

ಬೆಂಗಳೂರು: ಒಂದು ಆಡಿಯೋ ಕಂಪೆನಿ ಮಾಡಬೇಕು, ಅದರ ಮೂಲಕ ಒಂದಿಷ್ಟು ಹೊಸಬರನ್ನು ಪ್ರೋತ್ಸಾಹಿಸಬೇಕು ಎಂದು ಬಹಳ ದಿನಗಳಿಂದ ಅದೊಂದು ಆಸೆ ಇತ್ತಂತೆ ವಸಿಷ್ಠ ಸಿಂಹಗೆ. ಅದೀಗ ನೆರವೇರಿದೆ. ಅವರೀಗ ಸಿಂಹ ಆಡಿಯೋ ಎಂಬ ಚಾನಲ್ನ್ನು ಯೂಟ್ಯೂಬ್ನಲ್ಲಿ ಪ್ರಾರಂಭಿಸಿದ್ದಾರೆ. ಮೊದಲ ಹೆಜ್ಜೆಯಾಗಿ ‘ಕಾಲಚಕ್ರ’ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿದ್ದಾರೆ. ಈ ಆಡಿಯೋ ಸಂಸ್ಥೆ ಮತ್ತು ‘ಕಾಲಚಕ್ರ’ದ ಹಾಡುಗಳನ್ನು ಸಿಂಹ ಅವರ ಗುರು ಹಂಸಲೇಖ ಮತ್ತು ಗೆಳೆಯ ಧನಂಜಯ್ ಬಿಡುಗಡೆ ಮಾಡಿದ್ದಾರೆ.
ಸಂಸ್ಥೆಗೆ ಸಿಂಹ ಆಡಿಯೋ ಎಂದು ಹೆಸರಿಡುವುದಕ್ಕೂ ವಸಿಷ್ಠಗೆ ಕಾರಣವಿಗಳಿವೆಯಂತೆ. ‘ಮೊದಲಿಗೆ ನಮ್ಮ ಮನೆದೇವರು ನರಸಿಂಹ. ಎರಡನೆಯದು ನನ್ನ ಅಪ್ಪನ ಹೆಸರು. ಮೂರನೆಯದಾಗಿ ನನ್ನ ಇಷ್ಟದ ನಟ ಸಾಹಸ ಸಿಂಹ ಹಾಗೂ ಕೊನೆಯದಾಗಿ ನಾನು ಬನ್ನೇರುಘಟ್ಟದಲ್ಲಿ ದತ್ತು ತೆಗೆದುಕೊಂಡಿರುವ ನನ್ನ ದತ್ತು ಪುತ್ರ ಸಿಂಹ’ ಎಂದು ವಸಿಷ್ಠ ವಿವರಣೆ ನೀಡುತ್ತಾರೆ.
ಯಾರಾದರೂ ಮೇಲೆ ಬಂದಾಗ ಇನ್ನೊಬ್ಬರನ್ನು ಬೆಳೆಸುವ ಗುಣವಿರಬೇಕು ಎಂದು ಮಾತು ಶುರು ಮಾಡಿದ ಹಂಸಲೇಖ, ‘ಇಲ್ಲಿ ವಸಿಷ್ಠ ಮತ್ತು ಚಿತ್ರದ ನಿರ್ದೇಶಕ ಸುಮಂತ್ ಇಬ್ಬರೂ ನನ್ನ ಶಿಷ್ಯಂದಿರು. ಈ ಮಟ್ಟಕ್ಕೆ ಬೆಳೆದಿರುವುದು ನಿಜಕ್ಕೂ ಹೆಮ್ಮೆ. ಕರ್ನಾಟಕದಲ್ಲಿ ವಿಭಿನ್ನ ಎನ್ನಬಹುದಾದ ವಿಶಿಷ್ಟ ಧ್ವನಿಯ ವಸಿಷ್ಠ ಸಿಂಹನ ಪ್ರಯತ್ನಕ್ಕೆ ಒಳ್ಳೆಯದಾಗಲಿ’ ಎಂದು ಹಾರೈಸಿದರು. ವಸಿಷ್ಠ ಅವರನ್ನು ಧನಂಜಯ್ ಮೊದಲ ಬಾರಿಗೆ ನೋಡಿದಾಗ, ಒಳ್ಳೆಯ ಖಳನಟನಾಗುವ ಎಲ್ಲಾ ಲಕ್ಷಣಗಳು ಇದೆ ಅಂದಿದ್ದರಂತೆ. ‘ಆ ನಂತರ ಇಬ್ಬರೂ ‘ಟಗರು’ ಚಿತ್ರದಲ್ಲಿ ಒಟ್ಟಿಗೆ ನಟಿಸಿದೆವು. ನಮ್ಮಿಬ್ಬರ ಪಾತ್ರಗಳು ಈಗಲೂ ಜನಪ್ರಿಯ. ವಸಿಷ್ಠನ ಬೆಳವಣಿಗೆ ಕಂಡು ಖುಷಿಯಾಗಿದೆ. ಆತ ಇನ್ನಷ್ಟು ಬೆಳೆಯಲಿ’ ಎನ್ನುತ್ತಾರೆ ಧನಂಜಯ್.