

ಬೆಂಗಳೂರು: ‘ಅಗ್ನಿ ಸಾಕ್ಷಿ’ ಧಾರಾವಾಹಿ ಮೂಲಕ ಮನೆಮಾತಾಗಿ, ಬಳಿಕ ನಿರೂಪಕಿಯಾಗಿ, ಬೆಳ್ಳಿತೆರೆ ಮೇಲೆ ‘ಗಿರ್ಗಿಟ್ಲೆ’ ಆಡಿಸಿದ್ದ ನಟಿ ವೈಷ್ಣವಿ ಈಗ ಮತ್ತೆ ಸಿನಿಮಾದತ್ತ ಮುಖ ಮಾಡಿದ್ದಾರೆ. ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದ ವೈಷ್ಣವಿ, ಕಳೆದ ವರ್ಷ ‘ಗಿರ್ಗಿಟ್ಲೆ’ ಸಿನಿಮಾ ಮೂಲಕ ಚಂದನವನ ಪ್ರವೇಶಿಸಿದ್ದರು. ಈಗ ಹೊಸ ಥರದ, ಹೊಸ ಶೈಲಿಯ ಸಿನಿಮಾದ ಮೂಲಕ ಮತ್ತೆ ಆಗಮಿಸುತ್ತಿದ್ದಾರೆ. ಅದೂ ಮಹಿಳಾ ಪ್ರಧಾನ ಸಿನಿಮಾದ ಮೂಲಕ ಎಂಬುದಿಲ್ಲಿ ವಿಶೇಷ.
ಶೀರ್ಷಿಕೆ ಅಂತಿಮವಾಗದ ಈ ಚಿತ್ರಕ್ಕೆ ವಿನಯ್ ಕುಮಾರ್ ಎಂ.ಜಿ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಈ ಹಿಂದೆ ‘ಫಸ್ಟ್ ರ್ಯಾಂಕ್ ರಾಜು’ ಚಿತ್ರದಲ್ಲಿ ಕೆಲಸ ಮಾಡಿದ್ದ ಅವರಿಗೆ, ಬಿ. ಸುರೇಶ್ ಅವರ ಜತೆ ಕೆಲಸ ಮಾಡಿದ ಅನುಭವ ವಿನಯ್ಗಿದೆ. ಈಗ ಅದೆಲ್ಲವನ್ನು ಬದಿಗಿಟ್ಟು ಚೊಚ್ಚಲ ಸಿನಿಮಾಕ್ಕೆ ಕೈ ಹಾಕಿದ್ದಾರೆ. ಹಾಗಾದರೆ ಸಿನಿಮಾ ಎಂಥದ್ದು? ಅದನ್ನು ಸ್ವತಃ ಚಿತ್ರದ ನಾಯಕಿ ವೈಷ್ಣವಿ ವಿವರಿಸುತ್ತಾರೆ. ‘ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯ ಸಿನಿಮಾ. ಹಾಗಂತ ನೈಜ ಘಟನೆ ಆಧರಿತ ಚಿತ್ರವಲ್ಲ. ಕಾಲ್ಪನಿಕ ಕಥೆಗೆ ಒಂದಷ್ಟು ನೈಜತೆಯ ಲೇಪನ ಮಾಡಲಾಗಿದೆ. ಒಂದು ಹುಡುಗಿ ಜೀವನದಲ್ಲಿ ಒಂದು ಘಟನೆ ನಡೆಯುತ್ತದೆ. ಆ ಒಂದು ಘಟನೆನಿಂದ ಅವಳ ಜೀವನದಲ್ಲಿ ಏನೆಲ್ಲ ಏರಿಳಿತಗಳು ಘಟಿಸುತ್ತವೆ? ಯಾರನ್ನೆಲ್ಲ ಹುಡುಕೊಂಡು ಹೋಗುತ್ತಾಳೆ? ಅವಳ ಉದ್ದೇಶವಾದರೂ ಏನು? ಹೀಗೆ ಹಲವು ಕುತೂಹಲಗಳ ಜತೆಗೆ ಈ ಸಿನಿಮಾ ನೋಡಿಸಿಕೊಂಡು ಹೋಗಲಿದೆ’ ಎಂದು ಗುಟ್ಟು ಬಿಟ್ಟು ಕೊಡದೆ, ಸಿನಿಮಾ ಸಾಗುವ ಪರಿಯನ್ನಷ್ಟೇ ವಿವರಿಸುತ್ತಾರೆ ವೈಷ್ಣವಿ. ‘ಪಾತ್ರಗಳನ್ನೇ ಪ್ರಧಾನವನ್ನಾಗಿಸಿಕೊಂಡು ಸಿದ್ಧವಾಗುತ್ತಿರುವ ಚಿತ್ರವಿದು’ ಎನ್ನುವ ಅವರು, ‘ಮುಖ್ಯ ಪಾತ್ರದಲ್ಲಿ ನಾನೇ ಕಾಣಿಸಿಕೊಳ್ಳುತ್ತೇನೆ. ಆದರೆ, ನನ್ನ ಪಾತ್ರಕ್ಕಿರುವ ಗಟ್ಟಿತನ ಇನ್ನುಳಿದ ಪಾತ್ರಗಳಲ್ಲೂ ಇದೆ. ಹಾಗಾಗಿ ಇದೊಂದು ಕ್ಯಾರೆಕ್ಟರ್ ಓರಿಯೆಂಟೆಡ್ ಸಿನಿಮಾ ಎನ್ನುವುದು ಸೂಕ್ತ’ ಎಂಬ ಉತ್ತರ ವೈಷ್ಣವಿ ಅವರದ್ದು. ಸದ್ಯ 10 ದಿನಗಳ ಶೂಟಿಂಗ್ ಮುಗಿಸಿಕೊಂಡಿರುವ ಚಿತ್ರತಂಡ, ಒಟ್ಟು 45 ದಿನಗಳಲ್ಲಿ ಚಿತ್ರೀಕರಣ ಮಾಡಿಕೊಳ್ಳಲು ಯೋಜನೆ ರೂಪಿಸಿದೆ. ರವಿ ಮತ್ತು ಹರ್ಷ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಹಲವು ಸಿನಿಮಾಗಳಲ್ಲಿ ಕ್ಯಾಮರಾ ಕೈ ಚಳಕ ತೋರಿಸಿದ್ದ ಹರ್ಷ ಈ ಸಿನಿಮಾದ ಮೂಲಕ ಪೂರ್ಣ ಪ್ರಮಾಣದ ಕ್ಯಾಮರಾಮನ್ ಆಗಿದ್ದಾರೆ.
ಒಳ್ಳೇ ಕಥೆಯ ಹುಡುಕಾಟದಲ್ಲಿದ್ದಾಗ ಸಿಕ್ಕ ಕಥೆ ಇದು. ಶ್ರೀನಿವಾಸ್ ಕೇವಲ ಐದೇ ನಿಮಿಷದಲ್ಲಿ ಸಿನಿಮಾ ಎಳೆ ಹೇಳಿದರು. ತಕ್ಷಣ ಒಪ್ಪಿಕೊಂಡು ಶೂಟಿಂಗ್ನಲ್ಲಿ ಭಾಗವಹಿಸಿದ್ದೇನೆ. ನನ್ನ ಪಾತ್ರದಲ್ಲೂ ಹಲವು ಏರಿಳಿತಗಳಿವೆ. | ವೈಷ್ಣವಿ ನಟಿ https://www.vijayavani.net/bollywood-celebs-inspiring-messages/