

ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ( Upendra )ನಿರ್ದೇಶಿಸಿ, ನಟಿಸಿರುವ ಯುಐ ಸಿನಿಮಾ ಯಾವಾಗ ಬಿಡುಗಡೆಯಾಗುತ್ತದೆ ಎಂದು ಕಾದು ಕುಳಿತಿದ್ದ ಅಭಿಮಾನಿಗಳಿಗೆ ಕೊನೆಗೂ ಚಿತ್ರತಂಡ ಗುಡ್ ನ್ಯೂಸ್ ನೀಡಿದೆ. ಡಿಸೆಂಬರ್ 20ಕ್ಕೆ ಬಹುನಿರೀಕ್ಷಿತ ಯುಐ ಸಿನಿಮಾ ಬಿಡುಗಡೆಯಾಗಲಿದೆ.
ಉಪೇಂದ್ರ ಅವರೇ ತಮ್ಮ ಎಕ್ಸ್ ಖಾತೆಯಲ್ಲಿ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಿದ್ದಾರೆ. ಅಷ್ಟೇ ಅಲ್ಲ, ಎಂದಿನಂತೆ ತಮ್ಮದೇ ಸ್ಟೈಲ್ನಲ್ಲಿ ಸಿನಿ ಪ್ರೇಕ್ಷಕರ ತಲೆಗೆ ಹುಳು ಬಿಟ್ಟಿದ್ದಾರೆ. ಇಷ್ಟು ದಿನ ಸಿನಿಮಾ ನೋಡಿ ನೀವು ಹಿಟ್ ಅಥವಾ ಫ್ಲಾಪ್ ಅಂತ ಹೇಳ್ತಾ ಇದ್ರಿ, ಈ ಸಿನಿಮಾ ನಿಮ್ಮನ್ ನೋಡಿ..... ಎಂದು ಬರೆಯುವ ಮೂಲಕ ಸಿನಿಪ್ರೇಕ್ಷಕರಿಗ ಉಪ್ಪಿ ಮತ್ತೊಮ್ಮೆ ಹುಳ ಬಿಟ್ಟು ಕುತೂಹಲ ಕೆರಳಿಸಿದ್ದಾರೆ. ಈಗಾಗಲೇ ಚೀಪ್ ಸಾಂಗ್ ಬಿಟ್ಟು ಕುತೂಹಲ ಮೂಡಿಸಿದ್ದರು. ಇದೀಗ ಉಪ್ಪಿ ಹೇಳಿದ ಈ ಮಾತಿಗೆ ಅರ್ಥ ಗೊತ್ತಾಗಬೇಕಾದರೆ ಸಿನಿಮಾ ಬಿಡುಗಡೆವರೆಗೂ ಕಾಯಲೇಬೇಕಿದೆ.
ಸಿನಿಮಾ ಡಿ.20ಕ್ಕೆ ಬಿಡುಗಡೆಯಾಗಲಿದೆ ಎಂಬ ವಿಚಾರ ತಿಳಿಯುತ್ತಿದ್ದಂತೆ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. ಉಪ್ಪಿ ನಿರ್ದೇಶನದಲ್ಲಿ ಬಹಳ ವರ್ಷಗಳ ನಂತರ ಮತ್ತೊಂದು ಸಿನಿಮಾ ನೋಡುತ್ತಿದ್ದೇವೆ. ನಮಗೆ ಕಾಯಲು ಸಾಧ್ಯವಾಗುತ್ತಿಲ್ಲ. ಈ ಸಿನಿಮಾ ಸೂಪರ್ ಡೂಪರ್ ಹಿಟ್ ಆಗುವುದು ಖಂಡಿತ ಎಂದು ಅಭಿಮಾನಿಗಳು ಕಾಮೆಂಟ್ಗಳನ್ನು ಹರಿಬಿಡುತ್ತಿದ್ದಾರೆ.
ಅಂದಹಾಗೆ ಯುಐ ಸಿನಿಮಾದಿಂದ ಕೊನೆಯದಾಗಿ ಟ್ರೋಲ್ ಸಾಂಗ್ ಬಿಡುಗಡೆಯಾಗಿತ್ತು. 7 ತಿಂಗಳ ಹಿಂದೆ ಈ ಸಾಂಗ್ ಬಿಡುಗಡೆಯಾಗಿ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸಂಚಲನ ಸೃಷ್ಟಿಸಿತ್ತು. ಅಲ್ಲದೆ, ಚಿತ್ರದ ಮೇಲಿನ ನಿರೀಕ್ಷೆಯನ್ನು ಸಹ ದುಪ್ಪಟ್ಟು ಮಾಡಿತ್ತು. ಇದಾದ ಬಳಿಕ ಚಿತ್ರತಂಡದಿಂದ ಯಾವುದೇ ಅಪ್ಡೇಟ್ ಬಂದಿರಲಿಲ್ಲ. ಯಾವಾಗ ಹೊಸ ಅಪ್ಡೇಟ್ ಬರುತ್ತದೆ ಎಂದು ಅಭಿಮಾನಿಗಳು ಕಾದು ಕುಳಿತಿದ್ದರು ಮತ್ತು ಚಿತ್ರತಂಡವನ್ನು ಕೇಳುತ್ತಿದ್ದರು. ಇದರ ನಡುವೆ ಆ. 16ನೇ ತಾರೀಖಿನಂದು ಬಿಗ್ ಅನೌನ್ಸ್ಮೆಂಟ್ ಮಾಡುವುದಾಗಿ ಚಿತ್ರತಂಡ ಹೇಳಿತ್ತು. ಬಳಿಕ ಅಕ್ಟೋಬರ್ ತಿಂಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಹೇಳಿತ್ತು. ಆದರೆ, ಕಾರಣಾಂತರಗಳಿಂದ ಬಿಡುಗಡೆ ಸಾಧ್ಯವಾಗಲಿಲ್ಲ. ಇದೀಗ ಅಧಿಕೃತ ದಿನಾಂಕವನ್ನು ಚಿತ್ರತಂಡ ಘೋಷಣೆ ಮಾಡಿದೆ. ಡಿಸೆಂಬರ್ 20ಕ್ಕೆ ಸಿನಿಮಾ ಬೆಳ್ಳಿತೆರೆಗೆ ಅಪ್ಪಳಿಸಲಿದೆ.
ಅಂದಹಾಗೆ ಯುಐ ಚಿತ್ರದಲ್ಲಿ ಉಪೇಂದ್ರಗೆ ರೀಷ್ಮಾ ನಾಣಯ್ಯ ನಾಯಕಿಯಾಗಿದ್ದಾರೆ. ಲಹರಿ ಫಿಲಂಸ್‌ನ ಮನೋಹರನ್ ಮತ್ತು ವೀನಸ್ ಎಂಟರ್‌ಟೇನರ್ಸ್‌ನ ಕೆ.ಪಿ. ಶ್ರೀಕಾಂತ್ ಜಂಟಿಯಾಗಿ ಈ ಮೆಗಾ ಬಜೆಟ್ ಸಿನಿಮಾ ನಿರ್ಮಿಸಿದ್ದಾರೆ.