

ಬದುಕಿದ್ದರೆ ಇಂದಿಗೆ 76 ತುಂಬಿ 77ನೇ ವಯಸ್ಸಿಗೆ ಕಾಲಿಡುತ್ತಿದ್ದರು ‘ನಟ ಭಯಂಕರ’ ವಜ್ರಮುನಿ. ಅವರ ಹುಟ್ಟುಹಬ್ಬಕ್ಕೆ ಸಾವಿರಾರು ಜನ ಹಾರೈಸುತ್ತಿದ್ದರು. ಅವರ ಚಿತ್ರಗಳ ಬಗ್ಗೆ, ಅಭಿನಯದ ಬಗ್ಗೆ, ವ್ಯಕ್ತಿತ್ವದ ಬಗ್ಗೆ ಮನದುಂಬಿ ಮಾತನಾಡುತ್ತಿದ್ದರು. ಆದರೆ, ವಜ್ರಮುನಿ ಇಂದು ದೈಹಿಕವಾಗಿ ನಮ್ಮೊಡನೆ ಇಲ್ಲ. ಅವರ ನೆನಪು ಮಾತ್ರ ಸದಾ ಕಾಡುತ್ತಲೇ ಇರುತ್ತದೆ.
ಚೇತನ್ ನಾಡಿಗೇರ್
ಅವರ ಅಭಿನಯ ನಿಂತು ಎರಡು ದಶಕಗಳಾಗಿವೆ. ಅವರು ನಿಧನರಾಗಿಯೇ 14 ವರ್ಷಗಳಾಗಿವೆ. ಅಷ್ಟಾದರೂ, ವಜ್ರಮುನಿ ಇಂದಿಗೂ ಯಾಕೆ ನೆನಪಾಗುತ್ತಾರೆ? ಉತ್ತರ ಅಷ್ಟೇನೂ ಕಷ್ಟವಲ್ಲ. ಅವರು ಮಾಡಿದ ಪಾತ್ರಗಳು ಮತ್ತು ಅವರ ಅಭಿನಯವೇ ಇನ್ನೂ ಅವರನ್ನು ಜನರ ಮನಸ್ಸಿನಲ್ಲಿ ಹಸಿರಾಗಿಸಿದೆ. ಇದರ ಜತೆಗೆ ಇನ್ನೂ ಒಂದು ಮಹತ್ವದ ಕಾರಣವಿದೆ. ಪ್ರಮುಖವಾಗಿ ವಜ್ರಮುನಿ ಅವರಿಗಿಂಥ ಮುನ್ನ ಮತ್ತು ಅವರ ನಂತರ, ಅಂಥ ಒಬ್ಬ ಖಳನಾಯಕನ ಪಾತ್ರ ಮಾಡುವವರು ಮತ್ತು ಅಂತಹ ಪಾತ್ರಗಳಿಂದಲೇ ಜನರ ನೆನಪಿನಲ್ಲಿ ಶಾಶ್ವತವಾಗಿ ದಾಖಲಾದವರು ಕನ್ನಡ ಚಿತ್ರರಂಗಕ್ಕೆ ಸಿಗಲೇ ಇಲ್ಲ.
60ರ ದಶಕದ ಕೊನೆಗೆ, ಕನ್ನಡ ಚಿತ್ರರಂಗದಲ್ಲಿ ಬೆರಳಣಿಕೆಯಷ್ಟು ಕಲಾವಿದರು ನೆಗೆಟಿವ್ ಪಾತ್ರಗಳನ್ನು ಮಾಡುತ್ತಿದ್ದರು. ಹಾಗಿರುವಾಗಲೇ ‘ಸಾವಿರ ಮೆಟ್ಟಿಲು’ ಚಿತ್ರದ ಮೂಲಕ ವಜ್ರಮುನಿ ಎಂಬ ಹೊಸ ನಟನನ್ನು ಪರಿಚಯಿಸಿದರು ಪುಟ್ಟಣ್ಣ ಕಣಗಾಲ್. ಹಾಗೆ ಪರಿಚಯಿಸುವುದಕ್ಕೆ ಕಾರಣವಾಗಿದ್ದು ‘ಪ್ರಚಂಡ ರಾವಣ’ ಎಂಬ ನಾಟಕ ಎಂಬುದು ಎಲ್ಲರಿಗೂ ಗೊತ್ತೇ ಇದೆ. ತಮ್ಮ ಅಣ್ಣ ಕಣಗಾಲ್ ಪ್ರಭಾಕರ ಶಾಸ್ತ್ರಿ ವಿರಚಿತ ‘ಪ್ರಚಂಡ ರಾವಣ’ ನಾಟಕದಲ್ಲಿ ವಜ್ರಮುನಿ ಅವರು ರಾವಣನ ಪಾತ್ರವನ್ನು ಅದ್ಭುತವಾಗಿ ನಿರ್ವಹಿಸುವುದನ್ನು ನೋಡಿದ ಪುಟ್ಟಣ್ಣ, ‘ಸಾವಿರ ಮೆಟ್ಟಿಲು’ ಚಿತ್ರದ ಮೂಲಕ ಪರಿಚಯಿಸಬೇಕೆಂದು ತೀರ್ವನಿಸಿದರಂತೆ.
ಆ ನಂತರ ನಡೆದಿದ್ದೆಲ್ಲಾ ಇತಿಹಾಸ. ವಜ್ರಮುನಿ ಅವರ ಅಭಿನಯ ಅದೆಷ್ಟು ಸೂಪರ್ ಹಿಟ್ ಆಯಿತು ಎಂದರೆ, ಅಲ್ಲಿಂದ ಅವರಿಗೆ ಸಾಕಷ್ಟು ಚಿತ್ರಗಳಲ್ಲಿ ವಿಲನ್ ಪಾತ್ರ ಮಾಡುವ ಅವಕಾಶಗಳು ಸಿಕ್ಕವು. ‘ಸಿಪಾಯಿ ರಾಮು’, ‘ಸಂಪತ್ತಿಗೆ ಸವಾಲ್’ ‘ಮಯೂರ’, ‘ಬಹದ್ದೂರ್ ಗಂಡು’, ‘ಗಿರಿ ಕನ್ಯೆ’, ‘ಕಳ್ಳ ಕುಳ್ಳ’, ‘ಅಂತ’, ‘ಅಪೂರ್ವ ಸಂಗಮ’ ಮುಂತಾದ ಹಲವು ಚಿತ್ರಗಳಲ್ಲಿ ಅವರ ಅಭಿನಯ ಸಾಕಷ್ಟು ಮೆಚ್ಚುಗೆ ಪಡೆಯಿತು. ಅವರ ಧ್ವನಿ, ಡೈಲಾಗ್ ಹೇಳುವ ಶೈಲಿ, ಒರಟಾದ ಮುಖ, ತೀಕ್ಷ್ಣ ಕಣ್ಣುಗಳು ಅವರಿಗೆ ಪ್ಲಸ್ ಆಗಿ, ಬೇಡಿಕೆ ಹೆಚ್ಚಿಸಿದವು. ಈ ವೈಶಿಷ್ಟ್ಯಗಳೇ, ಜನ ಅವರನ್ನು ‘ನಟ ಭೈರವ’ ಮತ್ತು ‘ನಟ ಭಯಂಕರ’ ಎಂಬ ಬಿರುದುಗಳಿಂದ ಗುರುತಿಸುವಂತೆ ಮಾಡಿದವು.
ಹೀಗೆ 25ಕ್ಕೂ ಹೆಚ್ಚು ವರ್ಷಗಳ ಕಾಲ ಕನ್ನಡ ಚಿತ್ರರಂಗದಲ್ಲಿ ತಮ್ಮ ಸ್ಥಾನವನ್ನು ಗಟ್ಟಿ ಮಾಡಿಕೊಂಡಿದ್ದ ವಜ್ರಮುನಿ, 90ರ ದಶಕದ ಕೊನೆಯ ಹೊತ್ತಿಗೆ ಅನಾರೋಗ್ಯದಿಂದ ವಿಮುಖರಾದರು. ಅವರು ಕೊನೆಯದಾಗಿ ಬಣ್ಣ ಹಚ್ಚಿದ ಚಿತ್ರ ‘ದಾಯಾದಿ’. ಆದರೆ, ಬಿಡುಗಡೆಯಾದ ಅವರ ಕೊನೆಯ ಚಿತ್ರ ಎಂದರೆ ಅದು ‘ಸಾವಿರ ಮೆಟ್ಟಿಲು’. ವಿಶೇಷವೆಂದರೆ, ಇದೇ ಚಿತ್ರಕ್ಕೆ ಅವರು ಮೊದಲು ಬಣ್ಣ ಹಚ್ಚಿದ್ದು. ಕಾರಣಾಂತರಗಳಿಂದ ಚಿತ್ರ ನಿಂತು ಹೋಗಿ, 38 ವರ್ಷಗಳ ನಂತರ ಚಿತ್ರಕಥೆಯಲ್ಲಿ ಹಲವು ಮಾರ್ಪಾಡುಗಳೊಂದಿಗೆ ಬಿಡುಗಡೆಯಾಯಿತು. ಚಿತ್ರದ ಫ್ಲಾಶ್ಬ್ಯಾಕ್ ಭಾಗದಲ್ಲಿ ವಜ್ರಮುನಿ ಅವರನ್ನು ನೋಡಬಹುದು. ಬಹುಶಃ ಒಬ್ಬ ನಟ ಬಣ್ಣ ಹಚ್ಚಿದ ಮೊದಲ ಚಿತ್ರವೇ, ಅವರ ಚಿತ್ರವಾಗಿ ಜೀವನದ ಕೊನೆಯ ಚಿತ್ರ ಬಿಡುಗಡೆ ಆದ ಉದಾಹರಣೆ ಇನ್ನೆಲ್ಲೂ ಸಿಗಲ್ಲ.