

ಬೆಂಗಳೂರು: ನಟ ಶಶಿಕುಮಾರ್ ಪುತ್ರ ಆದಿತ್ಯ ‘ಮೊಡವೆ’ ಸಿನಿಮಾ ಮೂಲಕ ಸ್ಯಾಂಡಲ್ವುಡ್ಗೆ ಪದಾರ್ಪಣೆ ಮಾಡುತ್ತಿರುವುದು ಗೊತ್ತಿರುವ ವಿಚಾರ. ಆ ಚಿತ್ರದ ಮುಹೂರ್ತ ಕಾರ್ಯಕ್ರಮಕ್ಕೆ ಸ್ಟಾರ್ ಕಲಾವಿದರಾದ ಶಿವರಾಜ್ಕುಮಾರ್ ಮತ್ತು ದರ್ಶನ್ ಆಗಮಿಸಿ ಕ್ಲಾಪ್ ಮಾಡಿ ಶುಭಹಾರೈಸಿದ್ದರು. ಈಗ ಆ ಸಿನಿಮಾಕ್ಕೂ ಮುನ್ನ ಆದಿತ್ಯ ಟಾಲಿವುಡ್ಗೆ ಎಂಟ್ರಿ ಕೊಟ್ಟಿದ್ದಾರೆ. ಅಷ್ಟೇ ಅಲ್ಲ ಸಿನಿಮಾವೊಂದರಲ್ಲಿ ನಟಿಸಿ, ಅದರ ಚಿತ್ರೀಕರಣವನ್ನೂ ಮುಗಿಸಿಕೊಂಡು ಬಂದಿದ್ದಾರೆ! ಹಾಗಾದರೆ ಯಾವುದಾ ಸಿನಿಮಾ? ಪ್ರಭಾಕರ್ ಆರಿಪ್ಕಾ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಸೀತಾಯಣಂ’.
ಹೌದು, ‘ಸೀತಾಯಣಂ’ ಸಿನಿಮಾಕ್ಕೆ ತೆಲುಗಿನವರೇ ನಿರ್ವಪಕರು. ಅಲ್ಲಿನ ಕಲಾವಿದರೇ ಚಿತ್ರದಲ್ಲಿ ನಟಿಸಿದ್ದಾರೆ. ಅಷ್ಟೇ ಅಲ್ಲ ತಾಂತ್ರಿಕ ವಿಭಾಗದಲ್ಲೂ ತೆಲುಗಿನವರಿದ್ದಾರೆ. ಹಾಗಾಗಿ ಮೂಲ ಟಾಲಿವುಡ್ ಸಿನಿಮಾ ಆಗಿರುವ ‘ಸೀತಾಯಣಂ’ ಕನ್ನಡದಲ್ಲೂ ಅದೇ ಹೆಸರಿನಲ್ಲಿ ಡಬ್ ಆಗಿ ತೆರೆಕಾಣಲಿದ್ದು, ಡಬ್ಬಿಂಗ್ ಕೆಲಸಗಳು ಚಾಲ್ತಿಯಲ್ಲಿವೆ. ಕನ್ನಡದ ‘ಮೊಡವೆ’ಗೂ ಮುನ್ನವೇ ಈ ಸಿನಿಮಾ ಬಿಡುಗಡೆ ಆಗಲಿದೆ ಎನ್ನುವ ಮಾತುಗಳೂ ಕೇಳಿಬರುತ್ತಿವೆ. ಮಾಡೆಲಿಂಗ್ ಮತ್ತು ಬಣ್ಣದ ಲೋಕದ ನಂಟಿರುವ ಮುಂಬೈ ಬೆಡಗಿ ಅನಹಿತ ಭೂಷಣ್, ಆದಿತ್ಯ ಶಶಿಕುಮಾರ್ಗೆ ನಾಯಕಿಯಾಗಿದ್ದಾರೆ. ಪಕ್ಕಾ ರೊಮ್ಯಾಂಟಿಕ್ ಲವ್ಸ್ಟೋರಿ ಕಥಾಹಂದರ ಹೊಂದಿದ್ದು, ನಿರ್ದೇಶಕ ಪ್ರಭಾಕರ್ ಆರಿಪ್ಕಾ ಹೊಸ ರೀತಿಯ ಪ್ರೇಮಕಥೆಯನ್ನು ‘ಸೀತಾಯಣಂ’ನಲ್ಲಿ ಹೇಳಿದ್ದಾರಂತೆ. ಸಿನಿಮಾ ಶೀರ್ಷಿಕೆ ನೋಡುತ್ತಿದ್ದರೆ ರಾಮಾಯಣಕ್ಕೂ ಸೀತಾಯಣಂಗೂ ಸಂಬಂಧ ಇದೆಯಾ ಎಂದು ಅನಿಸದೆ ಇರದು. ಆದರೆ, ಇದು ಪ್ರಸ್ತುತ ಕಾಲಘಟ್ಟಕ್ಕೆ ಸಂಬಂಧಿಸಿದ ಕಥೆಯಂತೆ. ರೋಹನ್ ಭಾರದ್ವಾಜ್ ಅರ್ಪಿಸುತ್ತಿರುವ ಈ ಚಿತ್ರಕ್ಕೆ ಲಲಿತಾ ರಾಜಲಕ್ಷ್ಮೀ, ಪದ್ಮನಾಭ್ ಭಾರದ್ವಾಜ್ ಬಂಡವಾಳ ಹೂಡುತ್ತಿದ್ದಾರೆ.
ಕಲರ್ಕ್ಲೌಡ್ ಎಂಟರ್ಟೇನ್ವೆುಂಟ್ ನಿರ್ವಣದಲ್ಲಿ ಪಾಲುದಾರಿಕೆ ಹೊಂದಿದೆ. ಇನ್ನು 2018ರ ಸೆಪ್ಟೆಂಬರ್ನಲ್ಲಿ ಮುಹೂರ್ತ ಮುಗಿಸಿಕೊಂಡಿರುವ ‘ಮೊಡವೆ’ ಸಿನಿಮಾದ ಕೆಲಸಗಳು ನಡೆಯುತ್ತಿವೆ. ಸಿದ್ದಾರ್ಥ್ ಮರಡೆಪ್ಪ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರದಲ್ಲಿ ಆದಿತ್ಯಗೆ ಅಪೂರ್ವ ಜೋಡಿಯಾಗಿದ್ದಾರೆ. ಶಿವಾನಂದ್ ಮತ್ತು ಆರ್. ಕೃಷ್ಣಮೂರ್ತಿ ನಿರ್ಮಾಣ ಮಾಡುತ್ತಿದ್ದಾರೆ.