ಮತ್ತೆ ಯಡವಟ್ಟು ಮಾಡಿಕೊಂಡ ‘ಐರಾವತ’ ಬೆಡಗಿ ... ಕಾಪಿ-ಪೇಸ್ಟ್ ಮಾಡಿ ನೆಟ್ಟಿಗರಿಂದ ಟ್ರೋಲ್ ಆದ ಊರ್ವಶಿ

Urvashi Rautela Final
Published on

ದರ್ಶನ್ ಅಭಿನಯದ ‘ಮಿಸ್ಟರ್ ಐರಾವತ’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ ಊರ್ವಶಿ ರೌತೇಲ ನೆನಪಿರಬೇಕಲ್ಲ? ಒಂದೇ ಒಂದು ಕನ್ನಡ ಚಿತ್ರದಲ್ಲಿ ನಟಿಸಿ ಮಾಯವಾದ ಈ ನಟಿ, ಯಾರೋ ಮಾಡಿದ ಟ್ವೀಟ್ ಕಾಪಿ-ಪೇಸ್ಟ್ ಮಾಡಿ ಸಿಕ್ಕಿಬಿದ್ದಿದ್ದಾರೆ. ಇದೇ ವಿಷಯವಾಗಿ, ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ.

ಇಷ್ಟಕ್ಕೂ ಆಗಿದ್ದೇನೆಂದರೆ, ನ್ಯೂಯಾರ್ಕ್ ಮೂಲದ ಪತ್ರಕರ್ತ ಜಾನ್ ಬ್ರಾಮರ್, ಆಸ್ಕರ್ ಪ್ರಶಸ್ತಿ ವಿಜೇತ ‘ಪ್ಯಾರಸೈಟ್’ ಚಿತ್ರದ ಕುರಿತಾಗಿ ಬರೆದಿದ್ದರು. ಮಾರ್ಚ್ ಮೂರರಂದು ಅವರು ಮಾಡಿದ್ದ ಟ್ವೀಟ್‌ನ್ನು ಯಥಾವತ್ತಾಗಿ ಮಾರ್ಚ್ 31ರಂದು ಟ್ವೀಟ್ ಮಾಡಿ ಊರ್ವಶಿ ಸಿಕ್ಕಿಬಿದ್ದಿದ್ದಾರೆ. ಯಾರದೋ ಟ್ವೀಟ್‌ನ ಊರ್ವಶಿ ಕಾಪಿ-ಪೇಸ್ಟ್ ಮಾಡಿದ್ದನ್ನು ಗಮನಿಸಿರುವ ನೆಟ್ಟಿಗರು, ಊರ್ವಶಿಯ ನಡೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಕೆಲವರು ಕದಿಯುವುದು ತಪ್ಪು ಎಂದರೆ, ಇನ್ನೂ ಕೆಲವರು ಕೊನೆಯ ಪಕ್ಷ ಮೂಲ ಟ್ವೀಟ್‌ನಲ್ಲಿದ್ದ ತಪ್ಪುಗಳನ್ನು ಸರಿಪಡಿಸಿಕೊಳ್ಳಬೇಕಿತ್ತು ಎಂದು ಸಲಹೆ ನೀಡಿದ್ದಾರೆ.

ಊರ್ವಶಿ ಹೀಗೆ ಮಾಡುತ್ತಿರುವುದು ಇದು ಮೊದಲೇನಲ್ಲ. ಕೆಲವು ತಿಂಗಳ ಹಿಂದೆ ಹಿರಿಯ ನಟಿ ಶಬಾನಾ ಆಜ್ಮಿ ಅವರು ಅಪಘಾತಕ್ಕೀಡಾಗಿದ್ದರು. ಆ ಸಂದರ್ಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು, ‘ಶಬಾನಾ ಬೇಗ ಗುಣಮುಖರಾಗಲಿ’ ಎಂದು ಹಾರೈಸಿದ್ದರು. ಅದಾಗಿ ಮರುದಿನವೇ, ಅದೇ ಟ್ವೀಟ್ ಕಾಪಿ-ಪೇಸ್ಟ್ ಮಾಡಿ ಊರ್ವಶಿ ಸಿಕ್ಕಿಬಿದ್ದಿದ್ದರು.

ಹೀಗೆ ಕಾಪಿ-ಪೇಸ್ಟ್ ಮಾಡಿ ಪದೇಪದೇ ಟ್ರೋಲ್ ಆಗುತ್ತಿರುವ ಊರ್ವಶಿ, ಇನ್ನಾದರೂ ತಮ್ಮ ತಪ್ಪು ತಿದ್ದುಕೊಳ್ಳುತ್ತಾರಾ ಎಂದು ನೋಡಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net