

ಬೆಂಗಳೂರು: ಸಿನಿಮಾ ತಾರೆಯರು ಆಗಾಗ ಕಿರುಚಿತ್ರ, ವೆಬ್ಸೀರಿಸ್, ವಿಡಿಯೋ ಆಲ್ಬಂಗಳಲ್ಲಿ ಎದುರಾಗಿ ಹೊಸ ಪ್ರಯತ್ನಕ್ಕೆ ಅಡಿ ಇಡುತ್ತಿರುತ್ತಾರೆ. ಅಂಥದ್ದೇ ಪ್ರಯತ್ನಕ್ಕೆ ಆದರ್ಶ್ ಈಶ್ವರಪ್ಪ ನಿರ್ದೇಶನದ ‘ಭಿನ್ನ’ ಸಿನಿಮಾದಲ್ಲಿ ಅಭಿನಯಿಸಿದ್ದ ಬೆಡಗಿ ಪಾಯಲ್ ರಾಧಾಕೃಷ್ಣ ಕೈ ಹಾಕಿದ್ದಾರೆ. ಅಂದರೆ, ‘ಸೇರು ನನ್ನ ತೋಳಲ್ಲಿ, ನನ್ನಾಣೆ ನೀನೇ ನನ್ನ ಉಸಿರಲ್ಲಿ..’ ಆಲ್ಬಂ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.
ಅಂದಹಾಗೆ, ‘ಲೈಫ್ 360’ ಸಿನಿಮಾದಲ್ಲಿ ನಟಿಸಿದ್ದ ಅರ್ಜುನ್ ಕಿಶೋರ್ ಚಂದ್ರ, ಈ ಹಾಡಿಗೆ ಸಾಹಿತ್ಯ ಬರೆದು ನಟಿಸಿದ್ದಾರೆ. ಸದ್ಯ ಯೂಟ್ಯೂಬ್ನಲ್ಲಿ 5 ನಿಮಿಷ 36 ಸೆಕೆಂಡ್ಗಳ ಹಾಡು ಲಭ್ಯವಿದ್ದು, ಅಂಧೆ ಮತ್ತು ಆತನ ಪ್ರಿಯಕರನ ಪ್ರೀತಿಯನ್ನು ಹಾಡಿನಲ್ಲಿ ತೋರಿಸುವ ಕೆಲಸ ಮಾಡಿದ್ದಾರೆ ಅರ್ಜುನ್ ಕಿಶೋರ್. ಇತ್ತೀಚೆಗಷ್ಟೇ ರ್ಯಾಪರ್ ಸಿದ್ದ್ ‘ಸೇರು ನಿನ್ನ ತೋಳಲ್ಲಿ..’ ಆಲ್ಬಂ ಅನಾವರಣಗೊಳಿಸಿ ತಂಡಕ್ಕೆ ಶುಭ ಹಾರೈಸಿದ್ದಾರೆ.
ಚಿಕ್ಕಮಗಳೂರು, ಬೆಂಗಳೂರು ಸುತ್ತಮುತ್ತಲಿನ ಸುಂದರ ತಾಣಗಳಲ್ಲಿ ಮೂರು ದಿನಗಳ ಕಾಲ ಹಾಡನ್ನು ಚಿತ್ರೀಕರಿಸಲಾಗಿದ್ದು, ಸುಮಾರು ಏಳು ಲಕ್ಷ ರೂ. ವೆಚ್ಚ ತಗುಲಿದೆ. ಸಂಗೀತ ಸಂಯೋಜನೆ ಮಾಡುವುದರ ಜತೆಗೆ ಕಂಠದಾನವನ್ನೂ ಮಾಡಿದ್ದಾರೆ ಅದ್ವಿಕ್. ಅಭಿಮನ್ಯು ಸದಾನಂದ್ ಛಾಯಾಗ್ರಹಣ ನಿಭಾಯಿಸಿದ್ದಾರೆ. ಗಗನ್ ಜೆ. ಗೌಡ, ಸುನಿಲ್ಕುಮಾರ್ ಜಂಟಿಯಾಗಿ ‘ಕ್ರಾಂತಿ ಕ್ರಿಯೇಷನ್ಸ್’ ಮೂಲಕ ನಿರ್ಮಾಣ ಮಾಡಿದ್ದಾರೆ. ಭಾನುಪ್ರತಾಪ್ ಒಡೆತನದ ‘50 ಎಂಎಂ ಸ್ಟುಡಿಯೋ’ದಲ್ಲಿ ಚಿತ್ರೀಕರಣೋತ್ತರ ಕೆಲಸಗಳು ನಡೆದಿದ್ದು, ವಿನೋದ್ ವಿಕೆ ಸಂಕಲನ ಮಾಡಿದ್ದಾರೆ.