ಐದು ವರ್ಷಗಳ ನಂತರ ವಾಪಸ್ಸಾದ ವಡಿವೇಲು; 'ನಾಯಿ ಶೇಖರ್​ ರಿಟರ್ನ್ಸ್​' ಚಿತ್ರದಲ್ಲಿ ನಟನೆ

Vadivelu
Published on

ಚೆನ್ನೈ: ಐದು ವರ್ಷಗಳೇ ಆಗಿತ್ತು ವಡಿವೇಲು ಅಭಿನಯದ ಚಿತ್ರವೊಂದು ಬಿಡುಗಡೆಯಾಗಿ. 2017ರಲ್ಲಿ ಬಿಡುಗಡೆಯಾದ 'ಮರ್ಸಲ್​' ಚಿತ್ರವೇ ಕೊನೆ. ಆ ನಂತರ ವಡಿವೇಲು ಅಭಿನಯದ ಯಾವೊಂದು ಚಿತ್ರವೂ ಬಿಡುಗಡೆಯಾಗಿರಲಿಲ್ಲ. ಈಗ ಅವರು 'ನಾಯಿ ಶೇಖರ್​ ರಿಟರ್ನ್ಸ್​' ಎಂಬ ಚಿತ್ರದಲ್ಲಿ ನಟಿಸಿದ್ದು, ಡಿ.9ರಂದು ಬಿಡುಗಡೆಯಾಗುತ್ತಿದೆ.

ಇಷ್ಟಕ್ಕೂ ಯಾಕೆ ವಡಿವೇಲು ಅಭಿನಯದ ಯಾವೊಂದು ಚಿತ್ರ ಸಹ ಕಳೆದ ಐದು ವರ್ಷಗಳಿಂದ ಬಿಡುಗಡೆಯಾಗಿರಲಿಲ್ಲ ಎಂಬ ಪ್ರಶ್ನೆ ಬರಬಹುದು. ಅದಕ್ಕೆ ಕಾರಣವೂ ಇದೆ. ಅದೇನೆಂದರೆ, ತಮಿಳು ಚಲನಚಿತ್ರ ನಿರ್ಮಾಪಕರ ಸಂಘವು ಅವರನ್ನು ನಟಿಸದಂತೆ ಬ್ಯಾನ್​ ಮಾಡಿತ್ತು. ವಡಿವೇಲು, 'ಇಮ್ಸೈ ಅರಸನ್​ 23' ಚಿತ್ರದ ಮುಂದುವರೆದ ಭಾಗದಲ್ಲಿ ನಟಿಸಬೇಕಿತ್ತು. ಆದರೆ, ಅವರು ಚಿತ್ರದಲ್ಲಿ ನಟಿಸದೇ ಆಟ ಆಡಿಸಿದ್ದರಿಂದ, ಅವರ ವಿರುದ್ಧ ನಿರ್ಮಾಪಕರು ಸಂಘಕ್ಕೆ ದೂರು ನೀಡಿದ್ದರು. ಈ ಹಿನ್ನೆಲಯಲ್ಲಿ ಅವರನ್ನು ಬ್ಯಾನ್​ ಮಾಡಲಾಗಿತ್ತು.

ಈಗ ವಡಿವೇಲು, 'ನಾಯಿ ಶೇಖರ್​ ರಿಟರ್ನ್ಸ್​' ಎಂಬ ಚಿತ್ರದಲ್ಲಿ ನಟಿಸಿದ್ದಾರೆ. ಲೈಖಾ ಪ್ರೊಡಕ್ಷನ್ಸ್​ನ ಸುಭಾಸ್ಕರನ್​ ನಿರ್ಮಿಸಿರುವ ಈ ಚಿತ್ರವನ್ನು ಸೂರಜ್​ ನಿರ್ದೇಶನ ಮಾಡಿದ್ದಾರೆ. ನಾಯಿ ಶೇಖರ್​ ಎನ್ನುವುದು ವಡಿವೇಲು ಅವರೇ ಈ ಹಿಂದೆ ನಿರ್ವಹಿಸಿದ್ದ ಪಾತ್ರ. 'ತಲೈನಗರಂ' ಎಂಬ ಚಿತ್ರದಲ್ಲಿ ವಡಿವೇಲು, ನಾಯಿ ಶೇಖರ್​ ಆಗಿ ನಟಿಸಿದ್ದರು. ಈಗ ಆ ಪಾತ್ರದ ಮುಂದುವರೆದ ಭಾಗವನ್ನು ನಾವು 'ನಾಯಿ ಶೇಖರ್​ ರಿಟರ್ನ್ಸ್​' ಚಿತ್ರದಲ್ಲಿ ನೋಡಬಹುದು.

'ನಾಯಿ ಶೇಖರ್​ ರಿಟರ್ನ್ಸ್​' ಚಿತ್ರದಲ್ಲಿ ವಡಿವೇಲು, ಭಾರತದ ಮೊದಲ ನಾಯಿಕಳ್ಳನಾಗಿ ಅಭಿನಯಿಸಿದ್ದಾರೆ. ಅವರೊಂದಿಗೆ ಶಿವಾಂಗಿ, ರಾವ್ ರಮೇಶ್​, ಆನಂದರಾಜ್​, ಮನೋಬಾಲ ಮುಂತಾದವರು ನಟಿಸಿದ್ದಾರೆ. ಈ ಚಿತ್ರಕ್ಕೆ ಸಂತೋಷ್​ ನಾರಾಯಣ್​ ಸಂಗೀತ ಸಂಯೋಜಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net