vidhyarthi vidhyarthiniyare review: ಹದಿಹರೆಯದವರ ತವಕ ತಲ್ಲಣಗಳು !

vidhyarthi film
Published on

ಚಿತ್ರ: ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’
ನಿರ್ದೇಶಕ: ಅರುಣ್ ಅಮುಕ್ತ್
ತಾರಾಗಣ: ಚಂದನ್ ಶೆಟ್ಟಿ, ಮನೋಜ್ ವಿವಾನ್, ಅಮರ್, ಮಾನಸಿ, ಭಾವನಾ, ಪ್ರಶಾಂತ್ ಸಂಬರಗಿ ಮತ್ತಿತರರು

ರೇಟಿಂಗ್: 3.5

ಶಿವ ಸ್ಥಾವರಮಠ
‘ಇದೇ ಚಿತ್ರ ಬೇರೆ ಭಾಷೆಗಳಲ್ಲಿ ಬಂದಿದ್ದರೆ, ಇದಪ್ಪಾ ಸಿನಿಮಾ ಎಂದು ಉದ್ಗರಿಸುವ ಅಭಿಮಾನಿಗಳೇ, ಕನ್ನಡದಲ್ಲಿ ಸಂದೇಶ ನೀಡುವ ಜತೆಗೆ ಕ್ಲಾಸ್ ಸಿನಿಮಾ ಬಂದಿದೆ. ಬಂದು ನೋಡಿ. ಅದು ಬಿಟ್ಟು, ಕನ್ನಡ ಸಿನಿಮಾಗಳನ್ನು ದೂರದಿರಿ!’.. ಇದು ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ನೋಡಿದ ಪ್ರೇಕ್ಷಕರೊಬ್ಬರ ಆಕ್ರೋಶದ ನುಡಿ.

ಡೊನೇಷನ್, ಪರೀಕ್ಷಾ ಅಕ್ರಮದ ಸಮಸ್ಯೆಗಳು ಒಂದೆಡೆಯಾದರೆ, ಇನ್ನು ಆಂತರಿಕವಾಗಿ ಶಿಕ್ಷಣ ವ್ಯವಸ್ಥೆಯು ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ವಿದ್ಯಾರ್ಥಿಗಳು ದಾರಿ ತಪ್ಪುತ್ತಿದ್ದಾರೆ. ರ‌್ಯಾಗಿಂಗ್, ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗುವ ಮೂಲಕ ತಮ್ಮ ಭವಿಷ್ಯವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಇದು ಹೀಗೆ ಮುಂದುವರಿದರೆ ಮುಂದೊಂದು ದಿನ ಇಡೀ ನಾಗರಿಕ ಸಮಾಜ ತಲೆತಗ್ಗಿಸುವಂತಾಗಬಹುದು ಎಂಬ ಎಚ್ಚರಿಕೆಯೊಂದಿಗೆ ನಿರ್ದೇಶಕ ಅರುಣ್ ಅಮುಕ್ತ್ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ನಿರೂಪಿಸಿದ್ದಾರೆ. ಪ್ರಾಥಮಿಕ ಹಾಗೂ ಪ್ರೌಢಶಾಲೆ ವಿದ್ಯಾರ್ಥಿಗಳ ಸುತ್ತ ಹೆಣೆದ ಕಥೆಯಾಗಿದ್ದು, ಹದಿಹರೆಯದ ವಯಸ್ಸಿನವರ ತವಕ-ತಲ್ಲಣಗಳನ್ನು ತೋರಿಸಲಾಗಿದೆ. ಮಕ್ಕಳ ಕೆಟ್ಟ ಜೀವನ ಶೈಲಿ, ಮೊಬೈಲ್ ಅಡಿಕ್ಷನ್, ಸಂಬಂಧಗಳಿಗೆ ಬೆಲೆ ನೀಡದ ಪರಿಸ್ಥಿತಿ ಎದುರಾದಾಗ ಪಾಲಕರು ನಿರ್ವಹಿಸಬೇಕಾದ ಜವಾಬ್ದಾರಿ, ಮೂಡಿಸಬೇಕಾದ ಅರಿವಿನ ಕುರಿತು ಅರುಣ್ ಬೆಳಕು ಚೆಲ್ಲಿದ್ದಾರೆ.

ಚಿತ್ರಕಥೆಯೇ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಚಿತ್ರದ ಹೈಲೈಟ್. ಗಂಭೀರ ವಿಷಯವನ್ನು ತುಂಬಾ ಸೂಕ್ಷ್ಮವಾಗಿ ತೋರಿಸಲಾಗಿದೆ. ಪ್ರತಿಷ್ಠಿತ ಶಾಲೆಯಲ್ಲಿ ಓದುವ ಪ್ರಭಾವಿಗಳ ಮಕ್ಕಳ ಗುಂಪು. ಇಡೀ ಶಾಲೆಯೇ ಅವರ ಕೈಯಡಿ ಇದೆ ಎಂಬ ಹುಂಬತನ. ಓದುವುದನ್ನು ಬಿಟ್ಟು ಉಳಿದೆಲ್ಲ ಅನೈತಿಕ ಚಟುವಟಿಕೆಗಳಲ್ಲಿ ಭಾಗಿಯಾಗಿರುತ್ತಾರೆ. ಈ ಮಧ್ಯೆ ಶಾಲೆಯಲ್ಲಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆಗೆ ಶರಣಾಗುತ್ತಾಳೆ. ಆ ಸಾವಿಗೆ ಕಾರಣವಾದರೂ ಏನು? ಈ ಗುಂಪಿಗೂ ಏನಾದರೂ ಲಿಂಕ್ ಇದೆಯಾ? ಕೊನೆಗೆ ಆ ವಿದ್ಯಾರ್ಥಿನಿಗೆ ನ್ಯಾಯ ಸಿಗುತ್ತದೆಯೇ? ಎಂಬ ಹಲವು ಪ್ರಶ್ನೆಗಳೊಂದಿಗೆ ಮುಂದೆ ಏನಾಗುತ್ತದೆ ಎಂಬ ಕುತೂಹಲದೊಂದಿಗೆ ಚಿತ್ರಕಥೆ ಸಾಗುತ್ತದೆ. ತಿಳಿ ಹಾಸ್ಯ, ತರಲೆ, ಸಾಹಸ ದೃಶ್ಯಗಳ ಮಧ್ಯೆ ತೀವ್ರ ಭಾವನಾತ್ಮಕ ಸನ್ನಿವೇಶಗಳು ಕಣ್ಣನ್ನು ಒದ್ದೆಯಾಗಿಸುತ್ತವೆ.

ನಟ ಚಂದನ್ ಶೆಟ್ಟಿ ಎರಡು ಶೇಡ್‌ನಲ್ಲಿ ಕಾಣಿಸಿಕೊಂಡಿದ್ದು, ಇಡೀ ಸಿನಿಮಾದ ಗೇಮ್ ಚೇಂಜರ್ ರೋಲ್ ಪಾತ್ರ ನಿರ್ವಹಿಸಿದ್ದಾರೆ. ಮನೋಜ್ ವಿವಾನ್, ಅಮರ್, ಮಾನಸಿ, ಭಾವನಾ ಅಪ್ಪು ಮೊದಲ ಪ್ರಯತ್ನದಲ್ಲಿಯೇ ಗಮನಸೆಳೆಯುತ್ತಾರೆ. ಸಂಭಾಷಣೆಗೆ ತಕ್ಕಂತೆ ಹಿನ್ನೆಲೆ ಸಂಗೀತ ಚೆನ್ನಾಗಿ ಮೂಡಿಬಂದಿದೆ. ಪಾರ್ಟಿ ಸಾಂಗ್‌ಗಳು ಕ್ರೇಜ್ ಹೆಚ್ಚಿಸಿ ಕುಣಿದು ಕುಪ್ಪಳಿಸುವಂತೆ ಮಾಡುತ್ತವೆ. ಛಾಯಾಗ್ರಹಣದಲ್ಲಿ ಶಾಲಾ ವಾತಾವರಣ ಮೂಡಿಬಂದಿದೆ. ವಿದ್ಯಾರ್ಥಿಗಳ ಜೀವನ ಬಂಗಾರವಾಗಿದ್ದು, ಹಾಳು ಮಾಡಿಕೊಳ್ಳಬಾರದು ಎಂಬ ಸಂದೇಶ ನೀಡುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net