸಾಂಗ್ ಮೂಲಕ ಗಮನಸೆಳೆದಿರುವ ಈ ಚಿತ್ರಕ್ಕೆ ‘ಟಗರು ಪಲ್ಯ’ ಖ್ಯಾತಿಯ ನಾಗಭೂಷಣ್ ನಾಯಕನಾಗಿದ್ದು, ಅವರಿಗೆ ‘ಉಪಾಧ್ಯಕ್ಷ’ ನಟಿ ಮಲೈಕಾ ವಸುಪಾಲ್ ಜೋಡಿಯಾಗಿದ್ದಾರೆ. ಕಳೆದ ಸಂಕ್ರಾಂತಿಗೆ ‘ವಿದ್ಯಾಪತಿ’ ಚಿತ್ರ ಅನೌನ್ಸ್ ಮಾಡಲಾಗಿತ್ತು. ಇದೀಗ ಚಿತ್ರೀಕರಣ ಪೂರ್ಣಗೊಳಿಸಿರುವ ಚಿತ್ರತಂಡ ಸದ್ಯ ಪೋಸ್ಟ್-ಪ್ರೊಡಕ್ಷನ್ ಕೆಲಸಗಳಲ್ಲಿ ಬಿಜಿಯಿದೆ. ಈ ಮಧ್ಯೆ ‘ವಿದ್ಯಾಪತಿ’ ಟೀಮ್ ಸಂಕ್ರಾಂತಿ ಹಬ್ಬಕ್ಕೆ ಸಿನಿಮಾ ಬಿಡುಗಡೆಯ ಸಿಹಿ ಸುದ್ದಿ ನೀಡಿದೆ. ಇದೇ ಏ. 10ರಂದು ಚಿತ್ರವನ್ನು ರಿಲೀಸ್ ಮಾಡಲಾಗುವುದು ಎಂದು ತಂಡ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ನಟ ಧನಂಜಯ್, ನಾಗಭೂಷಣ್ ಹಾಗೂ ವಿತರಕ ಕಾರ್ತಿಕ್ ಗೌಡ ವಿಶೇಷ ವಿಡಿಯೋ ಮೂಲಕ ರಿಲೀಸ್ ಡೇಟ್ ಅನೌನ್ಸ್ ಮಾಡಿದ್ದು, ಈ ಬೇಸಿಗೆ ರಜೆಯಲ್ಲಿ ಮನರಂಜನೆ ನೀಡಲು ‘ವಿದ್ಯಾಪತಿ’ ಬರುತ್ತಿದ್ದಾನೆ ಎಂದು ಹಾಸ್ಯದ ಮೂಲಕ ಅನೌನ್ಸ್ ಮಾಡಿದ್ದಾರೆ. ‘ಇಕ್ಕಟ್’ ಖ್ಯಾತಿಯ ಇಶಾಂ ಮತ್ತು ಹಸೀಂ ಖಾನ್ ಕಥೆ ಬರೆದು ನಿರ್ದೇಶಿಸುತ್ತಿದ್ದು, ಸಂಕಲನದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ಈ ಚಿತ್ರದಲ್ಲಿ ನಾಗಭೂಷಣ್ ಕರಾಟೆಪಟುವಾಗಿ ಕಾಣಿಸಿಕೊಂಡಿದ್ದು, ಮಾಸ್ಟರ್ ಆಗಿ ರಂಗಾಯಣ ರಘು ಅಭಿನಯಿಸಿದ್ದಾರೆ. ಅಂದಹಾಗೆ, ಯಶ್ ನಟಿಸುತ್ತಿರುವ ‘ಟಾಕ್ಸಿಕ್’ ಬಿಡುಗಡೆ ದಿನಾಂಕದಂದೇ ‘ವಿದ್ಯಾಪತಿ’ ತೆರೆಗೆ ಬರಲಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net