ರಾಮೋಜಿ ಫಿಲಂ ಸಿಟಿ ಮತ್ತೆ ಕಬ್ಜ: ಬರ್ತಾರಾ ಕಾಜಲ್​?

Kabja
Published on

ಬೆಂಗಳೂರು: ಆರ್.ಚಂದ್ರು ನಿರ್ದೇಶನ, ‘ರಿಯಲ್ ಸ್ಟಾರ್’ ಉಪೇಂದ್ರ ಅಭಿನಯದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ‘ಕಬ್ಜ’ ಸದ್ಯದಲ್ಲೇ ಹೈದರಾಬಾದ್​ನಲ್ಲೂ ಸೆಟ್​ಗಳನ್ನು ತನ್ನ ಕಬ್ಜಕ್ಕೆ ತೆಗೆದುಕೊಳ್ಳಲಿದೆ. ಅರ್ಥಾತ್, ರಾಮೋಜಿ ಫಿಲಂ ಸಿಟಿಯಲ್ಲೂ ‘ಕಬ್ಜ’ ಚಿತ್ರೀಕರಣಕ್ಕಾಗಿ ಸೆಟ್​ಗಳನ್ನು ಹಾಕಲಾಗುತ್ತಿದ್ದು, ಶೀಘ್ರದಲ್ಲೇ ಚಿತ್ರತಂಡ ಅಲ್ಲಿಗೆ ತೆರಳಿ ಬೀಡು ಬಿಡಲಿದೆ.

ಬೆಂಗಳೂರಿನ ಮಿನರ್ವ ಮಿಲ್ಸ್​ನಲ್ಲಿ ಎಂಟು ಸೆಟ್​ಗಳನ್ನು ಹಾಕಿ ಸುಮಾರು ಒಂದು ತಿಂಗಳ ಕಾಲ ಶೂಟಿಂಗ್ ನಡೆಸಿದ್ದ ನಿರ್ದೇಶಕ ಚಂದ್ರು, ಇದೀಗ ಮುಂದಿನ ಚಿತ್ರೀಕರಣಕ್ಕಾಗಿ ಹೈದರಾಬಾದ್​ನಲ್ಲಿ ಐದು ಸೆಟ್​ಗಳನ್ನು ಹಾಕಿಸುತ್ತಿದ್ದಾರೆ. ‘ರಾಮೋಜಿ ಫಿಲಂ ಸಿಟಿಯಲ್ಲಿ ಫೆ. 15ರಿಂದ 20 ದಿನಗಳ ಕಾಲ ಶೂಟಿಂಗ್ ನಡೆಯಲಿದೆ. ಬಳಿಕ ಚಿತ್ರತಂಡ ಬೆಂಗಳೂರಿಗೆ ಮರಳಲಿದ್ದು, ಮತ್ತೆ ಮಿನರ್ವ ಮಿಲ್ಸ್​ನಲ್ಲಿ ನಾಲ್ಕು ಸೆಟ್​ಗಳಲ್ಲಿ ಚಿತ್ರೀಕರಣ ಕೈಗೊಳ್ಳಲಿದೆ’ ಎಂದು ತಿಳಿಸಿದ್ದಾರೆ ಚಂದ್ರು. ಕೆಲವು ದಿನಗಳ ಹಿಂದೆ ಹೈದರಾಬಾದ್​ನಲ್ಲಿ ಮುಹೂರ್ತ ನಡೆಸಿಕೊಂಡಿದ್ದ ಚಿತ್ರತಂಡ, ಈ ಸಲ ಅಲ್ಲಿ ಭರ್ಜರಿ ತಾರಾಗಣದೊಂದಿಗೆ ಶೂಟಿಂಗ್ ನಡೆಸಲಿದೆ. ‘ಜಗಪತಿಬಾಬು, ಪ್ರದೀಪ್ ರಾವತ್, ಜಾನ್ ಕೊಕೇನ್, ಕೋಟಾ ಶ್ರೀನಿವಾಸ್ ಮುಂತಾದ ಘಟಾನುಘಟಿಗಳು ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ’ ಎನ್ನುತ್ತಾರೆ ನಿರ್ದೇಶಕರು.

ಬರ್ತಾರಾ ಕಾಜಲ್?

ಈ ಸಿನಿಮಾದಲ್ಲಿ ಉಪೇಂದ್ರ ಅವರಿಗೆ ಜೋಡಿಯಾಗಿ ಪರಭಾಷಾ ನಟಿ ಕಾಜಲ್ ಅಗರ್​ವಾಲ್ ಅವರನ್ನು ತರಲು ನಿರ್ದೇಶಕ ಚಂದ್ರು ಯೋಜನೆ ಹಾಕಿಕೊಂಡಿದ್ದಾರೆ. ಆ ಬಗ್ಗೆ ಈಗಾಗಲೇ ಒಂದಷ್ಟು ಮಾತುಕತೆ ನಡೆದಿದ್ದರೂ ಕಾಜಲ್ ಆಗಮನದ ಬಗ್ಗೆ ಚಿತ್ರತಂಡ ಸದ್ಯ ಏನನ್ನೂ ಖಚಿತಪಡಿಸಿಲ್ಲ. ‘ಕಾಜಲ್ ಅವರನ್ನು ‘ಕಬ್ಜ’ಕ್ಕೆ ನಾಯಕಿ ಆಗಿಸಬೇಕು ಎಂಬ ಬಗ್ಗೆ ಪ್ರಯತ್ನಗಳು ನಡೆಯುತ್ತಿವೆ. ಆದರೆ ಡೇಟ್ ಹೊಂದಾಣಿಕೆ ಆಗದ ಕಾರಣ ಇನ್ನೂ ಏನೂ ಅಂತಿಮವಾಗಿಲ್ಲ. ಹೀರೋ ಅಭಿನಯದ ದೃಶ್ಯಗಳನ್ನು ಚಿತ್ರೀಕರಿಸಿಕೊಳ್ಳಲಾಗುತ್ತಿದೆ. ಏಪ್ರಿಲ್ ಸುಮಾರಿಗೆ ಹೀರೋಯಿನ್ ಷೆಡ್ಯೂಲ್ ಆರಂಭವಾಗುವುದರಿಂದ ಅಲ್ಲಿಯವರೆಗೂ ಸಮಯ ಇದೆ’ ಎಂಬುದನ್ನಷ್ಟೇ ಸ್ಪಷ್ಟಪಡಿಸಿದ್ದಾರೆ ಚಂದ್ರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net