ಸುಮ್ನೆ ಕೆಮ್ಮೋದ್ ಕಷ್ಟ ಕಷ್ಟ

NB 1
Published on

ಬೆಂಗಳೂರು: ‘ಇಷ್ಟು ವರ್ಷ ಬರವಣಿಗೆಯಲ್ಲಿ ಬಿಜಿಯಾಗಿದ್ದೆ. ಈಗ 76ನೇ ವಯಸ್ಸಿನಲ್ಲಿ ತೆರೆಮೇಲೆ ಬಣ್ಣಹಚ್ಚಿದ್ದೇನೆ. ನಿರ್ವಪಕರ ಒತ್ತಾಯಕ್ಕೆ ಮಣಿದು ಅಭಿನಯಿಸಲು ಒಪ್ಪಿಕೊಂಡೆ. ಚಿತ್ರದಲ್ಲಿ ಅಸ್ತಮಾ ರೋಗಿಯ ಪಾತ್ರ ನನ್ನದು. ಸುಮ್ಮನೆ ಕೆಮ್ಮುವಷ್ಟು ಕಷ್ಟದ ಕೆಲಸ ಬೇರೊಂದಿಲ್ಲ. ಅದರಲ್ಲೂ ವಿಭಿನ್ನವಾಗಿ ಕೆಮ್ಮಬೇಕಿತ್ತು. ಅಭಿನಯ ಹೊಸದಾದರೂ ಅಷ್ಟೇನೂ ಕಷ್ಟ ಎನಿಸಲಿಲ್ಲ’ ಎಂದು ತಮ್ಮ ಪಾತ್ರದ ಕುರಿತು ಹೇಳಿಕೊಂಡರು ಸಾಹಿತಿ ಎಚ್.ಎಸ್. ವೆಂಕಟೇಶಮೂರ್ತಿ. ಕೆ. ನರೇಂದ್ರಬಾಬು ಆಕ್ಷನ್-ಕಟ್ ಹೇಳಿರುವ ‘ಅಮೃತವಾಹಿನಿ’ ಚಿತ್ರದ ಧ್ವನಿಸುರುಳಿ ಬಿಡುಗಡೆ ಸಮಾರಂಭದಲ್ಲಿ ಅವರು ತಮ್ಮ ಅಭಿನಯದ ಅನುಭವ ಹಂಚಿಕೊಂಡರು. ಬರವಣಿಗೆಯಲ್ಲೇ ಹೆಚ್ಚು ತೊಡಗಿಸಿಕೊಂಡಿರುವ ಎಚ್.ಎಸ್. ವೆಂಕಟೇಶಮೂರ್ತಿ, ಈಗ ಈ ಚಿತ್ರದಲ್ಲಿ ಅಭಿನಯಿಸುವ ಮೂಲಕ ನಟರಾಗಿಯೂ ಗಮನ ಸೆಳೆಯುತ್ತಿದ್ದಾರೆ.

‘ಎಚ್​ಎಸ್​ವಿ ಅವರು ‘ಅಮೃತವಾಹಿನಿ’ಯಲ್ಲಿ ಅಭಿನಯಿಸಿರುವುದು ನಮ್ಮ ಭಾಗ್ಯ. ಅವರ ಅಭಿನಯದ ಪ್ರತಿ ದೃಶ್ಯವನ್ನೂ ಜಾಗರೂಕತೆಯಿಂದ ತೆಗೆಯುವಂತೆ ನಿರ್ದೇಶಕರಿಗೆ ಹೇಳಿದ್ದೆ. ತುಂಬ ಚೆನ್ನಾಗಿ ಅಭಿನಯಿಸಿದ್ದಾರೆ. ಚಿತ್ರವೂ ಚೆನ್ನಾಗಿ ಮೂಡಿಬಂದಿದೆ’ ಎಂದರು ನಿರ್ವಪಕ ಸಂಪತ್ ಕುಮಾರ್. ರಾಘವೇಂದ್ರ ಪಾಟೀಲರ ಕಾದಂಬರಿ ಆಧಾರಿತ ‘ಅಮೃತವಾಹಿನಿ’ಗೆ ಆಕ್ಷನ್-ಕಟ್ ಹೇಳಿರುವುದು ‘ಪಲ್ಲಕ್ಕಿ’, ‘ಯುವ’, ‘ಸಿಂಧೂರ’ ಚಿತ್ರಗಳನ್ನು ನಿರ್ದೇಶಿಸಿದ ಕೆ.ನರೇಂದ್ರಬಾಬು. ಚಿತ್ರಕ್ಕೆ ಉಪಾಸನಾ ಮೋಹನ್ ಸಂಗೀತ, ಗಿರಿಧರ್ ದಿವಾನ್ ಛಾಯಾಗ್ರಹಣವಿದೆ. ಸಮಾರಂಭದಲ್ಲಿ ನಿರ್ವಪಕ ಕೃಷ್ಣೇಗೌಡ, ಸಮಾಜ ಸೇವಕ ವಿನಯ್ ಗೌಡ, ಲಹರಿ ವೇಲು ಸೇರಿ ಚಿತ್ರರಂಗದ ಹಲವು ಗಣ್ಯರು ಉಪಸ್ಥಿತರಿದ್ದರು.

ಇದೊಂದು ಆಫ್​ಬೀಟ್ ಸಿನಿಮಾದಂತೆ ಕಂಡರೂ ನನ್ನ ಉಳಿದೆರಡು ಚಿತ್ರಗಳಿಗಿಂತ ವಿಭಿನ್ನ, ವಿಶೇಷ. ಸಾಹಿತಿ ಎಚ್.ಎಸ್. ವೆಂಕಟೇಶ್​ವುೂರ್ತಿ ಅವರು ನಟಿಸಿರುವುದೇ ಚಿತ್ರಕ್ಕೆ ಪ್ಲಸ್ ಪಾಯಿಂಟ್. ಇದು ವಯೋವೃದ್ಧರ ನೋವು-ನಲಿವಿನ ಚಿತ್ರಣ ಬಿಂಬಿಸುವ ಸಿನಿಮಾ. | ಸಂಪತ್​ಕುಮಾರ್ ನಿರ್ವಪಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net