

ಹೊಸ ವರ್ಷ ಎಂದಾಕ್ಷಣ ಅಲ್ಲೊಂದು ಸಂಭ್ರಮ ಸಹಜ. ಇರುಳುರುಳಿ ಹಗಲಾಗಿ ಹೊಸ ಹರುಷ ಅರಳುವ ಆ ಕ್ಷಣಗಳನ್ನು ಹಲವರು ಹಲವು ರೀತಿಯಲ್ಲಿ ಆಚರಿಸುತ್ತಾರೆ. ಅಂಥ ಕ್ಷಣಗಳನ್ನು ತಾರೆಯರು ಹೇಗೆ ಕಳೆಯುತ್ತಾರೆ ಎಂಬ ಕುತೂಹಲಕ್ಕೆ ಅವರೇ ಇಲ್ಲಿ ಉತ್ತರಿಸಿದ್ದಾರೆ. ಮಾತ್ರವಲ್ಲ ಅವರ ಪಾಲಿಗೆ 2019 ಹೇಗಿತ್ತು, 2020ರ ಬಗ್ಗೆ ಇರುವ ನಿರೀಕ್ಷೆಗಳೇನು ಎಂಬ ಕುರಿತಾದ ಮಾಹಿತಿಯನ್ನು ಕೂಡ ಅವರ ಮಾತುಗಳಲ್ಲೇ ವಿಜಯವಾಣಿ ಇಲ್ಲಿ ನಿಮ್ಮ ಮುಂದಿಟ್ಟಿದೆ.
ಹೊಸ ವರ್ಷ ಅಂತ ಅದಕ್ಕೇ ಜಾಸ್ತಿ ತಲೆಕೆಡಿಸಿಕೊಳ್ಳುವುದಿಲ್ಲ. ಒಂದಷ್ಟು ಸ್ನೇಹಿತರು ಒಟ್ಟಿಗೆ ಸೇರುತ್ತೇವೆ. ಸಣ್ಣಪುಟ್ಟ ಪಾರ್ಟಿ ನಡೆಯುತ್ತದೆ. ಅಲ್ಲಿಯೂ ಕೆಲಸದ್ದೇ ಮಾತುಕತೆ ಇರುತ್ತದೆ. ಕ್ಯಾಲೆಂಡರ್ ಬದಲಾದಂತೆ ನಮ್ಮ ದಿನಚರಿ, ಕೆಲಸಗಳು ಬದಲಾಗುತ್ತ ಹೋಗುತ್ತವೆ. ಹಾಗಾಗಿ ನಾನು ಯಾವುದೇ ರೆಸೊಲ್ಯುಷನ್ ಹಾಕಿಕೊಳ್ಳುವುದಿಲ್ಲ.
ಬದಲಿಗೆ 2019ಕ್ಕಿಂತ 2020ರಲ್ಲಿ ಮತ್ತಷ್ಟು ಬಿಜಿಯಾಗಲಿ. ಸಿನಿಮಾಗಳು ಸಿಗಲಿ, ಸಾಮಾಜಿಕ ಕಳಕಳಿಯ ಕೆಲಸಗಳಲ್ಲಿ ತೊಡಗಿಸಿಕೊಳ್ಳುವಂಥ ಅವಕಾಶಗಳು ಸಿಗಲಿ ಎಂಬುದನ್ನೇ ರೆಸೊಲ್ಯುಷನ್ ಎಂದುಕೊಳ್ಳಬಹುದು. 2019ರಲ್ಲಿ ನಾನು ನಟಿಸಿದ ‘ಕವಚ’ ಸಿನಿಮಾವೊಂದೇ ತೆರೆಗೆ ಬಂತು. ಐದಾರು ಸಿನಿಮಾಗಳಲ್ಲಿ ನಟಿಸಿದೆ.
ಜತೆಗೆ ಗಂಭೀರವಾದ ಗಾಯಗಳಿಂದ ಹಾಸಿಗೆ ಹಿಡಿಯಬೇಕಾಯಿತು. ಖುಷಿ ವಿಚಾರ ಏನೆಂದರೆ, ಇಷ್ಟು ದಿನ ಖಳನಾಯಕನಾಗಿದ್ದ ನಾನು, 2020ರಲ್ಲಿ ನಾಯಕನಾಗಿ ಆಗಮಿಸುತ್ತಿದ್ದೇನೆ. ನಿಜಕ್ಕೂ ವರ್ಷದಿಂದ ವರ್ಷಕ್ಕೆ ಒಳ್ಳೆಯ ಬೆಳವಣಿಗೆಗಳೇ ಘಟಿಸುತ್ತಿವೆ. ಅದು 2020ರಲ್ಲೂ ಮುಂದುವರಿಸಿಕೊಂಡು ಹೋಗುವ ನಿಟ್ಟಿನಲ್ಲಿದ್ದೇನೆ.
| ವಸಿಷ್ಠ ಸಿಂಹ