ಕ್ರೇಜಿಸ್ಟಾರ್ ಜತೆಗೆ ಪ್ರೇಮಿಗಳ ದಿನ

Ravichandran
Published on

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಪ್ರೀತಿ-ಪ್ರೇಮ ಎಂದರೆ ಮೊದಲಿಗೆ ನೆನಪಿಗೆ ಬರುವ ಹೆಸರು ವಿ. ರವಿಚಂದ್ರನ್ ಅವರದ್ದು. ತಮ್ಮ ಹಲವು ಚಿತ್ರಗಳ ಮೂಲಕ ಪ್ರೀತಿಯ ವ್ಯಾಖ್ಯಾನವನ್ನು ತೋರಿಸುವುದರ ಜೊತೆಗೆ, ಪ್ರೀತಿಸುವವರಿಗೆ ಪ್ರೀತಿಯ ಕುರಿತು ಹಲವು ಪಾಠಗಳನ್ನು ಹೇಳಿಕೊಟ್ಟವರು ಅವರು. ಒಂದು ತಲೆಮಾರನ್ನೇ ತಮ್ಮ ಹಾಡುಗಳಿಂದ ಮನತಣಿಸಿದ ಅವರು, ‘ಪ್ರೀತಿಯ ಸ್ಕೂಲಿಗೆ ಹೆಡ್ ಮಾಸ್ಟರ್’ ಎಂದು ಪ್ರೀತಿಯಿಂದ ಕರೆಯಲ್ಪಟ್ಟವರು.

ಇಂತಹ ರವಿಚಂದ್ರನ್ ಅವರ ಜತೆಗೆ ಜೀ ಪಿಚ್ಚರ್, ಪ್ರೇಮಿಗಳ ದಿನವನ್ನು ವಿಶಿಷ್ಟವಾಗಿ ಆಚರಿಸುವುದಕ್ಕೆ ಹೊರಟಿದೆ. ಇಂದು ದಿನಪೂರ್ತಿ ರವಿಚಂದ್ರನ್ ಅವರ ವಿಶೇಷ ಚಿತ್ರಗಳನ್ನು ನೋಡುತ್ತಾ ಪ್ರೇಮಿಗಳ ದಿನವನ್ನು ಸಂಭ್ರಮಿಸುವ ಅವಕಾಶವನ್ನು ವೀಕ್ಷಕರಿಗೆ ನೀಡುತ್ತಿದೆ. ಬೆಳಿಗ್ಗೆ 7ಕ್ಕೆ ‘ಉಸಿರೇ’, 10ಕ್ಕೆ ‘ಪ್ರೀತ್ಸು ತಪ್ಪೇನಿಲ್ಲ’, ಮಧ್ಯಾಹ್ನ ಒಂದಕ್ಕೆ ‘ಓ ಪ್ರೇಮವೇ’, ಸಂಜೆ 4ಕ್ಕೆ ‘ಯಾರೇ ನೀನು ಚೆಲುವೆ’ ಮತ್ತು ರಾತ್ರಿ 8ಕ್ಕೆ ‘ಪುಟ್ನಂಜ’ ಹಾಗೂ 11ಕ್ಕೆ ‘ಹೂ’ ಚಿತ್ರಗಳನ್ನು ಪ್ರಸಾರ ಮಾಡಲಿದೆ.

ಈ ಮಧ್ಯೆ, ಸಂಜೆ ಏಳಕ್ಕೆ ‘ಪ್ರೀತಿ ಮಾತು ವಿಥ್ ರವಿಚಂದ್ರನ್’ ಎಂಬ ವಿಶೇಷ ಕಾರ್ಯಕ್ರಮ ಪ್ರಸಾರವಾಗಲಿದೆ. ಈ ಕಾರ್ಯಕ್ರಮದಲ್ಲಿ ರವಿಚಂದ್ರನ್ ಅವರು ತಮ್ಮ ಹಳೆಯ ಜನಪ್ರಿಯ ಚಿತ್ರಗಳ ನೆನಪುಗಳನ್ನು, ಆಫ್ ದಿ ರೆಕಾರ್ಡ್ ಕಥೆಗಳನ್ನು ವೀಕ್ಷಕರೊಂದಿಗೆ ಹಂಚಿಕೊಂಡಿದ್ದಾರೆ. ಪ್ರೇಮಿಗಳ ದಿನದಂದೇ ತಮ್ಮ ಮದುವೆ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುವ ರವಿಚಂದ್ರನ್, ಹಲವು ಕುತೂಹಲಕಾರಿ ವಿಷಯಗಳ ಬಗ್ಗೆ ಮಾತನಾಡಲಿದ್ದಾರೆ. ಈ ಕಾರ್ಯಕ್ರಮವನ್ನು ಚೈತ್ರಾ ವಾಸುದೇವನ್ ನಡೆಸಿಕೊಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net