ಧೂತಯ್ಯನಾದ ಯೂಸ್​ಲೆಸ್​ ಫೆಲೋ ಮನು; ಹೊಸ ಚಿತ್ರದ ಲುಕ್​ ರಿಲೀಸ್​

zxc
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು:

"ಮೋಜೋ', "ನಾನು ನನ್​ ಜಾನು' ಚಿತ್ರಗಳಲ್ಲಿ ನಾಯಕನಾಗಿ ನಟಿಸಿದ್ದ ಮನು, ಬಳಿಕ "ಯೂಸ್​ಲೆಸ್​ ಫೆಲೋ' ಮೂಲಕ ಡೈರೆಕ್ಟರ್​ ಕ್ಯಾಪ್​ ಕೂಡ ಧರಿಸಿದ್ದರು. ಇದೀಗ ಒಂದೂವರೆ ವರ್ಷಗಳ ನಂತರ ಮತ್ತೊಂದು ಹೊಸ ಸಿನಿಮಾದೊಂದಿಗೆ ನಾಯಕ, ನಿರ್ದೇಶಕನಾಗಿ ವಾಪಸ್ಸಾಗಿದ್ದಾರೆ. ಚಿತ್ರಕ್ಕೆ "ಧೂತಯ್ಯ' ಎಂದು ಹೆಸರಿಡಲಾಗಿದ್ದು, ಯುಗಾದಿ ಸಂಭ್ರಮದಲ್ಲಿ ಟೈಟಲ್​ ರಿವೀಲ್​ ಮಾಡಿದ್ದಾರೆ.

ಚಿತ್ರದ ಬಗ್ಗೆ ಮನು, "ಮೈಸೂರು, ಕೆಆರ್​ ಪೇಟೆ, ಹಾಸನ, ಚಿತ್ರದುರ್ಗದ ಕಡೆ ಸೋಮನ ಕುಣಿತ, ಧೂತರಾಯ, ಚಲುವರಾಯ ಎಂಬ ಆಚರಣೆಗಳಿವೆ. ಅಲ್ಲಿ ಮುಖವಾಡ ಹೊತ್ತು ಕುಣಿಯುತ್ತಾರೆ. ಅದೊಂದು ಜಾನಪದ ಕಲೆ. ನಾನು ಹಾಸನದವನಾದ ಕಾರಣ, ಬಾಲ್ಯದಿಂದಲೂ ಧೂತಯ್ಯರನ್ನು ನೋಡಿಕೊಂಡು ಬೆಳೆದವನು. ಪ್ರತಿಬಾರಿ ಅವರನ್ನು ನೋಡಿದಾಗಲೂ ಮೈರೋಮಾಂಚನಗೊಳ್ಳುತ್ತಿದ್ದೆ. ಈ ಆಚರಣೆಯ ಹಿನ್ನೆಲೆಯಲ್ಲಿ ಯಾಕೆ ಸಿನಿಮಾ ಮಾಡಬಾರದು ಅಂತನ್ನಿಸಿ, ಕೆಲ ತಿಂಗಳಿನಿಂದ ಓಡಾಡಿ, ಸಂಶೋಧನೆ ಮಾಡಿ, ಮಾಹಿತಿ ಸಂಗ್ರಹಿಸಿ, ಕಥೆ ರೆಡಿ ಮಾಡಿಕೊಳ್ಳುತ್ತಿದ್ದೇನೆ' ಎಂದು ಮಾಹಿತಿ ನೀಡುತ್ತಾರೆ.

ಚಿತ್ರಕ್ಕೆ ದೇವರೇ ಆಸರೆ...

"ಧೂತಯ್ಯ' ಸದ್ಯ ಪ್ರಿ-ಪ್ರೊಡಕ್ಷನ್​ ಹಂತದಲ್ಲಿದ್ದು, ದೇವರನ್ನು ಹೊರುವವರ ಪಾತ್ರದಲ್ಲಿ ಮನು ನಟಿಸಲಿದ್ದಾರೆ. "ಇದು 1960, 70ರ ದಶಕದ ಕಥೆ. ದೇವರು ಹೊರುವ ಹಲವರನ್ನು ಭೇಟಿಯಾಗಿ ಅವರು ಪಾಲಿಸುವ ನೀತಿ, ನಿಯಮಗಳು, ಮುಖವಾಡ ಹೊತ್ತಾಗ ಅವರಲ್ಲಾಗುವ ಬದಲಾವಣೆಗಳ ಬಗ್ಗೆ ಮಾಹಿತಿ ಪಡೆದಿದ್ದೇನೆ. ಅದನ್ನು ನಾನು ಚಿತ್ರದಲ್ಲಿ ಹಾಗೂ ಪಾತ್ರದಲ್ಲಿ ಹೇಗೆ ಅಳವಡಿಸಿಕೊಳ್ಳಬೇಕು ಅಂತ ಪ್ಲ್ಯಾನ್​ ಮಾಡಿಕೊಂಡಿದ್ದೇನೆ. ದೇವರು ಹೊರುವ ಒಂದು ವಾರ ಮುಂಚೆಯಿಂದಲೇ ಅವರು ಮಾಂಸಾಹಾರ ತ್ಯಜಿಸಿ, ಬರಿಗಾಲಿನಲ್ಲಿ ನಡೆಯುತ್ತಾರೆ. ಹೂವಿನ ಅಲಂಕಾರವಾದ ಬಳಿಕ ಮುಖವಾಡ ಬರೋಬ್ಬರಿ 50 ಕೆಜಿ ತೂಕವಿರುತ್ತದೆ. ಧಾರ್ಮಿಕ ಆಚರಣೆಯ ಕುರಿತ ಚಿತ್ರವಾದ ಕಾರಣ ಸಾಕಷ್ಟು ಸಿದ್ಧತೆ ಇರಬೇಕು. ಕರ್ನಾಟಕದಲ್ಲಿ ಮಾತ್ರವಲ್ಲದೇ ಕೇರಳ, ತಮಿಳುನಾಡಿನಲ್ಲೂ ಇದೇ ರೀತಿಯ ಆಚರಣೆಗಳಿದ್ದು, ಅಲ್ಲಿನ ಜನರಿಗೂ ಕಥೆ ಕನೆಕ್ಟ್​ ಆಗುತ್ತದೆ. ಹೀಗಾಗಿ ಕನ್ನಡ, ತಮಿಳು, ಮಲಯಾಳಂ ಸೇರಿ ಐದು ಭಾಷೆಗಳಲ್ಲಿ ಸಿನಿಮಾ ಮಾಡುವ ಆಸೆಯಿದೆ. ನಾನೇನು ದೊಡ್ಡ ಸ್ಟಾರ್​ ಅಲ್ಲ. ಆದರೆ, ದೊಡ್ಡ ಮಟ್ಟದಲ್ಲಿ ಈ ಚಿತ್ರ ಮಾಡುವ ಪ್ರಯತ್ನವಂತೂ ಇದೆ. ಕೆಲವೇ ದಿನಗಳಲ್ಲಿ ಮೋಷನ್​ ಪೋಸ್ಟರ್​ ರಿಲೀಸ್​ ಮಾಡಲಿದ್ದೇವೆ' ಎಂದು ಹೇಳಿಕೊಳ್ಳುತ್ತಾರೆ ಮನು.

ಸದ್ಯ ಅವರು "ಮೋನರಮ' ಎಂಬ ಚಿತ್ರದಲ್ಲಿ ನಟಿಸುತ್ತಿದ್ದು, ಅದರ ಶೂಟಿಂಗ್​ ಪೂರ್ಣಗೊಂಡ ಬಳಿಕ "ಧೂತಯ್ಯ' ಚಿತ್ರೀಕರಣ ಪ್ರಾರಂಭಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net