ಸರಳ ಪೂಜೆಗೆ ತಾರೆಯರ ಸಲಹೆ

Mayuri (3)
Published on

ಕರ್ನಾಟಕದ ಪ್ರಮುಖ ಹಬ್ಬಗಳಲ್ಲೊಂದು ವರಮಹಾಲಕ್ಷ್ಮೀ ಹಬ್ಬ. ಶ್ರಾವಣ ಮಾಸದ ಎರಡನೇ ಶುಕ್ರವಾರದಂದು ಆಚರಿಸುವ ಈ ಹಬ್ಬ ಹೆಣ್ಮಕ್ಕಳಿಗೆ ಬಹಳ ವಿಶೇಷ. ಆದರೆ, ಪ್ರತೀ ವರ್ಷದಂತೆ ಈ ವರ್ಷ ಸಂಪ್ರದಾಯದಂತೆ ಹಬ್ಬ ಆಚರಿಸುವುದು ಕಷ್ಟ. ಕಾರಣ ಕರೊನಾ ಭಯ. ಈ ಭಯದ ನಡುವೆ ಹಬ್ಬ ಹೇಗೆ ಆಚರಿಸಬೇಕು ಮತ್ತು ಯಾವ್ಯಾವ ಎಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂಬ ಚರ್ಚೆ ಕಳೆದ ಕೆಲವು ದಿನಗಳಿಂದ ನಡೆಯುತ್ತಲೇ ಇದೆ. ಈ ಬಗ್ಗೆ ಚಂದನವನದ ತಾರೆಯರು ಏನು ಹೇಳುತ್ತಾರೆ ಎಂಬುದನ್ನು ಅವರ ಮಾತಲ್ಲೇ ಕೇಳೋಣ ಬನ್ನಿ ...

ಒಂದು ವರ್ಷ ತ್ಯಾಗ ಮಾಡಿದರೆ ಏನೂ ಆಗಲ್ಲ

ಮದುವೆಯ ನಂತರ ಇದು ನನ್ನ ಮೊದಲ ಹಬ್ಬ. ಪ್ರತೀ ವರ್ಷದಂತೆ ಈ ಬಾರಿ ಸಹ ಮನೆಯಲ್ಲೇ ಆಚರಿಸುತ್ತೇನೆ. ಆದರೆ, ಈ ಬಾರಿ ಕರೊನಾ ಭಯವಿರುವುದರಿಂದ ಮುಂಜಾಗ್ರತಾ ಕ್ರಮಗಳೊಂದಿಗೆ ಹಬ್ಬ ಆಚರಿಸುತ್ತಿದ್ದೇವೆ. ನಮ್ಮನೆಯಲ್ಲಿ ಮೊದಲಿನಿಂದಲೂ ವ್ರತ ಏನೂ ಇಲ್ಲ. ಕಳಸ ಇಟ್ಟು ಲಕ್ಷ್ಮೀ ಪೂಜೆ ಮಾಡುತ್ತೇವೆ. ನನ್ನ ಪ್ರಕಾರ ಈ ವರ್ಷ ದೊಡ್ಡದಾಗಿ ಪೂಜೆ ಮಾಡುವುದಕ್ಕಿಂತ ಮಾಡದಿರುವುದೇ ಒಳ್ಳೆಯದು. ಏಕೆಂದರೆ, ಸೋಂಕು ಎಲ್ಲಿಂದ, ಹೇಗೆ ಬರುತ್ತದೆ ಎಂದೇ ಗೊತ್ತಾಗುತ್ತಿಲ್ಲ. ಆದರೂ ಜನ ಶಾಪಿಂಗ್, ಓಡಾಟ ಅಂತ ಬಹಳ ಬ್ಯುಸಿಯಾಗಿದ್ದಾರೆ. ಇದನ್ನೆಲ್ಲಾ ಕಡಿಮೆ ಮಾಡಿ, ಈ ಬಾರಿ ಸರಳವಾಗಿ ಮತ್ತು ಸುರಕ್ಷಿತವಾಗಿ ಪೂಜೆ ಮಾಡಿ ಎನ್ನುವುದಷ್ಟೇ ನನ್ನ ಮನವಿ. ಒಂದು ವರ್ಷ ಹಬ್ಬ ಮಾಡದಿದ್ದರೆ ಏನೂ ಸಮಸ್ಯೆ ಇಲ್ಲ. ಮುಂದಿನ ವರ್ಷ ಇನ್ನೂ ಜೋರಾಗಿ ಮಾಡಬಹುದು. ಸುಮ್ಮನೆ ಓಡಾಟ ಜಾಸ್ತಿ ಮಾಡಿಕೊಂಡು, ನಾಳೆ ಪಶ್ಚಾತ್ತಾಪಪಡುವ ಬದಲು ಈ ವರ್ಷ ಎಷ್ಟು ಸರಳವಾಗಿ ಆಚರಿಸುವುದಕ್ಕೆ ಸಾಧ್ಯವೋ, ಅಷ್ಟು ಸರಳವಾಗಿ ಆಚರಿಸಿ.

- ಮಯೂರಿ ಕ್ಯಾತರಿಸಂಭ್ರಮಕ್ಕಿಂತ ಆರೋಗ್ಯ ಮುಖ್ಯ

ನಾವು ಚಿಕ್ಕವರಿದ್ದಾಗ ಈ ಹಬ್ಬದ ಸಂಭ್ರಮ ಜೋರಾಗಿತ್ತು. ಬೆಳೆದಂತೆಲ್ಲಾ ಕ್ರಮೇಣ ಕಡಿಮೆಯಾಯಿತು. ಈ ವರ್ಷ, ಕರೋನಾ ಬೇರೆ ಕಾಡುತ್ತಿದೆ. ಹೀಗಿರುವಾಗ ಈ ಬಾರಿ ಹಬ್ಬವನ್ನು ಚಿಕ್ಕದಾಗಿ-ಚೊಕ್ಕದಾಗಿ ಆಚರಿಸುವುದಕ್ಕೆ ಯೋಚಿಸುತ್ತಿದ್ದೇವೆ. ಒಂದು ವರ್ಷ ಸಂಪ್ರದಾಯವನ್ನು ಬಿಟ್ಟರೆ ಏನೂ ಆಗುವುದಿಲ್ಲ. ಹಬ್ಬದ ದಿನಗಳಲ್ಲಿ ಸಂಭ್ರಮ, ಸಂಪ್ರದಾಯ ಎಲ್ಲವೂ ಸಹಜ. ಆದರೆ, ಅದೆಲ್ಲಕ್ಕಿಂತ ಆರೋಗ್ಯ ಮುಖ್ಯ ಎಂಬುದು ನನ್ನ ಭಾವನೆ. ಹಾಗಾಗಿ ಮನೆ ಮಟ್ಟಿಗೆ ಹಬ್ಬವನ್ನು ಆಚರಿಸಿಕೊಳ್ಳಿ. ಸುಮ್ಮನೆ ಆಚೆ ಹೋಗುವುದು, ಇನ್ನೊಬ್ಬರ ಮನೆಗೆ ಹೋಗುವುದು ಇವೆಲ್ಲಾ ಅನಾವಶ್ಯಕ. ಅದರ ಬದಲು ಮನೆಯಲ್ಲೇ ಇದ್ದು, ಇದೆಲ್ಲಾ ಆದಷ್ಟು ಬೇಗ ಸರಿ ಹೋಗಲಿ, ಎಲ್ಲರಿಗೂ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿಕೊಳ್ಳಿ. ಮನೆಯಲ್ಲೇ ಇದ್ದು, ಆದಷ್ಟು ಹೊರಗೆ ಹೋಗುವುದನ್ನು ಅವಾಯ್ಡ್ ಮಾಡಿ ಎಂದಷ್ಟೇ ನನ್ನ ಕಳಕಳಿ.

- ಆಶಿಕಾ ರಂಗನಾಥ್ದೇವರು ಬೇಸರ ಮಾಡಿಕೊಳ್ಳುವುದಿಲ್ಲ

ರಸ್ತೆಗಳಲ್ಲಿ ಜನರನ್ನ ನೋಡುತ್ತಿದರೆ, ಕರೊನಾ ಇರೋದರ ಬಗ್ಗೆಯೇ ಮರೆತುಬಿಟ್ಟಿದ್ದಾರೆ ಎಂದನಿಸುತ್ತಿದೆ. ಕಳೆದ ವಾರ ರಸ್ತೆಗಳಲ್ಲಿ ಜನ ಇರಲಿಲ್ಲ. ಈಗ ಅದೆಷ್ಟು ನಾರ್ಮಲ್ ಆಗಿ ಬಿಟ್ಟಿದೆ ಎಂದರೆ, ಮಾಸ್ಕ್ ಇಲ್ಲ, ಅಂತರ ಇಲ್ಲ, ಎಲ್ಲವನ್ನೂ ಗಾಳಿಗೆ ತೂರಿ ಹಬ್ಬದಲ್ಲಿ ಬ್ಯುಸಿಯಾಗಿ ಬಿಟ್ಟಿದ್ದಾರೆ. ಒಂದು ವರ್ಷ ಹಬ್ಬ ಮಾಡದಿದ್ದರೆ, ಲಕ್ಷ್ಮೀ ಕೋಪ ಮಾಡಿಕೊಳ್ಳುವುದಿಲ್ಲ. ನಾವು ಹುಷಾರಾಗಿದ್ದರೆ ಮುಂದಿನ ವರ್ಷ ಇನ್ನೂ ಚೆನ್ನಾಗಿ ಮಾಡಬಹುದು. ಮುಖ್ಯವಾಗಿ ಚೇನ್ ಬ್ರೇಕ್ ಆಗಬೇಕಿತ್ತು. ಕರೊನಾ ಹರಡುವುದರಿಂದ ತಡೆಯಬೇಕಿತ್ತು. ಆದರೆ, ಹಬ್ಬ ಅಂತ ಎಲ್ಲರೂ ರಸ್ತೆಗಿಳಿದರೆ, ಬ್ರೇಕ್ ಮಾಡೋದಕ್ಕೆ ಹೇಗೆ ಸಾಧ್ಯ? ಮೊದಲು ಜನ ಅರ್ಥ ಮಾಡಿಕೊಳ್ಳಬೇಕು. ನಮಗೆ ನಾವೇ ತೊಂದರೆ ಮಾಡಿಕೊಂಡು, ಬೇರೆಯವರಿಗೂ ತೊಂದರೆ ಕೊಟ್ಟುಕೊಂಡು ಹಬ್ಬ ಮಾಡಬೇಕಾ? ಇದು ಹೆಣ್ಮಕ್ಕಳ ಹಬ್ಬ. ಅವರು ಎಷ್ಟು ಸರಳ ಮತ್ತು ಸುರಕ್ಷಿತವಾಗಿ ಮಾಡುತ್ತಾರೋ ಅದು ಬಹಳ ಮುಖ್ಯ. ಈ ಸಂದರ್ಭದಲ್ಲಿ ಶಾಪಿಂಗ್​ಗೆ ಹೋಗಿ ಅವರಿಗೆ ಸಮಸ್ಯೆಯಾದರೆ, ಇಡೀ ಕುಟುಂಬಕ್ಕೆ ಸಮಸ್ಯೆಯಾಗುವುದಿಲ್ಲವಾ? ಹಾಗಾಗಿ ಬಹಳ ಹುಷಾರಾಗಿ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಸರಳವಾಗಿ ಈ ಬಾರಿ ಪೂಜೆ ಮಾಡಿ. ನನಗೆ ಶೂಟಿಂಗ್ ಇರುವುದರಿಂದ ನನಗೆ ಹಬ್ಬ ಇಲ್ಲ. ಮನೆಯಲ್ಲಿ ಬೇಗ ಪೂಜೆ ಮುಗಿಸಿ ಶೂಟಿಂಗ್​ಗೆ ಹೋಗಬೇಕಿದೆ.

- ರಂಜಿನಿ ರಾಘವನ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net