Upendra Interview: ಯೂ ಆರ್​ ಗಾಡ್​, ಗಾಡ್​ ಈಸ್​ ಗ್ರೇಟ್​!

ascsc
Published on

| ಹರ್ಷವರ್ಧನ್​ ಬ್ಯಾಡನೂರು

"ಎ' ಚಿತ್ರದಲ್ಲಿ ನಟ, ನಿರ್ದೇಶಕ ಉಪೇಂದ್ರ "ಐ ಯಾಮ್​ ಗಾಡ್​, ಗಾಡ್​ ಈಸ್​ ಗ್ರೇಟ್​' ಎಂದಿದ್ದರು. ಇದೀಗ "ಯೂ ಆರ್​ ಗಾಡ್​, ಗಾಡ್​ ಈಸ್​ ಗ್ರೇಟ್​' ಎಂದು ಪ್ರೇಕ್ಷಕರಿಗೆ ಹೇಳುತ್ತಿದ್ದಾರೆ. ಅದಕ್ಕೆ ಕಾರಣ ಕಳೆದ ಶುಕ್ರವಾರ (ಡಿ. 20) ರಿಲೀಸ್​ ಆದ "ಯುಐ' ಸಿನಿಮಾ. "ಉಪ್ಪಿ 2' ತೆರೆಗೆ ಬಂದ ಒಂಬತ್ತು ವರ್ಷಗಳ ನಂತರ ಉಪೇಂದ್ರ ನಿರ್ದೇಶಿಸಿದ್ದ ಕಾರಣ "ಯುಐ' ಬಗ್ಗೆ ಎಲ್ಲಿಲ್ಲದ ಕುತೂಹಲವಿತ್ತು. ಇದೀಗ ಚಿತ್ರಕ್ಕೆ ಎಲ್ಲೆಡೆ ಉತ್ತಮ ರೆಸ್ಪಾನ್ಸ್​ ಸಿಗುತ್ತಿದ್ದು, ವಿಜಯವಾಣಿ ಮೂಲಕ ಪ್ರೇಕ್ಷಕರಿಗೆ ಧನ್ಯವಾದ ತಿಳಿಸಿದ್ದಾರೆ. "ಪ್ರೇಕ್ಷಕರು ನಮಗಿಂತ ಮೇಲಿರುತ್ತಾರೆ ಅಂತ ನಾನು ಹೇಳುತ್ತಿದ್ದೆ. ಅದನ್ನು ಯಾವಾಗಲೂ ಪ್ರೂವ್​ ಮಾಡುತ್ತಿರುತ್ತಾರೆ. "ಯುಐ'ಗೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಕನ್ನಡ, ತೆಲುಗು ಮಾತ್ರವಲ್ಲ ಬೇರೆ ಭಾಷೆಗಳಲ್ಲೂ ಪ್ರೇಕ್ಷಕರು ಸಿನಿಮಾ ನೋಡಿ ಮೆಚ್ಚಿದ್ದಾರೆ. ಹೀಗಾಗಿ ಹಿಂದಿ ಸೇರಿ ಕೆಲವೆಡೆ ಈ ವಾರದಿಂದ ಮತ್ತಷ್ಟು ಥಿಯೇಟರ್​ಗಳಲ್ಲಿ "ಯುಐ' ರಿಲೀಸ್​ ಆಗಲಿದೆ' ಎಂದು ಮಾಹಿತಿ ನೀಡುತ್ತಾರೆ ಉಪೇಂದ್ರ.

ಪ್ರೇಕ್ಷಕರ ಡೀಕೋಡ್​ ಓದುತ್ತಿದ್ದೇನೆ:

"ಯುಐ' ಚಿತ್ರವನ್ನು ನೋಡಿ ಡೀಕೋಡ್​ ಮಾಡುವಂತೆ ಉಪೇಂದ್ರ ಹೇಳಿದ್ದರು. ಅದರಂತೆ ಪ್ರೇಕ್ಷಕರು ಸಹ ತಮ್ಮದೇ ರೀತಿಯಲ್ಲಿ "ಯುಐ' ಚಿತ್ರವನ್ನು ವ್ಯಾಖ್ಯಾನಿಸುತ್ತಿದ್ದಾರೆ. ಅದರ ಬಗ್ಗೆ ಉಪೇಂದ್ರ, "ಪ್ರೇಕ್ಷಕರು ಡೀಕೋಡ್​ ಮಾಡುತ್ತಿರುವುದನ್ನು ಓದುತ್ತಿದ್ದೇನೆ. ನಾವು ಶೇಕಡಾ 50ರಷ್ಟು ಯೋಚನೆ ಮಾಡಿ ಸಿನಿಮಾ ಮಾಡಿದ್ದರೆ, ಅವರು ನೂರು ಪ್ರತಿಶತಃ ಡೀಕೋಡ್​ ಮಾಡುತ್ತಿದ್ದಾರೆ. ಏನೋ ಒಂದು ಮೆಸೇಜ್​ ನೀಡಬೇಕು ಅಂತಿದ್ದರೆ ಟ್ವೀಟ್​ ಮಾಡಿ ಹೇಳಿಬಿಡಬಹುದು. ಆದರೆ, ಅದು ಪ್ರೇಕ್ಷಕರ ಮೈಂಡ್​ನಲ್ಲಿ ಓಡಾಡಿ, ಅವರೊಳಗೆ ಆ ಸಂದೇಶ ಚಿಗುರೊಡೆದು, ಬೆಳೆದಾಗಲೇ ಉತ್ತಮ. ಈಗಾಗಲೇ ಶೇಕಡಾ 90ರಷ್ಟು ಚಿತ್ರವನ್ನು ಡೀಕೋಡ್​ ಮಾಡಿದ್ದಾರೆ. ನನ್ನ ಬೆನ್​ನಲ್ಲಿ ಏನೋ ಯೋಚಿಸಿ ಒಂದು ವಿಷಯ ಹೇಳಿರಬಹುದು. ಆದರೆ, ಅದೇ ವಿಷಯ ಒಬ್ಬೊಬ್ಬರ ಬೆನ್​ನಲ್ಲಿ ಒಂದೊಂದು ರೀತಿ ವರ್ಕ್​ ಆಗಬಹುದು' ಎನ್ನುತ್ತಾರೆ.

ಇದು ಎಲ್ಲರ ಕಥೆ:

"ಯುಐ' ಸಿನಿಮಾ ಬಗ್ಗೆ ಪ್ರೇಕ್ಷಕರು ಹೆಚ್ಚು ಮಾತನಾಡುತ್ತಿರುವುದರ ಬಗ್ಗೆ ಉಪೇಂದ್ರ, "ಇದು ನನ್ನ ಸಿನಿಮಾ ಅಲ್ಲ ಜನರ ಸಿನಿಮಾ. ನನ್ನದೊಂದು ಪರ್ಸನಲ್​ ಕಥೆ ಇಟ್ಟುಕೊಂಡು ಮಾಡಿದ್ದರೆ, ಅದು ನನ್ನ ಸಿನಿಮಾ ಆಗಿರುತ್ತಿತ್ತು. ಆದರೆ "ಯುಐ', ಯು ಆ್ಯಂಡ್​ ಐ ಅಂದರೆ ನನ್ನ ಮತ್ತು ನಿಮ್ಮ ಎಲ್ಲರ ಕಥೆ. ಹೀಗಾಗಿಯೇ ಜನ ಇಷ್ಟೊಂದು ಮಾತನಾಡುತ್ತಿದ್ದಾರೆ' ಎನ್ನುತ್ತಾರೆ. ""ಯುಐ' ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ ನಿಜ. ಆದರೆ, ಅದೆಲ್ಲ ನನಗೆ ಸಿಗುತ್ತಿರುವ ಕಾಂಪ್ಲಿಮೆಂಟ್​ ಅಲ್ಲ, ಪ್ರೇಕ್ಷಕರು ಅವರಿಗೇ ಅವರೇ ಮಾಡಿಕೊಳ್ಳುತ್ತಿರುವ ಕಾಂಪ್ಲಿಮೆಂಟ್​. ಸೈಕಲಾಜಿಕಲಿ ಚಿತ್ರದಲ್ಲಿ ಅವರನ್ನು ಅವರು ನೋಡಿಕೊಂಡಿರುತ್ತಾರೆ. ಸಿನಿಮಾದಲ್ಲಿ ನಾನೊಬ್ಬ ಏನೂ ಅಲ್ಲ. ಚಿತ್ರದಲ್ಲಿರುವ ಖಾಲಿ ಜಾಗವನ್ನು ಪ್ರೇಕ್ಷಕರೇ ಅವರ ವಿಚಾರಧಾರೆಗಳು, ಅಗಾಧವಾದ ಶಕ್ತಿಯಿಂದ ಒಂದೊಂದು ವಿಷಯ ತುಂಬುತ್ತಿದ್ದಾರೆ. ಅದಕ್ಕೇ ನಾನು ಹೇಳೋದು ಐ ಯಾಮ್​ ಗಾಡ್​ ಅಲ್ಲ ಯೂ ಆರ್​ ಗಾಡ್​ ಗಾಡ್​ ಈಸ್​ ಗ್ರೇಟ್​ ಅಂತ' ಎಂದು ಖುಷಿಯಿಂದ ಪ್ರೇಕ್ಷಕರಿಗೆ ಜಯವನ್ನು ಅರ್ಪಿಸುತ್ತಾರೆ ಉಪೇಂದ್ರ.

ಹೊಸ ರೀತಿಯ ಸಿನಿಮಾ ಮಾಡುತ್ತೇನೆ:

""ಯುಐ'ಗೆ ಸಿಗುತ್ತಿರುವ ಪ್ರೋತ್ಸಾಹ ನನಗೆ ಇನ್ನೂ ಸಿನಿಮಾ ಮಾಡಲು ಪ್ರೋತ್ಸಾಹ ನೀಡುತ್ತಿದೆ' ಎನ್ನುವ ಉಪೇಂದ್ರ, ""ಎ', "ಉಪೇಂದ್ರ' ರೀತಿಯ ಚಿತ್ರ ಮಾಡಿ ಎನ್ನುತ್ತಾರೆ. ಈಗಾಗಲೇ ಅಂತಹ ಸಿನಿಮಾ ಮಾಡಿದ್ದೇನೆ. ಹೀಗಾಗಿಯೇ ಹೊಸ ರೀತಿಯ ಸಿನಿಮಾ ಮಾಡುತ್ತೇನೆ. ಕುಳಿತು ಯೋಚಿಸಿ, ಚರ್ಚಿಸಿ, ನಿರ್ಧರಿಸಿ ಆದಷ್ಟು ಬೇಗ ಹೊಸ ಸಿನಿಮಾ ಬಗ್ಗೆ ಮಾಹಿತಿ ನೀಡುತ್ತೇನೆ' ಎಂದು ಮಾಹಿತಿ ನೀಡುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net