'ಲಗಾಮ್​' ಹಾಕಲು ಉಪೇಂದ್ರ ಹೊಡೆದಾಟ ...

Lagaam - Final
Published on

ಬೆಂಗಳೂರು: ಎರಡನೆಯ ಲಾಕ್​ಡೌನ್​ ಮುಗಿಯುತ್ತಿದ್ದಂತೆಯೇ ಮೊದಲಿಗೆ ಬಣ್ಣ ಹಚ್ಚಿದ ಸ್ಟಾರ್​ನಟರ ಪೈಕಿ ಉಪೇಂದ್ರ ಮೊದಲಿಗರು. 'ಲಗಾಮ್​' ಚಿತ್ರಕ್ಕಾಗಿ ಅವರು ಕಳೆದ ಸೋಮವಾರದಿಂದಲೇ ಚಿತ್ರೀಕರಣದಲ್ಲಿ ಭಾಗವಹಿಸುತ್ತಿದ್ದಾರೆ. ಇನ್ನೂ ಮುಂದಿನ 15 ದಿನಗಳ ಕಾಲ 'ಲಗಾಮ್​' ಚಿತ್ರದ ಮೊದಲ ಹಂತದ ಚಿತ್ರೀಕರಣದಲ್ಲಿ ಅವರು ಭಾಗವಹಿಸಲಿದ್ದಾರೆ.

ಇತ್ತೀಚೆಗೆ, ಕೆಂಪಾಪುರ ಅಗ್ರಹಾರದಲ್ಲಿರುವ ವೈಟ್​ ಹೌಸ್​ನಲ್ಲಿ ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು. ಉಪೇಂದ್ರ ಒಂದಿಷ್ಟು ಜನರೊಂದಿಗೆ ಹೊಡೆದಾಡುವ ಪ್ರಮುಖ ದೃಶ್ಯಗಳನ್ನು ಸಾಹಸ ನಿರ್ದೇಶಕ ರವಿ ವರ್ಮಾ ಚಿತ್ರೀಕರಿಸಿಕೊಳ್ಳುತ್ತಿದ್ದರು. ಶಾಟ್​ ಓಕೆ ಆಗುತ್ತಿದ್ದಂತೆಯೇ ಉಪೇಂದ್ರ ಚಿತ್ರ ಮತ್ತು ಅದರಲ್ಲಿನ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು.

'ಈ ಚಿತ್ರದ ಮೂಲಕ ಒಂದು ರಾಷ್ಟ್ರೀಯ ಸಮಸ್ಯೆಯನ್ನು ಹೇಳುವುದಕ್ಕೆ ಹೊರಟಿದ್ದೇವೆ. ಒಂದು ಸಮಸ್ಯೆಯ ಹಿಂದೆ ನಾಯಕ ಬೀಳುತ್ತಾನೆ. ಅವನ ಹಿಂದೆ ನಾಯಕಿ ಬೀಳುತ್ತಾಳೆ. ಹೇಗೆ ನಾವೆಲ್ಲ ಸೇರಿ ಆ ಸಮಸ್ಯೆಗೆ ಲಗಾಮು ಹಾಕುತ್ತೇವೆ ಎನ್ನುವುದು ಚಿತ್ರದ ಕಥೆ. ನಿರ್ದೇಶಕ ಮಾದೇಶ್​ ಬಹಳ ಚೆನ್ನಾಗಿ ಚಿತ್ರ ಮಾಡುತ್ತಿದ್ದಾರೆ. ಕಥೆ ಬಹಳ ಚೆನ್ನಾಗಿದೆ. ಮೂರ್ನಾಲ್ಕು ಭಾಷೆಗಳಿಗೆ ಹೋಗುವ ಶಕ್ತಿ ಈ ಚಿತ್ರಕ್ಕಿದೆ' ಎನ್ನುತ್ತಾರೆ.

ನಿರ್ದೇಶಕ ಮಾದೇಶ್​ ಕೆಲವು ತಿಂಗಳುಗಳ ಹಿಂದೆ ಉಪೇಂದ್ರ ಅವರಿಗೆ ಈ ಕಥೆ ಹೇಳಿದರಂತೆ. ಉಪೇಂದ್ರ ಆ ಕಥೆಯನ್ನು ಇನ್ನಷ್ಟು ಚೆನ್ನಾಗಿ ಮಾಡಿಕೊಟ್ಟರಂತೆ. 'ಸಮಾಜದ ಆಗುಹೋಗುಗಳ ಬಗ್ಗೆ ಈ ಕಥೆ ಇದೆ. ಎಲ್ಲರಿಗೂ ಸಲ್ಲುವಂತಹ ಒಂದು ಕಥೆ ಇದೆ. ಸಾಕಷ್ಟು ಚರ್ಚೆ ಮಾಡಿ ಚಿತ್ರಕಥೆ ಮಾಡಿದ್ದೇವೆ. ಬೆಂಗಳೂರು, ಮೈಸೂರು ಮತ್ತು ಮಂಗಳೂರುಗಳಲ್ಲಿ ಚಿತ್ರೀಕರಣ ನಡೆಯಲಿದೆ. ಅನುಮತಿ ಸಿಕ್ಕರೆ ವಿದೇಶದಲ್ಲಿ ಚಿತ್ರೀಕರಣ ಮಾಡುವ ಯೋಚನೆ ಇದೆ. ಇನ್ನು, ಉಪೇಂದ್ರ ಅವರ ನಟರಾಗಿರುತ್ತಾರೆ. ಯಾವತ್ತೂ ಸೆಟ್​ನಲ್ಲಿ ನಿರ್ದೇಶಕರಾಗಿರುವುದಿಲ್ಲ. ಈ ಪಾತ್ರಕ್ಕೆ ಅವರನ್ನು ಬಿಟ್ಟು, ಬೇರೆ ಯಾರೂ ಸೂಟ್​ ಆಗುವುದಿಲ್ಲ' ಎನ್ನುತ್ತಾರೆ.

'ಲಗಾಮ್​' ಚಿತ್ರದಲ್ಲಿ ಉಪೇಂದ್ರ ಅವರಿಗೆ ನಾಯಕಿಯಾಗಿ ಹರಿಪ್ರಿಯಾ ಇದ್ದು, ಮಿಕ್ಕಂತೆ ಅವಿನಾಶ್​, ಸಾಯಿಕುಮಾರ್​, ರಂಗಾಯಣ ರಘು, ಸಾಧು ಕೋಕಿಲ ಮುಂತಾದವರು ನಟಿಸುತ್ತಿದ್ದಾರೆ. ಬರೀ ನಟನೆಯಷ್ಟೇ ಅಲ್ಲ, ಚಿತ್ರದಲ್ಲಿ ಸಂಗೀತದ ಜವಾಬ್ದಾರಿಯನ್ನು ಸಾಧು ವಹಿಸಿಕೊಂಡಿದ್ದಾರೆ. ರಾಜೇಶ್​ ಕಟ್ಟಾ ಛಾಯಾಗ್ರಹಣ ಮಾಡುತ್ತಿದ್ದು, ಜಿ.ಜಿ. ಫಿಲಂಸ್​ ಲಾಂಛನದಲ್ಲಿ ಎಂ.ಆರ್​. ಗೌಡ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net