

ಬೆಂಗಳೂರು: ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಅವರ ಮದುವೆ ಇದೇ ತಿಂಗಳ 26ಕ್ಕೆ ಫಿಕ್ಸ್ ಆಗಿರುವುದು ಮತ್ತು ಮೈಸೂರು-ಊಟಿ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ನಡೆಯುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ.
ಮದುವೆ 26ರಂದು ನಡೆದರೆ, 28ಕ್ಕೆ ಬೆಂಗಳೂರಿನ ಗೋಲ್ಡನ್ ಪಾಮ್ಸ್ ರೆಸಾರ್ಟ್ನಲ್ಲಿ ಆರತಕ್ಷತೆ ನಡೆಯಲಿದೆ. ಮದುವೆ ಮತ್ತು ಆರತಕ್ಷತೆಗೆ ಬಂದು ಹರಸಿ, ಹಾರೈಸುವಂತೆ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ, ಕನ್ನಡ ಚಿತ್ರರಂಗದ ಹಲವು ಸೆಲೆಬ್ರಿಟಿಗಳ ಮನೆಗೆ ಖುದ್ದು ಭೇಟಿ ನೀಡಿ ಆಹ್ವಾನ ನೀಡಿ ಬಂದಿದ್ದಾರೆ.
ಸ್ಯಾಂಡಲ್ವುಡ್ ಸೆಲೆಬ್ರಿಟಿಗಳಾದ ಅನಂತ್ ನಾಗ್, ಸುಮಲತಾ ಅಂಬರೀಷ್, ಸುದೀಪ್, ಜಗ್ಗೇಶ್, ಅಮೂಲ್ಯ, ಗುರುಕಿರಣ್, ಮಾಲಾಶ್ರೀ, ಧ್ರುವ ಸರ್ಜಾ, ರಿಷಭ್ ಶೆಟ್ಟಿ, ಪ್ರೇಮ್, ಸೃಜನ್ ಲೋಕೇಶ್ ಮುಂತಾದವರನ್ನು ವಸಿಷ್ಠ ಮತ್ತು ಹರಿಪ್ರಿಯಾ ಭೇಟಿ ಮಾಡಿ ಆಹ್ವಾನ ನೀಡಿದ್ದಾರೆ.