ಸ್ಯಾಂಡಲ್‌ವುಡ್‌ಗೆ ಬಾಲಿವುಡ್ ಉಪ್ಪಿ: ರಿಷಿ ಹೊಸ ಚಿತ್ರದಲ್ಲಿ ರಾಷ್ಟ್ರಪ್ರಶಸ್ತಿ ವಿಜೇತ ನಟ

upendra
Published on

ಬೆಂಗಳೂರು: ಹಿಂದಿಯ ‘ಚಾಂದಿನಿ ಬಾರ್’, ‘ಶಿವ’, ‘ಸರ್ಕಾರ್ ರಾಜ್’, ‘ಅನಿಮಲ್’, ‘ದೇವ’, ‘ಜಾಟ್’ ಸೇರಿ ಮರಾಠಿ, ತಮಿಳು ಹಾಗೂ ತೆಲುಗಿನ 50ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿರುವ ಖ್ಯಾತಿ ಉಪೇಂದ್ರ ಲಿಮಾಯೆಗೆ ಸಲ್ಲುತ್ತದೆ. ಮರಾಠಿಯ ‘ಜೋಗ್ವಾ’ ಚಿತ್ರದ ನಟನೆಗೆ ಅವರು ಅತ್ಯುತ್ತಮ ನಟ ರಾಷ್ಟ್ರಪ್ರಶಸ್ತಿ ಪಡೆದುಕೊಂಡಿದ್ದಾರೆ. ಈ ವರ್ಷದ ತೆಲುಗಿನ ‘ಸಂಕ್ರಾಂತಿಕಿ ವಸ್ತುನ್ನಾಂ’ನಲ್ಲಿ ನಟಿಸಿದ್ದ ಅವರು, ಸ್ಯಾಂಡಲ್‌ವುಡ್‌ಗೆ ಡೆಬ್ಯೂ ಮಾಡುವ ಮೂಲಕ ಇದೀಗ ದಕ್ಷಿಣ ಭಾರತದಲ್ಲೂ ಬಿಜಿಯಾಗುತ್ತಿದ್ದಾರೆ. ಹೌದು, ‘ರುದ್ರ ಗರುಡ ಪುರಾಣ’ ಬಳಿಕ ನಟ ರಿಷಿ ಹೊಸ ಪ್ರಾಜೆಕ್ಟ್‌ಗೆ ಸಹಿ ಮಾಡಿರುವ ವಿಚಾರ ಗೊತ್ತೇ ಇದೆ. ಕನ್ನಡದ ‘ಸ್ಟಾಕರ್’ ಖ್ಯಾತಿಯ ಕಿಶೋರ್ ಭಾರ್ಗವ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಇನ್ನೂ ಹೆಸರಿಡದ ಈ ಚಿತ್ರದ ಮುಖ್ಯಪಾತ್ರದಲ್ಲಿ ಉಪೇಂದ್ರ ಲಿಮಾಯೆ ಕಾಣಿಸಿಕೊಳ್ಳಲಿದ್ದಾರೆ. ಈ ಬಗ್ಗೆ ಉಪೇಂದ್ರ, ‘ಕನ್ನಡ ನನ್ನ ತಾಯಿ ಭಾಷೆ ಹಾಗೂ ಪ್ರೀತಿಯ ಭಾಷೆ. ಮೊದಲ ಬಾರಿಗೆ ಕನ್ನಡ ಚಿತ್ರದಲ್ಲಿ ನಟಿಸುತ್ತಿದ್ದೇನೆ. ಕಂಟೆಂಟ್ ಚೆನ್ನಾಗಿದೆ. ಕಿಶೋರ್ ಭಾರ್ಗವ್ ಪ್ರಾಮಿಸಿಂಗ್ ಡೈರೆಕ್ಟರ್. ಒಂದೊಳ್ಳೆ ತಂಡದ ಭಾಗವಾಗಿ ಅದ್ಭುತ ಪಾತ್ರ ಮಾಡುತ್ತಿರುವ ಖುಷಿಯಿದೆ’ ಎಂದು ಸಂತಸ ಹಂಚಿಕೊಂಡಿದ್ದಾರೆ. ಕಿಶೋರ್ ಹಾಗೂ ಸೋಮಶೇಖರ್ ಎನ್.ಕರಡಿ ಕಥೆ, ಶ್ರೀಶ್ ತೋಮರ್ ಛಾಯಾಗ್ರಹಣ, ಸ್ಕಂದ ಕಶ್ಯಪ್ ಸಂಗೀತ, ಸ್ಮಿತಾ ಕುಲಕರ್ಣಿ ಕಲಾ ನಿರ್ದೇಶನ ಚಿತ್ರಕ್ಕಿರಲಿದೆ. ಉಳಿದ ತಾರಾಗಣದ ಆಯ್ಕೆ ಮಾಡಬೇಕಿದೆ ಇನ್ನಷ್ಟೇ ಆಗಬೇಕಿದೆ. ಇದೇ ಅಕ್ಟೋಬರ್ ಎರಡನೇ ವಾರದಿಂದ ಚಿತ್ರತಂಡ ಶೂಟಿಂಗ್ ಆರಂಭಿಸಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net