

'ಉರಿ: ದಿ ಸರ್ಜಿಕಲ್ ಸ್ಟ್ರೈಕ್' ಸರಿಯಾಗಿ ಒಂದು ವರ್ಷದ ಹಿಂದೆ ಸಂಚಲನ ಮೂಡಿಸಿದ್ದ ಬಾಲಿವುಡ್ ಸಿನಿಮಾ.
2016ರ ಸೆಪ್ಟೆಂಬರ್ನಲ್ಲಿ ಪಾಕ್ ಉಗ್ರರು ಜಮ್ಮು-ಕಾಶ್ಮೀರದ ಉರಿಯಲ್ಲಿ ಭಾರತೀಯ ಸೈನಿಕ ಶಿಬಿರದ ಮೇಲೆ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಸುಮಾರು 19 ಯೋಧರು ಮರಣಹೊಂದಿದ್ದರು. ಅದಕ್ಕೆ ಪ್ರತಿಯಾಗಿ ಭಾರತೀಯ ಸೇನೆ ಕೆಲವೇ ದಿನಗಳಲ್ಲಿ ಉರಿ ಸರ್ಜಿಕಲ್ ಸ್ಟ್ರೈಕ್ ನಡೆಸಿ ಪ್ರತೀಕಾರ ತೀರಿಸಿಕೊಂಡಿತ್ತು.
ಇದೇ ಕಥಾಹಂದರವನ್ನಿಟ್ಟುಕೊಂಡು ನಿರ್ದೇಶಕ ಆದಿತ್ಯ ಧಾರ್ ಉರಿ-ದಿ ಸರ್ಜಿಕಲ್ ಸ್ಟ್ರೈಕ್ ಎಂಬ ಸಿನಿಮಾ ಮಾಡಿದ್ದರು. ಅದು 2019ರ ಜನವರಿ 11ರಂದು ಬಿಡುಗಡೆಯಾಗಿತ್ತು. ಅದ್ಭುತ ಯಶಸ್ಸನ್ನೂ ಗಳಿಸಿತ್ತು.
ಈ ಸಿನಿಮಾದಲ್ಲಿ ಮುಖ್ಯಪಾತ್ರದಲ್ಲಿ ಅಭಿನಯಿಸಿದ್ದ ನಟ ವಿಕ್ಕಿ ಕೌಶಾಲ್ ಅತ್ಯುತ್ತಮ ನಟ ರಾಷ್ಟ್ರಪ್ರಶಸ್ತಿಗೆ ಭಾಜನರಾಗಿದ್ದರು.
ಸಿನಿಮಾಕ್ಕೆ ಸರಿಯಾಗಿ ಒಂದು ವರ್ಷವಾದ ಹಿನ್ನೆಲೆಯಲ್ಲಿ ವಿಕ್ಕಿ ಕೌಶಾಲ್, ಸಿನಿಮಾದ ಫೋಟೋವೊಂದನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿ, ಈ ಚಿತ್ರದಲ್ಲಿ ಅಭಿನಯಿಸಿದ ನಮ್ಮೆಲ್ಲರಿಂದ ಹಿಡಿದು, ಸಿನಿಮಾವನ್ನು ಪ್ರೋತ್ಸಾಹಿಸಿದ ನಿಮ್ಮೆಲ್ಲರವರೆಗೆ ಪ್ರತಿಯೊಬ್ಬರಿಗೂ ಧನ್ಯವಾದಗಳು. ಉರಿ ತಂಡ ಯಾವಾಗಾಲೂ ಕೃತಜ್ಞವಾಗಿರುತ್ತದೆ ಎಂದು ಕ್ಯಾಪ್ಷನ್ ಬರೆದಿದ್ದಾರೆ. ಈ ಮೂಲಕ ತಮ್ಮ ಸಂತೋಷ ವ್ಯಕ್ತಪಡಿಸಿದ್ದಾರೆ.
ಹಾಗೇ ಈ ಸಿನಿಮಾದ ನಟಿ ಯಾಮಿ ಗೌತಮ್ ಅವರೂ ಕೂಡ ವಿಕ್ಕಿ ಕೌಶಾಲ್ ಮತ್ತು ಆದಿತ್ಯ ಧಾರ್ ಅವರೊಂದಿಗೆ ಇರುವ ಫೋಟೋ ಪೋಸ್ಟ್ ಮಾಡಿ, ನಮ್ಮ ಯೋಧರಿಗೆ ಹಾಗೂ ನಾವು ಮಾಡಿದ ಉರಿ ದಿ ಸರ್ಜಿಕಲ್ ಸ್ಟ್ರೈಕ್ ಸಿನಿಮಾವನ್ನು ಪ್ರೀತಿಯಿಂದ ಒಪ್ಪಿಕೊಂಡ ವೀಕ್ಷಕರಿಗೆ ಸದಾ ಕೃತಜ್ಞತೆಗಳು. ಉರಿ ಸಿನಿಮಾ ಅದ್ಭುತ ರೀತಿಯಲ್ಲಿ ಮೂಡಿಬರಲು ಹಾರ್ಡ್ ವರ್ಕ್ ಮಾಡಿದ ಸಿನಿಮಾ ತಂಡಕ್ಕೆ ಕೂಡ ಧನ್ಯವಾದಗಳು ಎಂದು ಬರೆದಿದ್ದಾರೆ.
ಉರಿ ಸಿನಿಮಾ ವಿಮರ್ಶಕರಿಂದಲೂ ಪ್ರಶಂಸೆಯನ್ನು ಪಡೆದಿತ್ತು. ಬಾಕ್ಸ್ ಆಫೀಸ್ನಲ್ಲೂ ಮಾಸಿವ್ ಅಮೋಘ ಯಶಸ್ಸು ಗಳಿಸಿತ್ತು. ಸುಮಾರು 342 ಕೋಟಿ ರೂಪಾಯಿಯನ್ನು ಗಳಿಕೆ ಮಾಡಿತ್ತು.(ಏಜೆನ್ಸೀಸ್)