

ಕೆಲವು ತಿಂಗಳುಗಳ ಹಿಂದೆಯೇ ಉಪೇಂದ್ರ ತಾವೊಂದು ಸ್ಕ್ರಿಪ್ಟ್ ಬರೆಯುತ್ತಿರುವುದಾಗಿ ಹೇಳಿದ್ದರು. ಸಾಧ್ಯವಾದರೆ, ಈ ವರ್ಷ ಚಿತ್ರ ನಿರ್ದೇಶನ ಮಾಡಬಹುದು ಎಂದು ಸುಳಿವು ಸಹ ಕೊಟ್ಟಿದ್ದರು. ಇನ್ನೇನು ಅವರ ಹುಟ್ಟುಹಬ್ಬಕ್ಕೆ ಎರಡು ತಿಂಗಳಷ್ಟೇ ಬಾಕಿ ಇರುವುದರಿಂದ ಅಂದು ತಾವೇ ನಿರ್ದೇಶಿಸಲಿರುವ ಚಿತ್ರದ ಘೋಷಣೆಯನ್ನು ಉಪೇಂದ್ರ ಮಾಡುತ್ತಾರಾ ಎಂಬ ಕುತೂಹಲ ಮತ್ತು ನಿರೀಕ್ಷೆ ಅವರ ಅಭಿಮಾನಿಗಳಲ್ಲಿದೆ.
ಆದರೆ, ಈ ಹುಟ್ಟುಹಬ್ಬಕ್ಕೂ ಉಪೇಂದ್ರ ನಿರ್ದೇಶನದ ಚಿತ್ರ ಸೆಟ್ಟೇರುವುದು ಸಂಶಯವೇ ಎನ್ನಲಾಗುತ್ತಿದೆ. ಬುಧವಾರ ಮಧ್ಯಾಹ್ನ ‘ಲಗಾಮ್ ಚಿತ್ರದ ಶೂಟಿಂಗ್ ಬ್ರೇಕ್ ಸಮಯದಲ್ಲಿ ಮಾತನಾಡಿದ ಅವರು, ‘ಇಷ್ಟರಲ್ಲಿ ಎಲ್ಲವೂ ಮುಗಿದು ಫ್ರೀ ಆಗಬೇಕಿತ್ತು. ಆದರೆ, ಲಾಕ್ಡೌನ್ನಿಂದ ಎಲ್ಲವೂ ತಲೆಕೆಳಗಾಗಿದೆ. ಈಗ ‘ಲಗಾಮ್ ಚಿತ್ರೀಕರಣ ನಡೆಯುತ್ತಿದೆ. ಇದರ ನಂತರ ‘ಕಬ್ಜ’, ಆ ನಂತರ ಶಶಾಂಕ್ ಸಿನಿಮಾ ಶುರು ಮಾಡಬೇಕಿದೆ. ಇವುಗಳ ಜತೆ ಇನ್ನೊಂದಿಷ್ಟು ಚಿತ್ರಗಳಿವೆ. ಸದ್ಯಕ್ಕೆ ಶಶಾಂಕ್ ಹೇಳಿದ ಕಥೆ ಓಕೆ ಆಗಿರೋದ್ರಿಂದ ಆ ಚಿತ್ರ ಶುರುವಾಗಲಿದೆ. ಆ ನಂತರ ಬೇರೆ ಚಿತ್ರಗಳತ್ತ ಗಮನಹರಿಸುತ್ತೇನೆ’ ಎನ್ನುತ್ತಾರೆ ಉಪೇಂದ್ರ.
ಇನ್ನು, ‘ಲಗಾಮ್ ಚಿತ್ರದ ಬಗ್ಗೆ ಮಾತನಾಡುವ ಅವರು, ‘ಕಳೆದ 10 ದಿನಗಳಿಂದ ಚಿತ್ರೀಕರಣ ಮಾಡುತ್ತಿದ್ದೇವೆ. ಇನ್ನು 10-15 ದಿನಗಳ ಕಾಲ ಮುಂದುವರೆಯಲಿದೆ. ಈ ಚಿತ್ರದಲ್ಲಿ ಒಂದು ರಾಷ್ಟ್ರೀಯ ಸಮಸ್ಯೆಯ ಬಗ್ಗೆ ಮಾತನಾಡುತ್ತಿದ್ದೇವೆ. ಸಾಧ್ಯವಾದಷ್ಟು ಅದಕ್ಕೊಂದು ಪರಿಹಾರ ಕೊಡುವ ಪ್ರಯತ್ನವನ್ನೂ ಮಾಡುತ್ತಿದ್ದೇವೆ. ರಾಷ್ಟ್ರೀಯ ಸಮಸ್ಯೆ ಎಂದರೆ ಚಿತ್ರದಲ್ಲಿ ರಾಜಕೀಯ ಇರಬಹುದು ಎಂದು ಭಾವಿಸುವುದು ಬೇಡ. ಪ್ರತಿಯೊಬ್ಬರನ್ನೂ ಟಚ್ ಮಾಡುವ ಒಂದು ವಿಷಯ ಈ ಚಿತ್ರದಲ್ಲಿದೆ. ನಿರ್ದೇಶಕ ಮಾದೇಶ್ ಅವರು ಬಂದು ಕಥೆ ಹೇಳಿದಾಗ ಬಹಳ ಖುಷಿಯಾಯಿತು. ಆ ಕಥೆಯನ್ನು ಇನ್ನಷ್ಟು ಚೆನ್ನಾಗಿ ಮಾಡಿದ್ದೇವೆ. ಸದ್ಯ ಕನ್ನಡದಲ್ಲಿ ಮಾತ್ರ ಚಿತ್ರ ತಯಾರಾಗುತ್ತಿದೆ. ಆದರೆ, ಎಲ್ಲ ಭಾಷೆಗಳಿಗೂ ಈ ಕಥೆ ಸೂಟ್ ಆಗುತ್ತದೆ. ಮುಂದಿನ ದಿನಗಳಲ್ಲಿ ನೋಡಿಕೊಂಡು, ಚಿತ್ರವನ್ನು ಬೇರೆ ಭಾಷೆಗೆ ಮಾಡುವ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತೇವೆ’ ಎನ್ನುತ್ತಾರೆ.
ಸದ್ಯಕ್ಕೆ ಗನಿ ಮಾತ್ರ: ಈ ಮಧ್ಯೆ, ಅಖಿಲ್ ಅಕ್ಕಿನೇನಿ ಅಭಿನಯದ ‘ಏಜೆಂಟ್’ ಎಂಬ ತೆಲುಗು ಚಿತ್ರದಲ್ಲಿ ಉಪೇಂದ್ರ ನಟಿಸುತ್ತಿದ್ದಾರೆ ಎಂಬ ಸುದ್ದಿಯೊಂದು ಕೆಲವು ದಿನಗಳ ಹಿಂದೆ ಹರಿದಾಡಿತ್ತು. ಇದು ನಿಜವಾ? ಎಂಬ ಪ್ರಶ್ನೆಯನ್ನು ಉಪೇಂದ್ರ ಅವರೆದುರು ಇಟ್ಟರೆ, ಸುಳ್ಳು ಎಂದು ಹೇಳುತ್ತಾರೆ. ವರುಣ್ ತೇಜ್ ಅಭಿನಯದ ‘ಗನಿ’ ಚಿತ್ರದಲ್ಲಿ ಮಾತ್ರ ಅವರು ಬಾಕ್ಸರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಮಿಕ್ಕಂತೆ ಯಾವುದೇ ತೆಲುಗು ಚಿತ್ರವನ್ನೂ ಒಪ್ಪಿಕೊಂಡಿಲ್ಲ ಎಂಬ ಉತ್ತರ ಅವರಿಂದ ಬರುತ್ತದೆ.