

ಬೆಂಗಳೂರು: 12ನೇ ಶತಮಾನದ ಶಿವಶರಣರ ಕುರಿತ ಈಗಾಗಲೇ ಬಸವಣ್ಣ, ಅಕ್ಕಮಹಾದೇವಿ, ಚೆನ್ನಬಸವಣ್ಣ, ಹರಳಯ್ಯ ಸೇರಿ ಹಲವಾರು ಸಿನಿಮಾಗಳು ಬಂದಿವೆ. ಇದೀಗ ಈ ಪಟ್ಟಿಗೆ ಹೊಸ ಸೇರ್ಪಡೆ ‘ಮೋಳಿಗೆ ಮಾರಯ್ಯ’. ಕಾಶ್ಮೀರದ ಮಾಂಡವ್ಯಪುರ ರಾಜ್ಯದ ಅರಸರಾಗಿದ್ದ ಮೋಳಿಗೆ ಮಾರಯ್ಯ, ಬಸವಣ್ಣ ನೇತೃತ್ವದಲ್ಲಿ ನಡೆಯುತ್ತಿದ್ದ ವಚನ ಕ್ರಾಂತಿಗೆ ಮಾರುಹೋಗಿ, ಅರಸೊತ್ತಿಗೆಯನ್ನು ತ್ಯಜಿಸಿ, ಶಿವಶರಣರಾದವರು. ಬಳಿಕ ಕಲ್ಯಾಣಕ್ಕೆ ಬಂದು ಕಟ್ಟಿಗೆ ಮಾರುವ ಕಾಯಕ ಮಾಡುತ್ತ ವಚನಕಾರರಾಗಿ ಗುರುತಿಸಿಕೊಂಡರು. ಇಂತಹ ಶಿವಶರಣರ ಬದುಕನ್ನು ತೆರೆ ಮೇಲೆ ತರಲಾಗುತ್ತಿದೆ. ‘ಶ್ರೀ ಜಗನ್ನಾಥ ದಾಸರು’, ‘ದಾಸವರೇಣ್ಯ ಶ್ರೀ ವಿಜಯದಾಸರು’, ‘ಶ್ರೀ ಪ್ರಸನ್ನ ವೆಂಕಟದಾಸರು’ ಚಿತ್ರಗಳನ್ನು ನಿರ್ದೇಶಿಸಿದ್ದ ಮಧುಸೂದನ್ ಹವಾಲ್ದಾರ್ ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳುವ ಜತೆಗೆ ಸಂಗೀತ ನಿರ್ದೇಶನ ಹಾಗೂ ನಿರ್ಮಾಣದ ಹೊಣೆ ಹೊತ್ತಿದ್ದಾರೆ. ಇತ್ತೀಚೆಗೆ ಬೇಲಿಮಠದ ಶ್ರೀ ಶಿವಾನುಭವ ಚರಮೂರ್ತಿ ಶಿವರುದ್ರ ಮಹಾಸ್ವಾಮಿಗಳು ಚಿತ್ರದ ಭಕ್ತಿಪ್ರದಾನ ಗೀತೆಯನ್ನು ಲೋಕಾರ್ಪಣೆ ಮಾಡಿ, ಶುಭ ಹಾರೈಸಿದರು.
ಮಧುಸೂದನ್, ‘ಕೊಪ್ಪಳದ ಶ್ರೀಗವಿ ಸಿದ್ದೇಶ್ವರ ಸ್ವಾಮೀಜಿಯನ್ನು ಭೇಟಿಯಾಗಿದ್ದೆ. ಆಗ ಅವರು ಶಿವಶರಣರ ಕುರಿತು ಸಿನಿಮಾ ಮಾಡಿ ಎಂದಿದ್ದರು. ಅದಕ್ಕೆ ನಾನು ಯಾರ ಕುರಿತು ಸಿನಿಮಾ ಮಾಡಿದರೆ ಚೆನ್ನಾಗಿರುತ್ತದೆ ಎಂಬ ಪ್ರಶ್ನೆಗೆ ಗವಿಶ್ರೀಗಳು ಸಾಣೇಹಳ್ಳಿಯ ಶ್ರೀಗಳ ಜತೆ ಚರ್ಚಿಸುವಂತೆ ತಿಳಿಸಿದ್ದರು. ಸಾಣೇಹಳ್ಳಿಯ ಶ್ರೀಗಳನ್ನು ಕೇಳಿದಾಗ ಅವರು, ‘ಮೋಳಿಗೆ ಮಾರಯ್ಯ’ ಕುರಿತು ಮಾಡಬಹುದು ಎಂದು, ಅವರೇ ರಚಿಸಿದ್ದ ನಾಟಕ ಓದಲು ನೀಡಿದರು. ಕಾಶ್ಮೀರದ ರಾಜನೊಬ್ಬ ಬಸವ ತತ್ವ ಅನುಯಾಯಿಯಾಗಿ ಸಾಮಾನ್ಯ ಜೀವನ ನಡೆಸಿ ಮಹಾನ್ ಶರಣನಾಗುವುದು ನನಗೆ ಇಷ್ಟವಾಯಿತು. ಹೀಗಾಗಿ ಅದೇ ಕಥೆಯನ್ನು ಸಿನಿಮಾ ಮಾಡಲು ಮುಂದಾದೆ’ ಎಂದರು. ಮೋಳಿಗೆ ಮಾರಯ್ಯ ಪಾತ್ರದಲ್ಲಿ ಗಂಗಾವತಿಯ ವಿಷ್ಣುತೀರ್ಥ ಜೋಶಿ ಕಾಣಿಸಿಕೊಳ್ಳಲಿದ್ದು, ಉಳಿದ ಪಾತ್ರಗಳ ಆಯ್ಕೆ ನಡೆಯುತ್ತಿದೆ.